
‘ಬಿಗ್ ಬಾಸ್ ಕನ್ನಡ’ ವಾರಾಂತ್ಯದ ಪಂಚಾಯಿತಿಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಸ್ಪರ್ಧಿ ಲಿಖಿತ್ ಅವರ ನಡೆ ಹಾಗೂ ಆಟದ ವೈಖರಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮನೆಯಲ್ಲಿ ಸರಿಯಾಗಿ ತೊಡಗಿಸಿಕೊಳ್ಳದೆ, ಜವಾಬ್ದಾರಿಯಿಲ್ಲದೆ ವರ್ತಿಸುತ್ತಿರುವ ಲಿಖಿತ್‌ಗೆ ಸುದೀಪ್ ನೇರವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದು, ‘ನೀವು ಈ ಮನೆಯಲ್ಲಿ ಇರಲು ಅರ್ಹರಲ್ಲ’ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.
ಕಿಚ್ಚ ಸುದೀಪ್ ಅವರು ಲಿಖಿತ್ ಅವರ ಉಡಾಫೆಯಾಟ ಹಾಗೂ ನಿಷ್ಕ್ರಿಯತೆಯನ್ನು ಪ್ರಶ್ನಿಸುತ್ತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಎಲ್ಲೂ ಸರಿಯಾದ ಸೂಕ್ತ ಕಾರಣಗಳನ್ನು ನೀಡಲ್ಲ. ತಮಾಷೆಯಾಗಿ ಇರಿ ಅಂದರೆ ಸರ್ಕ್ಯಾಸ್ಟಿಕ್ ಆಗಿ ಮಾತನಾಡುತ್ತೀರಾ. ನಿಮ್ಮನ್ನು ಎಷ್ಟು ಗಂಭೀರವಾಗಿ ಸ್ವೀಕರಿಸಬೇಕು? ಅಷ್ಟು ಒದ್ದಾಡಿ, ಕಷ್ಟಪಟ್ಟು ಈ ಮನೆಗೆ ಬಂದಿದ್ದೀರಲ್ಲ… ಸುಮ್ಮನೆ ನಿಲ್ಲುತ್ತೀರಾ, ನಿಮ್ಮ ಇಷ್ಟ ಬಂದಾಗ ಇರುತ್ತೀರಾ ಅಂದರೆ ಅಲ್ಲಿಗೆ ಯಾಕೆ ಹೋದ್ರಿ? ಬೇರೆಯವರ ಅವಕಾಶವನ್ನು ಕಸಿದುಕೊಂಡಿದ್ದೀರಾ ಅಷ್ಟೇ’ ಎಂದು ಸುದೀಪ್ ಲಿಖಿತ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸುದೀಪ್ ಅವರ ಖಡಕ್ ಪ್ರಶ್ನೆಗಳಿಗೆ ಕಂಗಾಲಾದ ಲಿಖಿತ್, ತಮ್ಮ ವರ್ತನೆಗೆ ಸಮಜಾಯಿಷಿ ನೀಡಲು ಯತ್ನಿಸಿದರು. ತಮಗೆ ವಾದ ಮಾಡಲು ಅಥವಾ ಸನ್ನಿವೇಶಗಳನ್ನು ಎದುರಿಸಲು ಸಾಧ್ಯವಾಗದೆ ತಲೆ ಬ್ಲ್ಯಾಂಕ್ ಆಗುತ್ತದೆ ಎಂದು ಲಿಖಿತ್ ನೀಡಿದ ಸಬೂಬು ಸುದೀಪ್ ಅವರ ಕೋಪವನ್ನು ಮತ್ತಷ್ಟು ಹೆಚ್ಚಿಸಿತು.
ಲಿಖಿತ್ ಅವರ ಈ ಉತ್ತರದಿಂದ ತೃಪ್ತರಾಗದ ಸುದೀಪ್, ಬಿಗ್ ಬಾಸ್ ವೇದಿಕೆಯಲ್ಲೇ ಅವರಿಗೆ ಕಠಿಣ ಮಾತುಗಳಿಂದ ಎಚ್ಚರಿಕೆ ನೀಡಿದರು. ‘ನೀವು ಈ ಮನೆಯಲ್ಲಿ ಇರಲು ಅರ್ಹರಲ್ಲ. ಹೆಂಗಿದ್ದೀರೋ ಹಾಗೇ ಇರಿ’ ಎಂದು ನೇರವಾಗಿಯೇ ಹೇಳುವ ಮೂಲಕ ಲಿಖಿತ್ ಅವರ ಗೇಮ್ ಪ್ಲಾನ್ ಮತ್ತು ಮನಸ್ಥಿತಿಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪುರುಷ ಸ್ಪರ್ಧಿಗಳಿಗೆ ಹೊಡೆದು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಆಸಿಯಾ ನಿರ್ಧಾರ
ಸಾವಿರಾರು ಜನರು ಬಿಗ್ ಬಾಸ್ ಮನೆಗೆ ಹೋಗಲು ಕಾಯುತ್ತಿರುವಾಗ, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಲಿಖಿತ್ ಅವರ ಈ ನಡೆಗೆ ವೀಕ್ಷಕರಿಂದಲೂ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಕಿಚ್ಚನ ಈ ಖಡಕ್ ಎಚ್ಚರಿಕೆಯ ನಂತರವಾದರೂ ಲಿಖಿತ್ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:38 pm, Sat, 3 October 26