
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ಗಗನ್ ಚಿನ್ನಪ್ಪ ಅವರು ವಿವಿಐಪಿ ಆಗಿದ್ದಾರೆ. ಲೂಟಿಕೋರರು ಮತ್ತು ಕಾವಲುಗಾರರು ಎಂಬ ಥೀಮ್ನಲ್ಲಿ ಈ ವಾರದ ಟಾಸ್ಕ್ ನೀಡಲಾಗಿದೆ. ನಾಮಿನೇಟ್ ಆಗಿರುವ ಸೋನಿಕಾ ಗೌಡ, ತಾಂಡವ್ ರಾಮ್, ಆಸಿಯಾ, ಸೌಂದರ್ಯಾ ಶೆಟ್ಟಿ, ಲಕ್ಷ್ಮಿ ಗೌಡ, ಕುಮಾರಿ ಅವರು ಲೂಟಿಕೋರರ ತಂಡದಲ್ಲಿ ಇದ್ದಾರೆ. ಆಟದ ವೇಳೆ ಗಗನ್ ಚಿನ್ನಪ್ಪ ಉಸ್ತುವಾರಿ ವಹಿಸಿದ್ದಾರೆ. ಆದರೆ ಅವರ ಬಗ್ಗೆ ಲೂಟಿಕೋರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಾರದ ಟಾಸ್ಕ್ ಡಿಫರೆಂಟ್ ಆಗಿದೆ. ಕೆಲವು ವಿಶೇಷ ವಸ್ತುಗಳನ್ನು ಇರಿಸಿ ಅದನ್ನು ಕಾಯಲು ಕಾವಲುಗಾರರಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಆ ವಸ್ತುಗಳನ್ನು ಕದಿಯಲು ಲೂಟಿಕೋರರು ಪ್ರಯತ್ನಿಸುತ್ತಿದ್ದಾರೆ. ಈ ಆಟದ ವೇಳೆ ಕೆಲವು ನಿಯಮಗಳ ಉಲ್ಲಂಘನೆ ಆಗುತ್ತಿದೆ. ಅಂಥ ಸಂದರ್ಭದಲ್ಲಿ ಉಸ್ತುವಾರಿ ಗಗನ್ ಚಿನ್ನಪ್ಪ ಅವರು ಮಧ್ಯಸ್ಥಿಕೆ ವಹಿಸುತ್ತಿದ್ದಾರೆ. ಆದರೆ ಅವರು ಸರಿಯಾಗಿ ನಡೆದುಕೊಂಡಿಲ್ಲ ಎಂದು ಟೀಕೆ ಮಾಡಲಾಗಿದೆ.
ಗಾನವಿ, ಯಶಸ್, ಕಿರಣ್, ಪ್ರಶಾಂತ್, ಜಗದೀಶ್, ಧನುಷ್ ಅವರು ಕಾವಲುಗಾರರ ತಂಡದಲ್ಲಿ ಇದ್ದಾರೆ. ಅವರು ಕೂಡ ರೂಲ್ಸ್ ಬ್ರೇಕ್ ಮಾಡುವಂತಿಲ್ಲ. ಆದರೆ ಲೂಟಿಕೋರರ ತಂಡದವರು ನಿಯಮ ಉಲ್ಲಂಘನೆ ಮಾಡಿದಾಗ ಅವರಿಗೆ ಗಗನ್ ಅವರು ಮುಲಾಜಿಲ್ಲದೇ ಶಿಕ್ಷೆ ನೀಡುತ್ತಿದ್ದಾರೆ. ಶಿಕ್ಷೆ ನೀಡುವಾಗ ಇಲ್ಲದೇ ಇರುವ ನಿಯಮಗಳನ್ನು ಅವರು ಸೇರಿಸುತ್ತಿದ್ದಾರೆ ಎಂಬ ಆರೋಪ ಬಂದಿದೆ.
ತಪ್ಪು ಮಾಡಿದ ಸೋನಿಕಾ ಅವರನ್ನು 2 ಗಂಟೆಗಳ ಕಾಲ ಜೈಲಿನಲ್ಲಿ ಇರುವಂತೆ ಗಗನ್ ಚಿನ್ನಪ್ಪ ಆದೇಶಿಸಿದ್ದಾರೆ. ಅದಕ್ಕೆ ಕೂಡ ಲೂಟಿಕೋರರ ತಂಡದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇದೇ ರೀತಿ ನಿಯಮ ಮುರಿಯುವುದು ಮುಂದುವರಿದರೆ ಲೂಟಿಕೋರರ ತಂಡಕ್ಕೆ ಊಟ ಕೊಡುವುದಿಲ್ಲ ಎಂದು ಗಗನ್ ಹೇಳಿದ್ದಾರೆ. ಈ ಮಾತು ಕೇಳಿ ಲೂಟಿಕೋರರಿಗೆ ಕೋಪ ಬಂದಿದೆ.
ಇದನ್ನೂ ಓದಿ: ಬಿಗ್ ಬಾಸ್: ಸ್ನೇಹಿತ ಎಂಬುದನ್ನೂ ಮರೆತು ತಾಂಡವ್ಗೆ ಶಿಕ್ಷೆ ನೀಡಿದ ಗಗನ್ ಚಿನ್ನಪ್ಪ
ಆಟದ ಮಧ್ಯದಲ್ಲಿ ಕಿರಣ್ ಶಾಸ್ತ್ರಿ ಅವರಿಗೆ ಸೀಕ್ರೆಟ್ ಟಾಸ್ಕ್ ನೀಡಲಾಗಿದೆ. ಗಾನವಿ ಮೇಲೆ ಕಳ್ಳತನದ ಆರೋಪ ಹೊರಿಸುವಂತೆ ಟಾಸ್ಕ್ ಕೊಡಲಾಗಿದೆ. ಈ ಪ್ರಯತ್ನದಲ್ಲಿ ಕಿರಣ್ ಶಾಸ್ತ್ರಿ ಅವರು ಮಿತಿಮೀರಿ ಮಾತನಾಡಿದ್ದಾರೆ. ಅದರಿಂದ ಗಾನವಿ ಗರಂ ಆಗಿದ್ದಾರೆ. ಕಿರಣ್ ಮಾತನಾಡಿದ್ದು ತಪ್ಪು ಎಂದು ಯಶಸ್, ಸೌಂದರ್ಯಾ ಮುಂತಾದವರು ಹೇಳಿದ್ದಾರೆ. ವೀಕೆಂಡ್ ಸಂಚಿಕೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:42 pm, Thu, 22 October 26