
ನಟ ಮಹೇಶ್ ಬಾಬು (Mahesh Babu) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಪ್ರತಿ ಸಿನಿಮಾ ರಿಲೀಸ್ ಆದ ಬಳಿಕ ಅವರು ಕುಟುಂಬದವರ ಜೊತೆ ಪ್ರವಾಸ ಮಾಡುತ್ತಾರೆ. ವಿದೇಶಕ್ಕೆ ತೆರಳಿ ಎಂಜಾಯ್ ಮಾಡುತ್ತಾರೆ. ‘ಸರ್ಕಾರು ವಾರಿ ಪಾಟ’ ರಿಲೀಸ್ ಆದ ನಂತರವೂ ಅವರು ಈ ಪದ್ಧತಿ ಮುಂದುವರಿಸಿದ್ದರು. ಈಗ ಮಹೇಶ್ ಬಾಬು ಮತ್ತೆ ಕೆಲಸದ ಮೂಡ್ಗೆ ಮರಳಿದ್ದಾರೆ. ಹೊಸ ಚಿತ್ರಕ್ಕಾಗಿ ಶೂಟಿಂಗ್ ಆರಂಭಿಸಿದ್ದಾರೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ಜೊತೆ ಅವರು ಸಿನಿಮಾ ಮಾಡುತ್ತಿದ್ದು, ಭಾರಿ ಹುಮ್ಮಸ್ಸಿನಿಂದ ಚಿತ್ರೀಕರಣ ಶುರು ಮಾಡಲಾಗಿದೆ. ಮೊದಲ ದಿನ ಶೂಟಿಂಗ್ ಸೆಟ್ನಿಂದ ಒಂದು ಫೋಟೋ ಹರಿಬಿಡಲಾಗಿದೆ. ಅದರ ಜೊತೆಗೆ ಮಹೇಶ್ ಬಾಬು ಅವರು ಹೊಸ ಲುಕ್ (Mahesh Babu New Look) ಗಮನ ಸೆಳೆಯುತ್ತಿದೆ.
ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಮಹೇಶ್ ಬಾಬು ಅವರ ಹೊಸ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಎಲ್ಲ ಸಿನಿಮಾದಲ್ಲಿಯೂ ಅವರು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಕೂಡ ಅದು ಮುಂದುವರಿಯಲಿದೆ.
ಇದು ಮಹೇಶ್ ಬಾಬು ನಟಿಸುತ್ತಿರುವ 28ನೇ ಸಿನಿಮಾ. ಇದಕ್ಕೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಸದ್ಯಕ್ಕೆ SSMB28 ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದೆ. ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಮಹೇಶ್ ಬಾಬು ಅವರು ಕೈ ಜೋಡಿಸಿರುವುದರಿಂದ ನಿರೀಕ್ಷೆ ಜೋರಾಗಿದೆ. ಇದು ಭರ್ಜರಿ ಸಾಹಸಮಯ ಸಿನಿಮಾ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 12 ವರ್ಷಗಳ ಬಳಿಕ ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ.
ಈ ಚಿತ್ರದ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಪ್ರೈಸ್ ಕಾದಿರಲಿದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ‘ಪ್ರಿನ್ಸ್’ ಜೊತೆ ತೆರೆ ಹಂಚಿಕೊಳ್ಳಲು ಅವರು ಕಾತುರರಾಗಿದ್ದಾರೆ.
‘ಸರ್ಕಾರು ವಾರಿ ಪಾಟ’ ಸಿನಿಮಾದಿಂದ ಮಹೇಶ್ ಬಾಬು ಅವರಗೆ ಭರ್ಜರಿ ಗೆಲುವು ಸಿಕ್ಕಿದೆ. 28ನೇ ಸಿನಿಮಾ ಬಳಿಕ ಅವರು ರಾಜಮೌಳಿ ಜೊತೆ ಕೈ ಜೋಡಿಸಲಿದ್ದಾರೆ. ಆ ಸಿನಿಮಾದ ಕುರಿತು ಅನೇಕ ಅಂತೆ-ಕಂತೆಗಳು ಕೇಳಿಬರುತ್ತಿವೆ. ಡೇಟ್ಸ್ ನೀಡುವ ವಿಚಾರದಲ್ಲಿ ಒಂದಷ್ಟು ಗೊಂದಲ ಮೂಡಿದೆ ಎಂದು ಹೇಳಲಾಗುತ್ತಿದೆ. ಆ ಕುರಿತು ಇನ್ನಷ್ಟೇ ಸ್ಪಷ್ಟ ಚಿತ್ರಣ ಸಿಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.