
ನಟ ದಳಪತಿ ವಿಜಯ್ (Thalapathy Vijay) ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಪ್ರತಿ ಸಿನಿಮಾ ರೀಲೀಸ್ ಆಗುವಾಗಲೂ ಕ್ರೇಜ್ ಜೋರಾಗಿರುತ್ತದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ದಳಪತಿ ವಿಜಯ್ ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅವರು ಬಹುನಿರೀಕ್ಷಿತ ‘ಲಿಯೋ’ ಸಿನಿಮಾದ (Leo Movie) ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗೆ ಬಹುಕೋಟಿ ರೂಪಾಯಿ ಬಂಡವಾಳ ಹೂಡಲಾಗುತ್ತಿದೆ. ಅನೇಕ ಸ್ಟಾರ್ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು ‘ಲಿಯೋ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಜನರಿಗೆ ಎಷ್ಟು ಕ್ರೇಜ್ ಇದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿ ಆಗಿದೆ. ಕೇರಳದಲ್ಲಿ ಇರುವ ದಳಪತಿ ವಿಜಯ್ ಅಭಿಮಾನಿಗಳು ನಿರ್ದೇಶಕ ಲೋಕೇಶ್ ಕನಗರಾಜ್ಗೆ ಬಹಿರಂಗ ಪತ್ರ ಬರೆದಿದ್ದಾರೆ. ಆ ಮೂಲಕ ಒಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಕೇರಳದಲ್ಲಿ ದಳಪತಿ ವಿಜಯ್ ಅವರನ್ನು ಇಷ್ಟಪಡುವ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡಬೇಕು ಎಂಬುದು ಅಲ್ಲಿನ ಫ್ಯಾನ್ಸ್ ಆಸೆ. ಹಾಗಾಗಿ ದಳಪತಿ ವಿಜಯ್ ಅವರು ಕೇರಳಕ್ಕೆ ಬರಬೇಕು ಎಂದು ಅವರೆಲ್ಲರೂ ಬಯಸುತ್ತಿದ್ದಾರೆ. ಅದಕ್ಕಾಗಿ ‘ಲಿಯೋ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಕೇರಳದಲ್ಲೇ ನಡೆಯಲಿ ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಬಹಿರಂಗ ಪತ್ರದಲ್ಲಿ ಈ ವಿಚಾರ ಪ್ರಸ್ತಾಪ ಆಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಸುನಾಮಿ ಎಬ್ಬಿಸಿದ ದಳಪತಿ ವಿಜಯ್; ಒಂದೇ ದಿನದಲ್ಲಿ ಮೋಡಿ ಮಾಡಿದ ನಟ
‘ನಾವೆಲ್ಲರೂ ಲಿಯೋ ಸಿನಿಮಾಗಾಗಿ ಕಾಯುತ್ತಿದ್ದೇವೆ. ಕೇರಳದಲ್ಲಿ ನೀವು ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಮಾಡಿದರೆ ಚೆನ್ನಾಗಿರುತ್ತದೆ. ವಿಜಯ್ ಅವರು ತುಂಬ ಬ್ಯುಸಿ ಆಗಿರುವ ಕಲಾವಿದ ಎಂಬುದು ನಮಗೆ ತಿಳಿದಿದೆ. ಆದರೂ ಕೂಡ ಅವರು ಕೇರಳಕ್ಕೆ ಬಂದು ಪ್ರೀ-ರಿಲೀಸ್ ಇವೆಂಟ್ನಲ್ಲಿ ಭಾಗವಹಿಸಿದರೆ ನಮಗೆಲ್ಲ ಸ್ಮರಣೀಯ ದಿನವಾಗಲಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Trisha: ದಳಪತಿ ವಿಜಯ್ ಜತೆಗಿನ ‘ಲಿಯೋ’ ಚಿತ್ರದ ಸೆಟ್ನಿಂದ ತ್ರಿಷಾ ವಾಪಸ್ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ
‘ನಿಮಗೆ ಈಗಾಗಲೇ ತಿಳಿದಿರುವಂತೆ ಕೇರಳದಲ್ಲಿ ದಳಪತಿ ವಿಜಯ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ನೇರವಾಗಿ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾದಿದ್ದಾರೆ. ನಮ್ಮ ಮನವಿಯನ್ನು ಪರಿಗಣಿಸಿ ನೀವು ಕೇರಳದಲ್ಲಿ ಪ್ರೀ-ರಿಲೀಸ್ ಇವೆಂಟ್ ಆಯೋಜನೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ. ಆ ಕಾರ್ಯಕ್ರಮ ದೊಡ್ಡ ಯಶಸ್ಸು ಕಾಣಲಿದೆ ಅಂತ ನಾವು ನಿಮಗೆ ಭರವಸೆ ನೀಡುತ್ತೇವೆ. ವೇದಿಕೆ ಮೇಲೆ ದಳಪತಿ ವಿಜಯ್ ಅವರ ಮೋಡಿಯನ್ನು ನೋಡಲು ಕೇರಳದ ಅಭಿಮಾನಿಗಳಿಗೆ ಒಳ್ಳೆಯ ಅವಕಾಶ ಸಿಕ್ಕಂತೆ ಆಗುತ್ತೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.
‘ಬಿಡುವು ಮಾಡಿಕೊಂಡು ಈ ಪತ್ರ ಓದಿದ್ದಕ್ಕೆ ಧನ್ಯವಾದಗಳು. ನಿಮ್ಮಿಂದ ಉತ್ತರ ನಿರೀಕ್ಷಿಸಿದ್ದೇವೆ’ ಎಂದು ಅಭಿಮಾನಿಗಳು ಪತ್ರವನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೆ ‘ಲಿಯೋ’ ಚಿತ್ರತಂಡದ ಕಡೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕು. ಅಕ್ಟೋಬರ್ 19ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.