
ನಂದಮೂರಿ ಬಾಲಕೃಷ್ಣ ‘ಅಖಂಡ’ದ ಯಶಸ್ಸಿನ ಸಂತಸದಲ್ಲಿದ್ದಾರೆ. ಅವರ ಹೊಸ ಚಿತ್ರ ಎನ್ಬಿಕೆ107 ಅನೌನ್ಸ್ ಆಗಿದ್ದು, ಖ್ಯಾತ ಕಲಾವಿದರು ಚಿತ್ರತಂಡವನ್ನು ಕೂಡಿಕೊಳ್ಳುತ್ತಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ನೀಡಿದ ಗೋಪಿಚಂದ್ ಮಲಿನೇನಿ ಆಕ್ಷನ್ ಕಟ್ ಹೇಳುತ್ತಿರುವ ಎನ್ಬಿಕೆ107ಗೆ ಶೃತಿ ಹಾಸನ್ ನಾಯಕಿ. ಇತ್ತೀಚೆಗೆ ಸ್ಯಾಂಡಲ್ವುಡ್ ತಾರೆ ದುನಿಯಾ ವಿಜಯ್ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ಕಿಚ್ಚ ಸುದೀಪ್ ಜತೆ ‘ಮಾಣಿಕ್ಯ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವರಲಕ್ಷ್ಮಿ ಶರತ್ಕುಮಾರ್ ಇದೀಗ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಚಿತ್ರತಂಡ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅವರಿಗೆ ಸ್ವಾಗತ ಕೋರಿದೆ.
ನಂದಮೂರಿ ಬಾಲಕೃಷ್ಣ ನಟಿಸಲಿರುವ 107ನೇ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸದ್ಯ ಅದನ್ನು ಎನ್ಬಿಕೆ 107 ಎಂದು ಕರೆಯಲಾಗುತ್ತಿದ್ದು, ಶ್ರುತಿ ಹಾಸನ್ ನಾಯಕಿಯಾಗಿ ಬಣ್ಣಹಚ್ಚಲಿದ್ದಾರೆ. ರಾಯಲಸೀಮಾ ಹಿನ್ನೆಲೆಯಲ್ಲಿ ಸಿನಿಮಾ ಮೂಡಿಬರಲಿದ್ದು, ನೈಜ ಘಟನೆಗಳನ್ನು ಆಧರಿಸಿ ಚಿತ್ರ ತಯಾರಾಗುತ್ತಿದೆ. ಸದ್ಯ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಈ ಚಿತ್ರವನ್ನು ನಿರ್ಮಿಸುತ್ತಿದೆ.
ವರಲಕ್ಷ್ಮಿ ಶರತ್ಕುಮಾರ್ ‘ಎನ್ಬಿಕೆ107’ರಲ್ಲಿ ‘ಜಯಮ್ಮ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿನ ಅವರ ಪಾತ್ರವನ್ನು ಎಲ್ಲರೂ ನೆನಪಿನಲ್ಲಿಡಲಿದ್ದೀರಿ ಎನ್ನುವ ಭರವಸೆಯನ್ನು ನಿರ್ದೇಶಕ ಗೋಪಿಚಂದ್ ನೀಡಿದ್ದಾರೆ. ಈ ಮೂಲಕ ವರಲಕ್ಷ್ಮಿ ಅವರದ್ದು ಪ್ರಮುಖ ಪಾತ್ರವಾಗಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ. ನಿರ್ದೇಶಕ ಗೋಪಿಚಂದ್ ಹಂಚಿಕೊಂಡ ಟ್ವೀಟ್ ಇಲ್ಲಿದೆ.
ಇತ್ತೀಚೆಗಷ್ಟೇ ಚಿತ್ರತಂಡ ಸೇರಿಕೊಂಡಿದ್ದ ದುನಿಯಾ ವಿಜಯ್:
ದುನಿಯಾ ವಿಜಯ್ ಟಾಲಿವುಡ್ಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಮೊದಲೇ ಓಡಾಡಿತ್ತು. ಇತ್ತೀಚೆಗೆ ಚಿತ್ರತಂಡ ಅದನ್ನು ಅಧಿಕೃತವಾಗಿ ಹಂಚಿಕೊಂಡಿತ್ತು. ಸ್ಯಾಂಡಲ್ವುಡ್ ಸೆನ್ಸೇಶನ್ ಚಿತ್ರತಂಡ ಕೂಡಿಕೊಳ್ಳುತ್ತಿರುವುದು ಬಹಳ ಸಂತಸದ ವಿಚಾರ. ವಿಲನ್ ಎಂಬುದಕ್ಕೆ ಹೊಸ ಅರ್ಥ ಬರೆಯಲಿದ್ದಾರೆ ಎಂದು ಗೋಪಿಚಂದ್ ಟ್ವೀಟ್ ಮಾಡಿದ್ದರು. ಈ ಮೂಲಕ ದುನಿಯಾ ವಿಜಯ್ ಪಾತ್ರದ ಬಗ್ಗೆ ಅಪಾರ ನಿರೀಕ್ಷೆಗಳು ಮೂಡಿದ್ದವು.
‘ಎನ್ಬಿಕೆ107’ ಚಿತ್ರದ ಚಿತ್ರೀಕರಣ ಈ ತಿಂಗಳಿನಿಂದ ಪ್ರಾರಂಭವಾಗಲಿದೆ ಎನ್ನಲಾಗಿದೆ. ಎಸ್.ತಮನ್ ಸಂಗೀತ ನೀಡುತ್ತಿದ್ದು, ಬಿಗ್ ಬಜೆಟ್ನಲ್ಲಿ ಚಿತ್ರ ತಯಾರಾಗಲಿದೆ.
ಇದನ್ನೂ ಓದಿ:
ಟಾಲಿವುಡ್ಗೆ ಎಂಟ್ರಿ ನೀಡಿದ ದುನಿಯಾ ವಿಜಯ್; ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ಬಂಪರ್ ಚಾನ್ಸ್
Shubha Poonja: ಸಿಂಪಲ್ ಆಗಿ ಗೆಳೆಯ ಸುಮಂತ್ ಜತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ನಟಿ ಶುಭಾ ಪೂಂಜ
Published On - 7:18 pm, Wed, 5 January 22