ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅವರಿಗೆ ಇಂದು (ಜೂ.22) ಹುಟ್ಟುಹಬ್ಬ. ಅವರು 47ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಚಿತ್ರರಂಗಕ್ಕೆ ಬಂದು ಮೂರು ದಶಕ ಕಳೆದರೂ, ಇಂದಿಗೂ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ವಿಜಯ್. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ವಿಜಯ್ ಕೂಡ ಇದ್ದಾರೆ. ಅವರ ಬಳಿ ಬಹುಕೋಟಿ ರೂ. ಬೆಲೆಯ ಹಲವಾರು ಕಾರುಗಳಿವೆ.
ದಳಪತಿ ವಿಜಯ್ ಅವರು 410 ಕೋಟಿ ರೂ. ಆಸ್ತಿಯ ಒಡೆಯ ಎನ್ನಲಾಗಿದೆ. ಇದು ಅವರ ನೆಟ್ ವರ್ತ್. ಪ್ರತಿ ಸಿನಿಮಾಗೂ ಅವರು ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಾರೆ. ಅದರಲ್ಲೂ 2019ರಿಂದ ಈಚೆಗೆ ಅವರ ಚಾರ್ಮ್ ಹೆಚ್ಚಿದೆ. ಅವರ ವಾರ್ಷಿಕ ಆದಾಯ 100ರಿಂದ 120 ಕೋಟಿ ಆಗಿದೆ ಎಂಬ ಮಾಹಿತಿ ಇದೆ.
ಸಿನಿಮಾಗಳಿಂದ ಮಾತ್ರವಲ್ಲದೆ ಅನೇಕ ಕಂಪನಿಗಳ ಜಾಹೀರಾತುಗಳಲ್ಲೂ ನಟಿಸುವ ಮೂಲಕವೂ ವಿಜಯ್ ಹಣ ಸಂಪಾದಿಸುತ್ತಾರೆ. ಪ್ರತಿ ವರ್ಷ ಜಾಹೀರಾತುಗಳಿಂದಲೇ ಅವರಿಗೆ ಅಂದಾಜು 10 ಕೋಟಿ ರೂ. ಸಿಗುತ್ತದೆ. ಕೊಕಕೋಲಾ, ಚೆನ್ನೈ ಸೂಪರ್ ಕಿಂಗ್ಸ್ ಮುಂತಾದವುಗಳಿಗೆ ಅವರು ರಾಯಭಾರಿ ಆಗಿದ್ದಾರೆ.
ವಿಜಯ್ಗೆ ಕಾರುಗಳ ಬಗ್ಗೆ ಅಪಾರ ಕ್ರೇಜ್ ಇದೆ. ಅವರ ಕಲೆಕ್ಷನ್ನಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಅಂದಾಜು 6 ಕೋಟಿ ರೂ. ಬೆಲೆ ಬಾಳುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಅವರ ಮನೆಯಲ್ಲಿದೆ. ಜೊತೆಗೆ 1.30 ಕೋಟಿ ಬೆಲೆಯ ಆಡಿ ಎ8, 75 ಲಕ್ಷ ಬೆಲೆ ಬಿಎಂಡಬ್ಲ್ಯೂ, 90 ಲಕ್ಷದ ಬಿಎಂಡಬ್ಲ್ಯೂ ಎಕ್ಸ್6, 35 ಲಕ್ಷ ಬೆಲೆ ಬಾಳುವ ಮಿನಿ ಕೂಪರ್ ಮುಂತಾದ ಕಾರುಗಳನ್ನು ವಿಜಯ್ ಹೊಂದಿದ್ದಾರೆ.
ಪ್ರಸ್ತುತ ವಿಜಯ್ ಅವರು ತಮ್ಮ 65ನೇ ಸಿನಿಮಾದತ್ತ ಗಮನ ಹರಿಸಿದ್ದಾರೆ. ಈ ಚಿತ್ರಕ್ಕೆ ಬೀಸ್ಟ್ ಎಂದು ಹೆಸರು ಇಡಲಾಗಿದ್ದು, ಅವರ ಬರ್ತ್ಡೇ ಪ್ರಯುಕ್ತ ಈ ಸಿನಿಮಾದ ಫಸ್ಟ್ಲುಕ್ ಬಿಡುಗಡೆ ಆಗಿದೆ. ಈ ಚಿತ್ರಕ್ಕಾಗಿ ವಿಜಯ್ ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಇದನ್ನೂ ಓದಿ:
Happy Birthday Vijay: ದಳಪತಿ ವಿಜಯ್ ಹುಟ್ಟುಹಬ್ಬ; ನೋಡಲೇಬೇಕಾದ 5 ಸಿನಿಮಾಗಳು ಯಾವವು?
‘ಬೀಸ್ಟ್’ ಅವತಾರದಲ್ಲಿ ದಳಪತಿ ವಿಜಯ್; ಹೊಸ ಲುಕ್ ನೋಡಿ ಫ್ಯಾನ್ಸ್ ಫಿದಾ