‘ಬಿಗ್ ಬಾಸ್ ಕನ್ನಡ ಸೀಸನ್ 9’ರ (Bigg Boss Kannada Season 9) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಶನಿವಾರದಿಂದ (ಸೆಪ್ಟೆಂಬರ್ 24) ಬಿಗ್ ಬಾಸ್ ಟಿವಿ ಸೀಸನ್ಗೆ ಚಾಲನೆ ಸಿಗಲಿದೆ. ಕಿಚ್ಚ ಸುದೀಪ್ (Sudeep) ಅವರು ಎಂದಿನ ಹುಮ್ಮಸ್ಸಿನಲ್ಲಿ ಸ್ಪರ್ಧಿಗಳಿಗೆ ಆಹ್ವಾನ ನೀಡಲಿದ್ದಾರೆ. ಈ ಬಾರಿ ಟಿವಿ ಸೀಸನ್ನಲ್ಲಿ ಹಲವು ವಿಶೇಷತೆ ಇರಲಿದೆ. ಆದರೆ, ಬಿಗ್ ಬಾಸ್ ಮನೆಗೆ ಹೆಚ್ಚಿನ ಬದಲಾವಣೆ ಏನನ್ನೂ ಮಾಡುತ್ತಿಲ್ಲ ಎನ್ನಲಾಗಿದೆ. ಕಲರ್ಸ್ ಕನ್ನಡ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಹೊಸ ಫೋಟೋ ಹಂಚಿಕೊಂಡಿದ್ದಾರೆ.
‘ಬಿಗ್ ಬಾಸ್’ ಟಿವಿ ಸೀಸನ್ ಆರಂಭಕ್ಕೂ ಮೊದಲು ಒಟಿಟಿ ಸೀಸನ್ ಆರಂಭಿಸಲಾಗಿತ್ತು. 42 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಹಣಾಹಣಿ ಏರ್ಪಟ್ಟಿತ್ತು. 16 ಸ್ಪರ್ಧಿಗಳ ಪೈಕಿ 4 ಸ್ಪರ್ಧಿಗಳು ಒಟಿಟಿಯಿಂದ ಟಿವಿ ಸೀಸನ್ಗೆ ಎಂಟ್ರಿ ಕೊಟ್ಟಿದ್ದಾರೆ. ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ಶೆಟ್ಟಿ ಅವರು ಟಿವಿ ಸೀಸನ್ಗೆ ಹೋಗುತ್ತಿದ್ದಾರೆ. ಹಳೆಯ ಸೀಸನ್ನ ಸ್ಪರ್ಧಿಗಳಾದ ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್ ಸೇರಿ ಐವರು ಎಂಟ್ರಿ ಕೊಡುತ್ತಿದ್ದಾರೆ. ಈ 9 ಸ್ಪರ್ಧಿಗಳ ಜತೆ ಮತ್ತೆ 9 ಸ್ಪರ್ಧಿಗಳು ನವೀನರು.
ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಫೋಟೋ ಹಂಚಿಕೊಂಡಿದ್ದಾರೆ. ಅವರು ಮನೆಯನ್ನು ನೋಡುತ್ತಿರುವ ರೀತಿಯಲ್ಲಿ ಫೋಟೋ ಇದೆ. ‘ಬಹುತೇಕ ಸಿದ್ಧತೆ ನಡೆದಿದೆ’ ಎಂದು ಪರಮೇಶ್ವರ್ ಅವರು ಇದಕ್ಕೆ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋದಲ್ಲಿ ಮನೆ ಈ ಮೊದಲು ಇದ್ದಂತೇ ಇದೆ. ಇದು ಕೆಲವರಿಗೆ ಬೇಸರ ಮೂಡಿಸಿದೆ.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಕಾಲಿಡುವುದಕ್ಕೂ ಮುನ್ನ ಕೇರಳ ಟ್ರಿಪ್ ಮಾಡಿದ ನಟಿ ಅನುಪಮಾ ಗೌಡ
ಒಟಿಟಿ ಸೀಸನ್ನಿಂದ ಟಿವಿ ಸೀಸನ್ಗೆ ಇರೋದು ಒಂದು ವಾರದ ಗ್ಯಾಪ್ ಮಾತ್ರ. ಈ ಸಂದರ್ಭದಲ್ಲಿ ಸಾಕಷ್ಟು ಬದಲಾವಣೆ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ಹೆಚ್ಚಿನ ಚೇಂಜಸ್ ಮಾಡಿಲ್ಲ ಎನ್ನಲಾಗುತ್ತಿದೆ. ಟಿವಿ ಸೀಸನ್ಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 24ರಂದು ಸಂಜೆ ಆರು ಗಂಟೆಗೆ ಆರಂಭ ಆಗಲಿದೆ. ನಂತರ ನಿತ್ಯ ರಾತ್ರಿ 9.30ಕ್ಕೆ ಈ ರಿಯಾಲಿಟಿ ಶೋ ಪ್ರಸಾರ ಕಾಣಲಿದೆ.