ಕಿರುತೆರೆ ನಟಿ ಸಾನ್ಯಾ ಐಯ್ಯರ್ ಅವರ ಬಿಗ್ ಬಾಸ್ (Bigg Boss Kannada Season 9) ಆಟ ಅಂತ್ಯವಾಗಿದೆ. ಆರನೇ ವಾರದಲ್ಲಿ ಅವರು ಎಲಿಮಿನೇಟ್ ಆಗಿದ್ದಾರೆ. ನವೆಂಬರ್ 6ನೇ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಎಲಿಮಿನೇಷನ್ ಘೋಷಿಸಿದರು. ‘ಬಿಗ್ ಬಾಸ್ ಒಟಿಟಿ’ ಸೀಸನ್ನಲ್ಲೂ ಸಾನ್ಯಾ ಐಯ್ಯರ್ ಸ್ಪರ್ಧಿಸಿದ್ದರು. ಅಲ್ಲಿ ಫಿನಾಲೆವರೆಗೂ ಉಳಿದುಕೊಂಡಿದ್ದ ಅವರಿಗೆ ಟಿವಿ ಸೀಸನ್ನಲ್ಲಿ (BBK9) ಭಾಗವಹಿಸುವ ಅವಕಾಶ ಸಿಕ್ಕಿತ್ತು. ಆದರೆ ಟ್ರೋಫಿ ಗೆಲ್ಲುವ ಅವರ ಕನಸು ಭಗ್ನ ಆಗಿದೆ. ಈ ವಾರ ಸಾನ್ಯಾ ಐಯ್ಯರ್ (Sanya Iyer) ಅವರು ಡಲ್ ಆಗಿದ್ದರು. ಟಾಸ್ಕ್ ವಿಚಾರದಲ್ಲಿ ಅವರು ಹಿಂದೆ ಬಿದ್ದರು. ಹಾಗಾಗಿ ಅವರಿಗೆ ವೀಕ್ಷಕರಿಂದ ಹೆಚ್ಚು ವೋಟ್ ಬಂದಿಲ್ಲ.
ರೂಪೇಶ್ ಶೆಟ್ಟಿ ಜೊತೆ ಸಾನ್ಯಾ ಐಯ್ಯರ್ ಅವರು ಹೆಚ್ಚು ಕ್ಲೋಸ್ ಆಗಿದ್ದರು. ಸದಾ ಕಾಲ ಅವರಿಬ್ಬರು ಹೆಚ್ಚಾಗಿ ಜೊತೆಯಲ್ಲಿ ಇರುತ್ತಿದ್ದರು. ಇಬ್ಬರ ನಡುವೆ ಸಿಕ್ಕಾಪಟ್ಟೆ ಆತ್ಮೀಯತೆ ಬೆಳೆದಿತ್ತು. ಹಾಗಾಗಿ ಸಾನ್ಯಾ ಐಯ್ಯರ್ ಎಲಿಮಿನೇಟ್ ಆದಾಗ ರೂಪೇಶ್ ಶೆಟ್ಟಿ ಸಖತ್ ಭಾವುಕರಾದರು. ಎಲ್ಲರ ಎದುರಲ್ಲೂ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರನ್ನು ಎಲ್ಲರೂ ಸಮಾಧಾನ ಮಾಡಿದ್ದಾರೆ. ದೊಡ್ಮನೆಯಿಂದ ಹೊರಡುವಾಗ ಸಾನ್ಯಾ ಐಯ್ಯರ್ ಅವರು ರೂಪೇಶ್ ಶೆಟ್ಟಿಗೆ ಒಂದು ಉಂಗುರು ನೀಡಿ ಬಂದಿದ್ದಾರೆ. ‘ನಾನು ಹೊರಗೆ ಬರುವವರೆಗೂ ನೀನು ಬದಲಾಗಬೇಡ’ ಎಂದು ರೂಪೇಶ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.
ಕಿರುತೆರೆಯಿಂದ ಬಂದ ಸಾನ್ಯಾ ಐಯ್ಯರ್ ಅವರು ‘ಪುಟ್ಟಗೌರಿ ಮದುವೆ’ ಧಾರಾವಾಹಿಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಬಿಗ್ ಬಾಸ್ ವೇದಿಕೆಗೆ ಕಾಲಿಟ್ಟ ಬಳಿಕ ಅವರ ಚಾರ್ಮ್ ಹೆಚ್ಚಿತು. ಅವರು 6ನೇ ವಾರದಲ್ಲೇ ಔಟ್ ಆಗುತ್ತಾರೆ ಎಂದು ಬಹುತೇಕರು ಊಹಿಸಿರಲಿಲ್ಲ. ಕೊನೆಗೂ ನಿರೀಕ್ಷಿತ ಮಟ್ಟದಲ್ಲಿ ವೋಟ್ ಪಡೆಯಲು ಸಾಧ್ಯವಾಗದೇ ಅವರು ಎಲಿಮಿನೇಟ್ ಆಗಿದ್ದಾರೆ. ಕೊನೇ ಹಂತದಲ್ಲಿ ಪ್ರಶಾಂತ್ ಸಂಬರ್ಗಿ ಅವರು ಎಲಿಮಿನೇಷನ್ನಿಂದ ಸೇಫ್ ಆಗಿದ್ದಾರೆ.
ರೂಪೇಶ್ ಶೆಟ್ಟಿ ಜೊತೆಗಿನ ಅತಿಯಾದ ಸ್ನೇಹದಿಂದಾಗಿ ಸಾನ್ಯಾ ಐಯ್ಯರ್ ಅವರ ಆಟಕ್ಕೆ ತೊಂದರೆ ಆಗಿದೆ ಎಂಬ ಅಭಿಪ್ರಾಯ ಕೆಲವರದ್ದು. ‘ಆದರೆ ನನಗೆ ರೂಪೇಶ್ ಜೊತೆಗಿನ ಒಡನಾಟದಿಂದ ಎಂದೂ ಸಮಸ್ಯೆ ಆಗಿಲ್ಲ. ಎಲ್ಲವೂ ನನಗೆ ಪಾಸಿಟಿವ್ ಆಗಿದೆ’ ಎಂದು ಸುದೀಪ್ ಎದುರಲ್ಲಿ ಸಾನ್ಯಾ ಐಯ್ಯರ್ ಹೇಳಿದ್ದಾರೆ.
ಕಿಚ್ಚನ ಚಪ್ಪಾಳೆ ಪಡೆದ ವಿನೋದ್ ಗೊಬ್ಬರಗಾಲ:
ಈ ವಾರ ಕಿಚ್ಚ ಸುದೀಪ್ ಅವರ ಮೆಚ್ಚುಗೆಯನ್ನು ವಿನೋದ್ ಗೊಬ್ಬರಗಾಲ ಪಡೆದುಕೊಂಡಿದ್ದಾರೆ. ಆರೋಗ್ಯ ಕೈ ಕೊಟ್ಟರೂ ಕೂಡ ಬೇಗ ಚೇತರಿಸಿಕೊಂಡು, 6ನೇ ವಾರದ ಎಲ್ಲ ಟಾಸ್ಕ್ನಲ್ಲಿ ಚೆನ್ನಾಗಿ ಆಡಿದ ಅವರು ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:06 pm, Sun, 6 November 22