ಕನ್ನಡದ ಕಿರುತೆರೆಯ ಪ್ರೇಕ್ಷಕರಿಗೆ ಬಗೆಬಗೆಯ ಮನರಂಜನೆ ನೀಡಿರುವ ‘ಕಲರ್ಸ್ ಕನ್ನಡ’ ವಾಹಿನಿ ಈಗ ಮತ್ತೆ ‘ಸವಿರುಚಿ’ (Saviruchi) ಕಾರ್ಯಕ್ರಮವನ್ನು ಆರಂಭಿಸಲು ಮುಂದಾಗಿದೆ. ಈ ಜನಪ್ರಿಯ ಅಡುಗೆ ಕಾರ್ಯಕ್ರಮಕ್ಕೆ ದೊಡ್ಡ ಪ್ರೇಕ್ಷಕವರ್ಗವಿದೆ. ಈ ವರ್ಷದ ಯುಗಾದಿ (Udagi 2024) ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ‘ಸವಿರುಚಿ’ ಕಾರ್ಯಕ್ರಮದ ಹೊಸ ಎಪಿಸೋಡ್ಗಳು ಬಿತ್ತರ ಆಗಲಿವೆ ಎಂದು ಕಲರ್ಸ್ ಕನ್ನಡ (Colors Kannada) ವಾಹಿನಿ ತಿಳಿಸಿದೆ. ಈ ಶೋನಲ್ಲಿ ‘ಬೆಳ್ಳುಳ್ಳಿ ಕಬಾಬ್’ ಖ್ಯಾತಿಯ ಚಂದ್ರು ಕೂಡ ಇರಲಿದ್ದಾರೆ ಎಂಬುದು ವಿಶೇಷ. ಈ ಶೋ ಯಾವಾಗ ಪ್ರಸಾರ ಆಗಲಿದೆ? ಏನೆಲ್ಲ ಹೊಸತನ ಇರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ..
‘ಸವಿರುಚಿ’ ಕಾರ್ಯಕ್ರಮ ಏಪ್ರಿಲ್ 9ರಿಂದ ಪ್ರಸಾರ ಆರಂಭಿಸಲಿದೆ. ಈ ಹೊಸ ಆವೃತ್ತಿಯನ್ನು ವೀಕ್ಷಕರು ಸೋಮವಾರದಿಂದ ಶನಿವಾರದ ತನಕ ಪ್ರತಿ ಮಧ್ಯಾಹ್ನ 12 ಗಂಟೆಗೆ ವೀಕ್ಷಿಸಬಹುದು. ಈ ಬಾರಿ ಒಂದಷ್ಟು ಹೊಸ ಅಂಶಗಳು ಇರಲಿವೆ ಎನ್ನುವ ಮೂಲಕ ನಿರೀಕ್ಷೆ ಹೆಚ್ಚಿಸಲಾಗಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಬರುವ ಪಾಕಪ್ರವೀಣರು ಈ ಶೋನಲ್ಲಿ ಭಾಗವಹಿಸುತ್ತಾರೆ. ‘ಸವಿರುಚಿ’ ಕಾರ್ಯಕ್ರಮದಲ್ಲಿ ಕೇವಲ ಅಡುಗೆ ಮಾಡುವುದು ಮಾತ್ರವಲ್ಲದೇ ಆಹಾರದ ಪೌಷ್ಟಿಕತೆ ಬಗ್ಗೆ ತಜ್ಞರ ಅಭಿಪ್ರಾಯ ಕೂಡ ಇರಲಿದೆ. ಈ ಎಲ್ಲ ಕಾರಣಗಳಿಂದಾಗಿ ‘ಸವಿರುಚಿ’ ಶೋ ವಿಶೇಷ ಎನಿಸಿಕೊಳ್ಳಲಿದೆ.
ರಾಜ್ಯದ ಹಲವು ಪ್ರದೇಶಗಳಿಗೆ ತೆರಳಿ ಆಯಾ ಭಾಗದ ಸಾಂಪ್ರದಾಯಿಕ ಖಾದ್ಯಗಳನ್ನು ವೀಕ್ಷಕರಿಗೆ ಪರಿಚಯಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ಕಾರಣದಿಂದ ‘ಸವಿರುಚಿ’ ಕಾರ್ಯಕ್ರಮವು ವೀಕ್ಷಕರಿಗೆ ಇಷ್ಟ ಆಗಲಿದೆ. ಯುಗಾದಿ ಹಬ್ಬದ ದಿನವೇ ನೂತನ ಸೀಸನ್ ಆರಂಭ ಆಗಲಿದೆ.‘ಕಲರ್ಸ್ ಕನ್ನಡ’ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಅವರು ಈ ಶೋ ಬಗ್ಗೆ ಮಾತನಾಡಿದ್ದಾರೆ. ‘ಹಬ್ಬ ಎಂದರೆ ಫ್ಯಾಮಿಲಿಯ ಎಲ್ಲರೂ ಜೊತೆಯಾಗಿ ಸೇರಿ ರುಚಿರುಚಿಯಾದ ಅಡುಗೆಯನ್ನು ಸವಿಯುವುದು. ಈ ಬಾರಿ ಯುಗಾದಿ ಹಬ್ಬದ ಸಂಭ್ರಮವನ್ನು ಸವಿರುಚಿ ಹೊಸ ಸೀಸನ್ ಮತ್ತಷ್ಟು ರಸವತ್ತಾಗಿಸುತ್ತದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಟಿಆರ್ಪಿ ರೇಸ್ನಲ್ಲಿ ಈ ಧಾರಾವಾಹಿಗಳ ಮಧ್ಯೆ ಇದೆ ಭರ್ಜರಿ ಸ್ಪರ್ಧೆ; ಇಲ್ಲಿದೆ ಟಾಪ್ ಐದು ಸೀರಿಯಲ್
‘ನಮ್ಮ ವಾಹಿನಿಯ ವೀಕ್ಷಕರೆಲ್ಲರೂ ನಮ್ಮ ಕುಟುಂಬದವರಿದ್ದಂತೆ. ಅವರಿಗೆಲ್ಲ ಯುಗಾದಿ ಹಬ್ಬದ ಶುಭ ಹಾರೈಸುತ್ತಾ ಉಡುಗೊರೆಯಾಗಿ ‘ಸವಿರುಚಿ’ ಹೊಸ ಆವೃತ್ತಿಯನ್ನು ನೀಡುತ್ತಿದ್ದೇವೆ’ ಎಂದು ಪ್ರಶಾಂತ್ ನಾಯಕ್ ಹೇಳಿದ್ದಾರೆ. ಜನಪ್ರಿಯ ‘ನನ್ನಮ್ಮ ಸೂಪರ್ ಸ್ಟಾರ್’ ಶೋ ಖ್ಯಾತಿಯ ಜಾಹ್ನವಿ ಅವರು ಸವಿರುಚಿ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಬೆಳ್ಳುಳ್ಳಿ ಕಬಾಬ್ ವಿಡಿಯೋ ಮೂಲಕ ಸಖತ್ ವೈರಲ್ ಆಗಿರುವ ಚಂದ್ರು ಅವರು ಸಹ ಈ ಶೋನಲ್ಲಿ ಇರುವುದರಿಂದ ಮನರಂಜನೆ ಹೆಚ್ಚಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.