ನಟ ಅಕ್ಷಯ್ ಕುಮಾರ್ (Akshay Kumar) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಾಧ್ಯವಾದಷ್ಟು ಸಮಯವನ್ನು ಅವರು ಕುಟುಂಬದವರ ಜೊತೆ ಕಳೆಯಲು ಇಷ್ಟಪಡುತ್ತಾರೆ. ಫ್ಯಾಮಿಲಿ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡೇ ಅವರು ಸಿನಿಮಾ ಮಾಡುತ್ತಾರೆ. ಈಗ ಅವರ ಹೊಸ ಸಿನಿಮಾ ‘ರಕ್ಷಾ ಬಂಧನ್’ (Raksha Bandhan) ಬಿಡುಗಡೆಗೆ ಸಜ್ಜಾಗಿದೆ. ಅದರ ಸಲುವಾಗಿ ಅವರು ಅನೇಕ ಕಡೆಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಈಗ ಅವರು ‘ಸೂಪರ್ಸ್ಟಾರ್ ಸಿಂಗರ್ 2’ (Superstar Singer 2) ರಿಯಾಲಿಟಿ ಶೋ ವೇದಿಕೆಗೆ ಅತಿಥಿಯಾಗಿ ಹೋಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ಸಖತ್ ಎಮೋಷನಲ್ ಆಗಿ ಕಣ್ಣೀರು ಹಾಕಿದ್ದಾರೆ. ಸಹೋದರಿಯನ್ನು ನೆನಪು ಮಾಡಿಕೊಂಡು ಗಳಗಳನೆ ಅತ್ತಿದ್ದಾರೆ. ಇದರ ಪ್ರೋಮೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಾರಾಂತ್ಯದಲ್ಲಿ ಪೂರ್ತಿ ಎಪಿಸೋಡ್ ನೋಡಲು ಅಕ್ಷಯ್ ಕುಮಾರ್ ಅಭಿಮಾನಿಗಳು ಕಾದಿದ್ದಾರೆ.
‘ರಕ್ಷಾ ಬಂಧನ್’ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗಲಿದೆ. ಹೆಸರೇ ಹೇಳುವಂತೆ ಈ ಸಿನಿಮಾದಲ್ಲಿ ಅಣ್ಣ-ತಂಗಿಯರ ಕಥೆ ಇದೆ. ನಾಲ್ವರು ತಂಗಿಯರನ್ನು ಮದುವೆ ಮಾಡಲು ಕಷ್ಟಪಡುವ ಅಣ್ಣನ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಸೂಪರ್ ಹಿಟ್ ಆಗಿದೆ. ಫ್ಯಾಮಿಲಿ ಪ್ರೇಕ್ಷಕರು ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಳ್ಳುವ ನಿರೀಕ್ಷೆ ಇದೆ.
ಸೋನಿ ಟಿವಿಯಲ್ಲಿ ‘ಸೂಪರ್ಸ್ಟಾರ್ ಸಿಂಗರ್ 2’ ರಿಯಾಲಿಟಿ ಶೋ ಪ್ರಸಾರ ಆಗುತ್ತಿದೆ. ಅಲ್ಕಾ ಯಾಗ್ನಿಕ್, ಹಿಮೇಶ್ ರೇಶಮಿಯಾ, ಜಾವೇದ್ ಅಲಿ ಅವರು ನಿರ್ಣಾಯಕರಾಗಿದ್ದಾರೆ. ‘ಇಂಡಿಯನ್ ಐಡಲ್ 12’ ಖ್ಯಾತಿಯ ಪವನ್ದೀಪ್ ರಾಜನ್, ಅರುಣಿತಾ ಕಂಜಿಲಾಲ್ ಮುಂತಾದವರು ಮೆಂಟರ್ಗಳಾಗಿದ್ದಾರೆ. ಈ ವೇದಿಕೆಯಲ್ಲಿ ಅಕ್ಷಯ್ ಕುಮಾರ್ ಎದುರು ಸ್ಪರ್ಥಿಯೊಬ್ಬರು ಸಹೋದರಿಯ ಕುರಿತ ಗೀತೆಯೊಂದನ್ನು ಹೇಳಿದರು. ಹಿನ್ನೆಲೆಯ ಎಲ್ಇಡಿ ಪರದೆಯಲ್ಲಿ ಅಕ್ಷಯ್ ಕುಮಾರ್ ಮತ್ತು ಅವರ ತಂಗಿ ಅಲ್ಕಾ ಭಾಟಿಯಾ ಫೋಟೋ, ವಿಡಿಯೋಗಳನ್ನು ಬಿತ್ತರ ಮಾಡಲಾಯಿತು. ಅದನ್ನು ನೋಡಿ ಅಕ್ಷಯ್ ಕುಮಾರ್ ತುಂಬ ಎಮೋಷನಲ್ ಆದರು. ಅಳು ತಡೆಯಲಾಗದೇ ಎಲ್ಲರ ಎದುರು ಕಣ್ಣೀರು ಹಾಕಿದರು.
ಈ ಎಪಿಸೋಡ್ ಶನಿವಾರ (ಆಗಸ್ಟ್ 6) ಮತ್ತು ಭಾನುವಾರ (ಆಗಸ್ಟ್ 7) ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ಸೋದರಿ ಬಗ್ಗೆ ಅಕ್ಷಯ್ ಕುಮಾರ್ ಏನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ. ‘ರಕ್ಷಾ ಬಂಧನ್’ ಚಿತ್ರಕ್ಕೆ ಆನಂದ್ ಎಲ್. ರಾಯ್ ನಿರ್ದೇಶನ ಮಾಡಿದ್ದಾರೆ. ಅಕ್ಷಯ್ ಕುಮಾರ್ಗೆ ಜೋಡಿಯಾಗಿ ಭೂಮಿ ಪೆಡ್ನೇಕರ್ ನಟಿಸಿದ್ದಾರೆ.
Published On - 11:15 am, Fri, 5 August 22