
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಲೈಗರ್’ (Liger Movie) ಸಿನಿಮಾ ಕೂಡ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಹಲವು ಕಾರಣದಿಂದ ಈ ಚಿತ್ರದ ಮೇಲೆ ಹೈಪ್ ಸೃಷ್ಟಿ ಆಗಿದೆ. ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ಇದು ರಿಲೀಸ್ ಆಗುತ್ತಿದೆ. ‘ಲೈಗರ್’ ಸಿನಿಮಾ ಮೂಲಕ ಭರ್ಜರಿ ಗೆಲುವು ಪಡೆಯಲು ವಿಜಯ್ ದೇವರಕೊಂಡ (Vijay Deverakonda) ಕಾದಿದ್ದಾರೆ. ಅಚ್ಚರಿ ಎಂದರೆ, ಚಿತ್ರ ರಿಲೀಸ್ ಆಗುವುದಕ್ಕೂ ಮುನ್ನವೇ ಅವರು ಇದನ್ನು ಬ್ಲಾಕ್ ಬಸ್ಟರ್ ಹಿಟ್ ಎಂದು ಘೋಷಿಸಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವಾಗ ವಿಜಯ್ ದೇವರಕೊಂಡ ಈ ಹೇಳಿಕೆ ನೀಡಿದ್ದಾರೆ. ಈ ಸಿನಿಮಾ ಖಂಡಿತಾ ಯಶಸ್ಸು ಕಾಣಲಿದೆ ಎಂಬ ಭರವಸೆ ಅವರಿಗೆ ಇದೆ. ಆ ವಿಚಾರದಲ್ಲಿ ಅವರಿಗೆ ಯಾವುದೇ ಅನುಮಾನ ಇಲ್ಲ.
ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ‘ಲೈಗರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ನಿರ್ದೇಶನದ ಜೊತೆಗೆ ಅವರು ನಿರ್ಮಾಣವನ್ನೂ ಮಾಡಿದ್ದು, ಅವರಿಗೆ ಕರಣ್ ಜೋಹರ್, ಚಾರ್ಮಿ ಕೌರ್ ಸಾಥ್ ನೀಡಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಮತ್ತು ಟ್ರೇಲರ್ ಧೂಳೆಬ್ಬಿಸಿವೆ. ಈ ಪರಿ ರೆಸ್ಪಾನ್ಸ್ ನೋಡಿ ವಿಜಯ್ ದೇವರಕೊಂಡ ಫಿದಾ ಆಗಿದ್ದಾರೆ.
‘ಲೈಗರ್’ ಪ್ರಚಾರದ ಸಲುವಾಗಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅವರು ಅನೇಕ ಊರುಗಳಿಗೆ ತೆರಳುತ್ತಿದ್ದಾರೆ. ವಿವಿಧ ನಗರಗಳಲ್ಲಿ ಅವರನ್ನು ನೋಡಲು ಜನ ಸಾಗರವೇ ಸೇರುತ್ತಿದೆ. ಇದರಿಂದ ‘ಲೈಗರ್’ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿದೆ. ಆ ಕಾರಣದಿಂದ ಬಿಡುಗಡೆಗೂ ಮುನ್ನವೇ ಇದನ್ನು ಬ್ಲಾಕ್ ಬಸ್ಟರ್ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
‘ಕೆಲವು ಸಿನಿಮಾಗಳ ಬಗ್ಗೆ ನಮಗೆ ತುಂಬ ನಂಬಿಕೆ ಇದ್ದಾಗ ನಾನು ಅದನ್ನು ಬ್ಲಾಕ್ ಬಸ್ಟರ್ ಅಂತ ಘೋಷಿಸುತ್ತೇನೆ. ಪ್ರಚಾರ ಶುರು ಆಗುವುದಕ್ಕೂ ಮುನ್ನವೇ ನಾನು ಇದನ್ನು ಹೇಳುತ್ತೇನೆ. ‘ಅರ್ಜುನ್ ರೆಡ್ಡಿ’ ಸಿನಿಮಾದ ಸಂದರ್ಭದಲ್ಲೂ ನಾನು ಹೀಗೆಯೇ ಹೇಳಿದ್ದೆ’ ಎಂದಿದ್ದಾರೆ ವಿಜಯ್ ದೇವರಕೊಂಡ.
ಆಗಸ್ಟ್ 25ರಂದು ‘ಲೈಗರ್’ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರು ಬಾಕ್ಸರ್ ಪಾತ್ರ ಮಾಡಿದ್ದಾರೆ. ಅವರ ಎದುರು ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ ಅವರು ನಟಿಸಿರುವುದು ವಿಶೇಷ. ಇವರಿಬ್ಬರ ಮುಖಾಮುಖಿ ದೃಶ್ಯಗಳನ್ನು ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.