
ಬಹುಭಾಷಾ ನಟ ಕಮಲ್ ಹಾಸನ್ ಯಾವುದೇ ಸಿನಿಮಾ ಘೋಷಣೆ ಮಾಡಿದರೂ ಅಲ್ಲೊಂದು ಕುತೂಹಲ ಇದ್ದೇ ಇರುತ್ತದೆ. ಅವರ ನಟನೆಯ ವಿಕ್ರಮ್ ಸಿನಿಮಾ ಟೈಟಲ್ ಟೀಸರ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಈಗ ರಿಲೀಸ್ ಆಗಿರುವ ಚಿತ್ರದ ಹೊಸ ಟೀಸರ್ ಈ ಕುತೂಹಲವನ್ನು ದುಪಟ್ಟು ಮಾಡಿದೆ. ಇದನ್ನು ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ವಿಕ್ರಮ್ ಸಿನಿಮಾದಲ್ಲಿ ತಮಿಳಿನ ವಿಜಯ್ ಸೇತುಪತಿ, ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ. ಈಗ ರಿಲೀಸ್ ಆಗಿರೋ ಪೋಸ್ಟರ್ನಲ್ಲಿ ಮೂವರ ದರ್ಶನ ಒಟ್ಟಿಗೆ ಆಗಿದೆ. ಬ್ಲ್ಯಾಕ್ ಆ್ಯಂಡ್ ವೈಟ್ನಲ್ಲಿ ಪೋಸ್ಟರ್ ಮೂಡಿ ಬಂದಿದೆ. ಇದನ್ನು ನೋಡಿದ ಸಿನಿಪ್ರಿಯರು ಸಾಕಷ್ಟು ಖುಷಿಯಾಗಿದ್ದಾರೆ.
ವಿಕ್ರಮ್ ಸಿನಿಮಾದಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಫಹಾದ್ ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಸಾಕ್ಷಿ ಹೇಳಲು ಹೊರಟಿರುವ ವ್ಯಕ್ತಿಯನ್ನು ಸಾಯಿಸಲು ರೌಡಿಗೆ (ವಿಜಯ್ ಸೇತುಪತಿ) ಈ ಪೊಲೀಸ್ ಅಧಿಕಾರಿ ಸಹಕಾರ ನೀಡುತ್ತಾನೆ. ಈ ಸಾಕ್ಷ್ಯವನ್ನು ಹೀರೋ (ಕಮಲ್ ಹಾಸನ್) ಕಾಪಾಡುತ್ತಿರುತ್ತಾನೆ. ಇದು ಸಿನಿಮಾದ ಒಂದೆಳೆ.
ತಮಿಳಿನಲ್ಲಿ ಸಿದ್ಧಗೊಳ್ಳುತ್ತಿರುವ ಈ ಸಿನಿಮಾದ ಮೇಲೆ ಹೆಚ್ಚು ನಿರೀಕ್ಷೆ ಇದೆ. ಜಲ್ಲಿಕಟ್ಟು ಸಿನಿಮಾದಲ್ಲಿ ಕ್ಯಾಮೆರಾ ಕೈಚಳಕ ತೋರಿದ್ದ ಗಿರೀಶ್ ಗಂಗಾಧರನ್ ಈ ಸಿನಿಮಾಗೆ ಛಾಯಾಗ್ರಹಣ ಮಾಡಲಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸಿನಿಮಾದ ಫ್ರೇಮ್ ಮತ್ತಷ್ಟು ಅದ್ಭುತವಾಗಿ ಮೂಡಿಬರುವ ನಿರೀಕ್ಷೆ ಇದೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ದಳಪತಿ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್ ಕನಗರಾಜ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇದನ್ನೂ ಓದಿ: ಪ್ರಜಾಕೀಯದ ಹೈಕಮಾಂಡ್ ಯಾರು ಎಂಬುದನ್ನು ಬಹಿರಂಗಪಡಿಸಿದ ಉಪೇಂದ್ರ
Published On - 7:12 pm, Sat, 10 July 21