
ತಮಿಳಿನ ಸೂಪರ್ ಸ್ಟಾರ ನಟ ದಳಪತಿ ವಿಜಯ್ (Thalapathy Vijay) ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ‘ಜನ ನಾಯಗನ್’ ತಮ್ಮ ಕೊನೆಯ ಸಿನಿಮಾ ಎಂದು ಈಗಾಗಲೇ ಘೋಷಿಸಿದ್ದಾರೆ. ಇದೇ ಕಾರಣಕ್ಕೆ ‘ಜನ ನಾಯಗನ್’ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇದೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಸಿನಿಮಾದ ಟ್ರೈಲರ್ ಇಂದು (ಜನವರಿ 03) ಬಿಡುಗಡೆ ಆಗಿದೆ. ‘ಜನ ನಾಯಗನ್’ ಸಿನಿಮಾ ತೆಲುಗು ಸಿನಿಮಾ ಒಂದರ ರೀಮೇಕ್ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಟ್ರೈಲರ್ನಲ್ಲಿ ಆ ಪ್ರಶ್ನೆಗೆ ಉತ್ತರ ದೊರೆತಿದೆ.
ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಟ್ರೈಲರ್, ವಿಜಯ್ ಅವರ ಈ ಹಿಂದಿನ ಸಿನಿಮಾಗಳ ಟೆಂಪ್ಲೆಟ್ನಲ್ಲಿಯೇ ಇದೆ. ಭರಪೂರ ಆಕ್ಷನ್, ಸ್ಲೋ ಮೋಷನ್ ವಾಕ್, ಎದುರು ನಿಂತಿರುವ ಪಾತ್ರಗಳಿಗಲ್ಲದೆ, ಅಭಿಮಾನಿಗಳಿಗಾಗಿ ಡೈಲಾಗ್ಗಳು, ಕೆಲವು ಹಾಸ್ಯ ದೃಶ್ಯಗಳು, ನಾಯಕಿಯೊಂದಿಗಿನ ಹಾಡಿನ ತುಣುಕು, ವಿನಾಕರಾಣ ಹಿಂಸೆಗಿಳಿವ ಬಾಲಿವುಡ್ನಿಂದ ತಂದ ವಿಲನ್ ಹೀಗೆ ಎಲ್ಲವೂ ‘ಜನ ನಾಯಗನ್’ ಸಿನಿಮಾದ ಟ್ರೈಲರ್ನಲ್ಲಿಯೂ ಇದೆ.
‘ಜನ ನಾಯಗನ್’ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಎಂಬ ಸುದ್ದಿ ಆರಂಭದಿಂದಲೂ ಹರಿದಾಡುತ್ತಿತ್ತು, ಸಿನಿಮಾದ ನಿರ್ದೇಶಕ ಎಚ್ ವಿನೋದ್, ‘ಇದು ರಿಮೇಕ್ ಎಂದು ಹೇಳಲಾಗದು, ಸಿನಿಮಾ ಬಿಡುಗಡೆ ಆದ ಮೇಲೆ ನಿಮಗೇ ಗೊತ್ತಾಗುತ್ತದೆ’ ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದರು. ಇದೀಗ ಟ್ರೈಲರ್ ನೋಡಿದವರಿಗೆ ಇದು ‘ಭಗವಂತ ಕೇಸರಿ’ ಸಿನಿಮಾದ್ದೇ ರೀಮೇಕ್ ಎಂಬುದು ಖಾತ್ರಿ ಆಗಿದೆ.
‘ಭಗವಂತ ಕೇಸರಿ’ ಸಿನಿಮಾನಲ್ಲಿ ಬಾಲಕೃಷ್ಣ ತಮ್ಮ ಸಾಕುಮಗಳನ್ನು ಸೈನ್ಯಕ್ಕೆ ಸೇರಿಸುವ ಪ್ರಯತ್ನದಲ್ಲಿರುತ್ತಾರೆ, ಅದಕ್ಕೆ ಕಾರಣವೂ ಇರುತ್ತದೆ. ‘ಜನ ನಾಯಗನ್’ ಸಿನಿಮಾನಲ್ಲಿಯೂ ಸಹ ವಿಜಯ್ ತಮ್ಮ ಮಗಳನ್ನು ಸೈನ್ಯಕ್ಕೆ ಸೇರಿಸುವ ಪ್ರಯತ್ನದಲ್ಲಿದ್ದಾರೆ. ತೆಲುಗಿನಲ್ಲಿ ಶ್ರೀಲೀಲಾ ನಟಿಸಿದ್ದ ಪಾತ್ರದಲ್ಲಿ ‘ಜನ ನಾಯಗನ್’ ಸಿನಿಮಾನಲ್ಲಿ ಮಮಿತಾ ಬಿಜು ನಟಿಸಿದ್ದಾರೆ. ಆದರೆ ಭಗವಂತ್ ಕೇಸರಿ ಸಿನಿಮಾನಲ್ಲಿ ಇಲ್ಲದ ರಾಜಕೀಯದ ಆಂಗಲ್ ಅನ್ನು ಎಳೆದು ತಂದಿದ್ದಾರೆ ನಿರ್ದೇಶಕ ಎಚ್ ವಿನೋದ್.
ವಿಜಯ್ ಅವರ ರಾಜಕೀಯ ಪಯಣಕ್ಕೆ ಬೇಕಾಗುವ ಸನ್ನಿವೇಶಗಳನ್ನು, ಸಂಭಾಷಣೆಗಳನ್ನು ನಿರ್ದೇಶಕ ವಿನೋದ್ ಸೃಷ್ಟಿಸಿರುವುದು ಟ್ರೈಲರ್ನಲ್ಲಿಯೇ ಕಾಣುತ್ತದೆ. ರಾಜಕಾರಣಿಗಳನ್ನೆಲ್ಲ ಅಪಹರಿಸಿ, ಕಟ್ಟಿ ಹಾಕಿ ಅವರನ್ನು ಹೊಡೆಯುತ್ತಾ ಬಡಿಯುತ್ತಾ ಅವರೆಲ್ಲ ಎಷ್ಟು ಭ್ರಷ್ಟರು ಎಂದು ತೆಗಳುತ್ತಾ, ಜನ ಸೇವೆ ಹೇಗೆ ಮಾಡಬೇಕೆಂದು ವಿಜಯ್ ಭಾಷಣ ಮಾಡುವ ದೃಶ್ಯವೂ ಸಹ ಟ್ರೈಲರ್ನಲ್ಲಿದೆ. ಇದರಿಂದಲೇ ತಿಳಿಯುತ್ತದೆ, ‘ಜನ ನಾಯಗನ್’ ಸಿನಿಮಾದ ಹಿಡನ್ ಅಜೆಂಡ.
‘ಜನ ನಾಯಗನ್’ ಸಿನಿಮಾನಲ್ಲಿ ಮಮಿತಾ ಬಿಜು ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಪೂಜಾ ಹೆಗ್ಡೆ ಸಿನಿಮಾದ ನಾಯಕಿ. ಪ್ರಕಾಶ್ ರೈ ಮತ್ತು ಬಾಬಿ ಡಿಯೋಲ್ ಸಿನಿಮಾದ ವಿಲನ್ಗಳು. ಸಿನಿಮಾನಲ್ಲಿ ಇನ್ನೂ ಕೆಲವು ಪ್ರಮುಖ ನಟ, ನಟಿಯರು ಸಹ ನಟಿಸಿದ್ದಾರೆ. ಸಿನಿಮಾ ಜನವರಿ 09 ರಂದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ