ಭಾರತದ ಅತ್ಯುತ್ತಮ ಮತ್ತು ಕಲಾತ್ಮಕ ಹಾರರ್ ಸಿನಿಮಾ ಎಂದೇ ಮರಾಠಿಯ ‘ತುಂಬಾಡ್’ ಸಿನಿಮಾ ಹೆಸರಾಗಿದೆ. ಮರಾಠಿಯ ಈ ಸಿನಿಮಾ 2018 ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ದೊಡ್ಡ ಕಲಾವಿದರು, ದೊಡ್ಡ ನಿರ್ದೇಶಕ, ನಿರ್ಮಾಣ ಸಂಸ್ಥೆ ಯಾವುದೂ ಇರದ ಕಾರಣ ಯಾವುದೇ ಹೆಚ್ಚಿನ ಪ್ರಚಾರ ಇಲ್ಲದೆ ಬಿಡುಗಡೆ ಆಯ್ತು ಈ ಸಿನಿಮಾ. ಆದರೆ ಸಿನಿಮಾ ಒಟಿಟಿಗೆ ಬಂದ ಮೇಲೆ ದೊಡ್ಡ ಸಂಖ್ಯೆಯ ಜನರನ್ನು ತಲುಪಿತು. ಸೂಪರ್ ಹಿಟ್ ಎನಿಸಿಕೊಂಡಿತು. ನಿನ್ನೆ (ಸೆಪ್ಟೆಂಬರ್ 13) ಈ ಸಿನಿಮಾ ಮರು ಬಿಡುಗಡೆ ಆಗಿದ್ದು ಈ ಬಾರಿ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಇದೇ ದಿನ ಸಿನಿಮಾದ ಎರಡನೇ ಭಾಗವನ್ನೂ ಸಹ ಘೋಷಣೆ ಮಾಡಲಾಗಿದೆ.
ಸೆಪ್ಟೆಂಬರ್ 13 ರಂದು ಈ ಸಿನಿಮಾವನ್ನು ಭಾರತದ ಹಲವು ಪ್ರಮುಖ ನಗರಗಳಲ್ಲಿ ಮರು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಚಿತ್ರಮಂದಿರಗಳಲ್ಲಿ ಈ ಮಾಸ್ಟರ್ ಕ್ಲಾಸ್ ಸಿನಿಮಾ ನೋಡಲಾಗದೆ ಮಿಸ್ ಮಾಡಿಕೊಂಡಿದ್ದವರು ಈಗ ಮುಗಿಬಿದ್ದು ಚಿತ್ರಮಂದಿರಗಳಿಗೆ ಬಂದು ದೃಶ್ಯ ಕಾವ್ಯವನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಮೆಚ್ಚಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಸಿನಿಮಾ ಮರು ಬಿಡುಗಡೆ ಆದ ಬೆನ್ನಲ್ಲೆ, ಸಿನಿಮಾಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕರಲ್ಲಿ ಒಬ್ಬರಾದ ಶೋಹುಂ ಶಾ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ‘ತುಂಬಾಡ್ 2’ ಘೋಷಣೆ ಮಾಡಿದ್ದಾರೆ. ‘ತುಂಬಾಡ್’ ಸಿನಿಮಾ ನಿರ್ದೇಶನ ಮಾಡಿದ್ದ ರಾಹಿ ಅನಿಲ್ ಬರವೆ ಅವರೇ ‘ತುಂಬಾಡ್ 2’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ರಾಹಿ ಅನಿಲ್ ಬರವೆ ಪ್ರಸ್ತುತ ವೆಬ್ ಸರಣಿ ಒಂದರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ, ಈ ವೆಬ್ ಸರಣಿಗೆ ರಾಜ್ ಮತ್ತು ಡಿಕೆ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ:‘ತುಂಬಾಡ್’ ಮರುಬಿಡುಗಡೆ; ಹಾರರ್ ಪ್ರಿಯರಿಗೆ ಸಿಹಿ ಸುದ್ದಿ
ಮರು ಬಿಡುಗಡೆಯಲ್ಲಿ ‘ತುಂಬಾಡ್’ ಸಿನಿಮಾ ನೋಡಿರುವ ಹಲವರು ಇದೊಂದು ಮಾಸ್ಟರ್ ಪೀಸ್ ಎಂದು ಕೊಂಡಾಡಿದ್ದು, ಅದೇ ವರ್ಷ ತೆರೆಗೆ ಬಂದಿದ್ದ ‘ಗಲ್ಲಿಬಾಯ್’ ಬದಲಿಗೆ ‘ತುಂಬಾಡ್’ ಅನ್ನು ಆಸ್ಕರ್ಗೆ ನಾಮಿನೇಟ್ ಮಾಡಿ ಕಳಿಸಬೇಕಿತ್ತು, ‘ಗಲ್ಲಿಬಾಯ್’ ಅಂಥಹಾ ರೀಮೇಕ್ ಸಿನಿಮಾವನ್ನು ಆಸ್ಕರ್ಗೆ ಕಳಿಸಿರುವುದು ತಪ್ಪು ಎಂದು ಈಗ ವಾದ ಮಂಡಿಸಿದ್ದಾರೆ. 2018 ರಲ್ಲಿ ಬಿಡುಗಡೆ ಆಗಿದ್ದ ‘ತುಂಬಾಡ್’ ಸಿನಿಮಾ ಬಹಳ ಕಷ್ಟಪಟ್ಟು ಕಲೆಕ್ಷನ್ ಮಾಡಿತ್ತು. ಆದರೂ ಸಿನಿಮಾಕ್ಕೆ ಹಾಕಿದ್ದ ಬಂಡವಾಳ ವಾಪಸ್ ಬಂದಿರಲಿಲ್ಲ. ಆದರೆ ಈಗ ರೀ ರಿಲೀಸ್ನಲ್ಲಿ ಸಿನಿಮಾ ಮೊದಲ ದಿನವೇ ಸುಮಾರು ಎರಡು ಕೋಟಿಗೂ ಹೆಚ್ಚು ಹಣ ಗಳಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ