ಬಿಗ್​ಬಾಸ್: ಸ್ವರ್ಗ-ನರಕದ ನಡುವೆ ಶುರುವಾಗುತ್ತಿದೆ ಪ್ರೀತಿಯ ಸೇತುವೆ

|

Updated on: Oct 02, 2024 | 10:40 AM

Bigg Boss Kannada: ಬಿಗ್​ಬಾಸ್​ನಲ್ಲಿ ಜಗಳಗಳು ಎಷ್ಟು ಸಾಮಾನ್ಯವೋ ಹಾಗೆಯೇ ಪ್ರೇಮಕತೆಗಳು ಸಹ ಸಾಮಾನ್ಯ. ಈ ಬಾರಿ ಆರಂಭದಲ್ಲಿಯೇ ಒಂದು ಪ್ರೇಮಕತೆ ಶುರುವಾಗುವ ಮುನ್ಸೂಚನೆ ದೊರೆತಿದೆ.

ಬಿಗ್​ಬಾಸ್: ಸ್ವರ್ಗ-ನರಕದ ನಡುವೆ ಶುರುವಾಗುತ್ತಿದೆ ಪ್ರೀತಿಯ ಸೇತುವೆ
Follow us on

ಬಿಗ್​ಬಾಸ್ ಕನ್ನಡ ಸೀಸನ್ 11 ಶುರುವಾಗಿದ್ದು, ಪ್ರಾರಂಭವಾದ ದಿನದಿಂದಲೂ ಜಗಳಗಳೇ ಮುನ್ನೆಲೆಯಲ್ಲಿವೆ. ಬಿಗ್​ಬಾಸ್​ ಮನೆಯಲ್ಲಿ ಜಗಳ ಸಾಮಾನ್ಯ ಸಹ. ಆದರೆ ಜಗಳದ ಜೊತೆಗೆ ಪ್ರೀತಿ-ಪ್ರೇಮವೂ ಸಹ ಸಾಮಾನ್ಯವೇ. ಪ್ರತಿ ಸೀಸನ್​ನಲ್ಲೂ ಯಾವುದಾದರೂ ಒಂದು ಯುವ ಜೋಡಿ ಜಂಟಿಯಾಗುತ್ತದೆ. ಕನಿಷ್ಟ ಪಕ್ಷ ಸೀಸನ್ ಮುಗಿಯುವವರೆಗಾದರೂ ಒಟ್ಟಿಗೆ ಇದ್ದು ಮನೊರಂಜನೆ ನೀಡುತ್ತಾರೆ. ಕೆಲವು ಬಾರಿ ಶೋ ಮುಗಿದ ಬಳಿಕವೂ ಜೊತೆಗಿರುವ ಉದಾಹರಣೆಗಳು ಇವೆ. ಈ ಬಾರಿ ಶೋ ಆರಂಭವಾದ ಎರಡೇ ದಿನಕ್ಕೆ ಬಿಗ್​ಬಾಸ್​ ಮನೆಯಲ್ಲಿ ಲವ್ ಸ್ಟೋರಿಯೊಂದು ಪ್ರಾರಂಭ ಆಗುತ್ತಿರುವ ಸೂಚನೆ ಸಿಕ್ಕಿದೆ.

ಹಿಂದಿನ ಸೀಸನ್​ನಲ್ಲಿ ಮೈಖಲ್-ಇಶಾನಿ, ಸ್ನೇಹಿತ್ ಹಾಗೂ ನಮ್ರತಾ, ಸಂಗೀತಾ ಕಾರ್ತಿಕ್ ನಡುವೆ ಆತ್ಮೀಯತೆ, ಪರಸ್ಪರ ಫ್ಲರ್ಟಿಂಗ್​ಗಳು ನೋಡಲು ಸಿಕ್ಕಿದ್ದವು. ಈ ಬಾರಿಯೂ ಆರಂಭದಲ್ಲಿಯೇ ಪ್ರೇಮಕತೆಯೊಂದು ಶುರುವಾಗುತ್ತಿರುವ ಸೂಚನೆಗಳು ಸಿಕ್ಕಿವೆ. ನರಕವಾಸಿಯಾದ ರಂಜಿತ್ ಹಾಗೂ ಐಶ್ವರ್ಯಾ ನಡುವೆ ಆತ್ಮೀಯ ಬಾಂಡಿಂಗ್ ಒಂದು ಬಿಲ್ಡ್ ಆಗುತ್ತಿರುವುದು ಮನೆಯವರ ಗಮನಕ್ಕೆ ಮತ್ತು ನೋಡುಗರ ಗಮನಕ್ಕೆ ಬರುತ್ತಿದೆ. ಅದಕ್ಕೆ ಕೆಲವು ಸಾಕ್ಷಿಗಳು ಸಹ ನಿನ್ನೆ ಸಿಕ್ಕಿವೆ.

ನಿನ್ನೆ ಬೆಳಿಗ್ಗೆ ಸ್ವರ್ಗವಾಸಿಯಾದ ಐಶ್ವರ್ಯಾ ಸಿಂಧೋಗಿ, ತಿಂಡಿ ತಿನ್ನುತ್ತಾ ನರಕದ ಬಳಿ ಹೋದರು. ಅವರನ್ನು ನೋಡಿದ ರಂಜಿತ್, ವಾವ್ ಎಂದೇನೋ ಪ್ರತಿಕ್ರಿಯೆ ನೀಡಿದರು. ಅದಕ್ಕೆ ಐಶ್ವರ್ಯಾ, ‘ನೀವು ನನ್ನನ್ನು ನೋಡಿ ಹೇಳಿದ್ದಾ? ಅಥವಾ ನನ್ನ ತಟ್ಟೆ ನೋಡಿ ಹೇಳಿದ್ದಾ?’ ಎಂದು ಕೇಳಿದರು. ಅದಕ್ಕೆ ರಂಜಿತ್, ‘ಪ್ಲೇಟ್​ಗಿಂತಲೂ ನೀವೇ ಚೆನ್ನಾಗಿದ್ದೀರ’ ಎಂದರು. ಇದು ಐಶ್ವರ್ಯಾ ಸಣ್ಣಗೆ ನಾಚುವಂತೆ ಮಾಡಿತು. ಬಳಿಕ ಐಶ್ವರ್ಯಾ, ‘ನಿಮಗೆ ನಾನು ಬೇಕಾ, ಪ್ಲೇಟ್ ಬೇಕಾ?’ ಎಂದು ಕೇಳಿದ್ದಾರೆ. ಅದಕ್ಕೆ ರಂಜಿತ್, ‘ನೀವೇ ಬೇಕು’ ಎಂದು ಉತ್ತರಿಸಿದ್ದಾರೆ. ಇದನ್ನು ಕೇಳಿಸಿಕೊಂಡ ಮಾನಸಾ ಓಹ್​ ಎಂದು ಉದ್ಘಾರ ಸಹ ತೆಗೆದರು.

ಇದನ್ನೂ ಓದಿ:‘ಚಿನ್ನದ ಅಂಗಡಿ ಧರಿಸಿ’ ಬಿಗ್​ಬಾಸ್ ಮನೆಗೆ ಹೋದ ಸುರೇಶ್, ಕಾಲೆಳೆದ ಸುದೀಪ್

ಮತ್ತೆ ರಾತ್ರಿ ಸಮಯದಲ್ಲಿ ಐಶ್ವರ್ಯಾ, ನರಕದ ಕಡೆಗೆ ಬಂದಾಗಲೂ ಸಹ ಇದೇ ವಿಷಯ ಚರ್ಚೆ ಆಗಿದೆ. ಅದೇ ಸಮಯದಲ್ಲಿ ಅಲ್ಲಿಗೆ ಬಂದ ಉಗ್ರಂ ಮಂಜು, ಧಮ್ ಇದ್ದರೆ ಇವಳನ್ನು ಮುಟ್ಟು ನೋಡೋಣ ಎಂದು ಸವಾಲು ಹಾಕಿದ್ದಾರೆ, ಆಗ ರಂಜಿತ್ ‘ಮನಸ್ಸು ಮಾಡಿದರೆ ಎತ್ತಾಕೊಂಡು ಹೋಗ್ತೀನಿ’ ಎಂದು ಪ್ರತಿಕ್ರಿಯೆ ಕೊಟ್ಟರು, ಇದನ್ನು ಕೇಳಿದ ಐಶ್ವರ್ಯಾ ಹುಸಿ ಕೋಪ ತೋರುತ್ತಾ ಅಲ್ಲಿಂದ ಎದ್ದು ಹೋದರು.

ಒಟ್ಟಾರೆಯಾಗಿ ಈ ಬಿಗ್​ಬಾಸ್​ನಲ್ಲಿಯೂ ಆರಂಭದಲ್ಲಿಯೇ ಒಂದು ಪ್ರೇಮಾಂಕುರ ಆಗುವ ಸೂಚನೆ ದೊರೆತಿದೆ. ಈ ಪ್ರೇಮಕತೆ ಮುಂದುವರೆಯುತ್ತದೆಯೇ ಅಥವಾ ಹಾದಿ ತಪ್ಪುತ್ತದೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ