ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯೋ ದಳಪತಿ ವಿಜಯ್ ಈಗಿನ ಸ್ಯಾಲರಿ ಎಷ್ಟು?

ನಟ ದಳಪತಿ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಚಿತ್ರರಂಗದಲ್ಲಿ ಪ್ರತಿ ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ಅವರು, ಈಗ ಜನಸೇವೆಗಾಗಿ ತಮ್ಮ ಸಿನಿಮಾ ವೃತ್ತಿ ತೊರೆದಿದ್ದಾರೆ. ಸಂಭಾವನೆ ಜೊತೆಗೆ ಸರ್ಕಾರಿ ಬಂಗಲೆ, Z+ ಭದ್ರತೆ, ಪ್ರಯಾಣ ಭತ್ಯೆ ಹಾಗೂ ನಿವೃತ್ತಿಯ ನಂತರವೂ ಹಲವು ಸೌಲಭ್ಯಗಳನ್ನು ಪಡೆಯಲಿದ್ದಾರೆ.

ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯೋ ದಳಪತಿ ವಿಜಯ್ ಈಗಿನ ಸ್ಯಾಲರಿ ಎಷ್ಟು?
ವಿಜಯ್

Updated on: May 11, 2026 | 1:28 PM

ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವೀಕರಿಸಿದ್ದಾರೆ. ಪ್ರತಿ ಸಿನಿಮಾಗೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದ ಅವರು, ಈಗ ಚಿತ್ರರಂಗ ತೊರೆದು ಜನರ ಸೇವೆ ಮಾಡಲು ಮುಂದಾಗಿದ್ದಾರೆ. ಮೇ 10ರಂದು ನಡೆದ ಕಾರ್ಯಕ್ರಮದಲ್ಲಿ ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಹಾಗಾದರೆ, ವಿಜಯ್ ಅವರಿಗೆ ಸಿಗುವ ಸಂಬಳ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

ದೇಶದಲ್ಲಿ ಹಲವು ರಾಜ್ಯಗಳಿದ್ದು, ಎಲ್ಲಾ ರಾಜ್ಯಗಳಲ್ಲೂ ಮುಖ್ಯಮಂತ್ರಿಗೆ ನೀಡುವ ಸಂಭಾವನೆ ಏಕರೂಪದಲ್ಲಿ ಇಲ್ಲ. ತಮಿಳುನಾಡು ಮುಖ್ಯಮಂತ್ರಿ ಆಗಿರೋ ವಿಜಯ್​​ಗೆ ಈಗ ಮೂಲ ಮಾಸಿಕ ವೇತನ 2,05,000 ರೂಪಾಯಿ. ಇತರ ರಾಜ್ಯಗಳಿಗೆ ಹೋಲಿಸಿದರೆ ಇದು ತುಸು ಕಡಿಮೆಯೇ. ಆದರೆ, ವಿವಿಧ ಭತ್ಯೆಗಳನ್ನೂ ಸೇರಿಸಿದರೆ ಸಿಎಂ ವಿಜಯ್ ಅವರ ಒಟ್ಟು ಮಾಸಿಕ ವೇತನ ಸುಮಾರು 2,85,000 ರೂಪಾಯಿ ಆಗಲಿದೆ.

ಅಂದರೆ, ದಳಪತಿ ವಿಜಯ್ ಅವರ ವಾರ್ಷಿಕ ಸಂಭಾವನೆ ಸುಮಾರು 34,20,000 ರೂಪಾಯಿ. ವಿಜಯ್ ಅವರು ನೂರಾರು ಕೋಟಿ ರೂಪಾಯಿ ಸಂಭಾವನೆ ಬಿಟ್ಟು ಈಗ ಸಿಎಂ ಆಗಿದ್ದಾರೆ. ಸಂಭಾವನೆ ಕಡಿಮೆ ಇದ್ದರೂ, ಸಿಎಂಗೆ ಅಧಿಕಾರ ಹೆಚ್ಚಿರುತ್ತದೆ. ಹೀಗಾಗಿ, ಎರಡೂ ಸಂಭಾವನೆಯನ್ನು ಹೋಲಿಕೆ ಮಾಡೋದು ಸರಿಯಲ್ಲ ಎಂಬ ಮಾತು ವ್ಯಕ್ತವಾಗಿದೆ.

ಇನ್ನು, ಚೆನ್ನೈನ ಪ್ರತಿಷ್ಠಿತ ಪ್ರದೇಶದಲ್ಲಿ ಸುಸಜ್ಜಿತ ಸರ್ಕಾರಿ ಬಂಗಲೆಯನ್ನು ವಿಜಯ್​​ಗೆ ನೀಡಲಾಗುತ್ತದೆ. ಇದರಲ್ಲಿ ಕ್ಯಾಂಪ್ ಆಫೀಸ್ ಮತ್ತು ಸಿಬ್ಬಂದಿ ವರ್ಗಕ್ಕೆ ಬೇಕಾದ ಎಲ್ಲಾ ಸೌಕರ್ಯಗಳಿರುತ್ತವೆ. ವಿಜಯ್ ಚೆನ್ನೈನಲ್ಲಿ ಮನೆ ಹೊಂದಿರುವುದರಿಂದ ಸರ್ಕಾರಿ ಬಂಗಲೆಯಲ್ಲಿ ಮುಂದುವರಿಯುತ್ತಾರೋ ಅಥವಾ ಇಲ್ಲವೋ ಗೊತ್ತಿಲ್ಲ.
ಇನ್ನು, ವಿಜಯ್ ಅವರಿಗೆ ಸರ್ಕಾರದಿಂದ ಬುಲೆಟ್ ಪ್ರೂಫ್ ಎಸ್‌ಯುವಿ ಸಿಗುತ್ತದೆ. ಪೂರ್ಣ ಪ್ರಮಾಣದ ಬೆಂಗಾವಲು ವಾಹನ ಸದಾ ವಿಜಯ್ ಜೊತೆ ಇರುತ್ತದೆ. ಅಧಿಕೃತ ಪ್ರವಾಸಗಳ ವೇಳೆ ವಿಮಾನ, ರೈಲು ಅಥವಾ ರಸ್ತೆ ಸಂಚಾರದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಸರ್ಕಾರವೇ ಮಾಡಲಿದೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಸ್ವೀಕರಿಸುವಾಗ ಭಾವುಕರಾದ ತ್ರಿಷಾ ಕೃಷ್ಣನ್

ವಿಜಯ್ ಅವರಿಗೆ Z+ ದರ್ಜೆಯ ಭದ್ರತೆ ನೀಡಲಾಗುತ್ತದೆ. ಮುಖ್ಯಮಂತ್ರಿಯವರ ನಿವಾಸ ಮತ್ತು ಅವರು ಪ್ರಯಾಣಿಸುವ ಮಾರ್ಗಗಳಲ್ಲಿ 24 ಗಂಟೆಗಳ ಕಾಲ ಶಸ್ತ್ರಸಜ್ಜಿತ ಪೊಲೀಸರು ಕಾವಲು ಕಾಯುತ್ತಾರೆ. ನಿವೃತ್ತಿಯ ನಂತರವೂ ಹಲವು ಸೌಲಭ್ಯ ವಿಜಯ್​​ಗೆ ಸಿಗುತ್ತದೆ. ಪಿಂಚಣಿ, ಉಚಿತ ವೈದ್ಯಕೀಯ ಸೌಲಭ್ಯ, ರೈಲು ಪ್ರಯಾಣ ಮತ್ತು ಕಚೇರಿ ನಿರ್ವಹಣೆಗೆ ಸಿಬ್ಬಂದಿ ಸೇರಿದಂತೆ ಹಲವು ಸೌಲಭ್ಯಗಳು ಮುಂದುವರಿಯಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us