ಪ್ರವಾಸ ಆಯೋಜನೆ ಮಾಡುವ ಉತ್ತಮ ಸಮಯಗಳಲ್ಲಿ ನವೆಂಬರ್ ತಿಂಗಳು ಕೂಡ ಒಂದು. ಏಕೆಂದರೆ ಈ ತಿಂಗಳಿನಲ್ಲಿ ಹವಾಮಾನವು ತಂಪಾಗಿರುತ್ತದೆ. ಜೊತೆಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬಗಳು ಇರುವುದರಿಂದ ಉತ್ಸಾಹ ಇನ್ನಷ್ಟು ಹೆಚ್ಚಾಗಿರುತ್ತದೆ. ಭಾರತವು ಹಲವಾರು ಧರ್ಮಗಳು ಮತ್ತು ಸಂಸ್ಕೃತಿಗಳ ಮೂಲ ಸ್ಥಳವಾಗಿದೆ. ಹಾಗಾಗಿ ವರ್ಷವಿಡೀ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬಗಳ ಅಸಂಖ್ಯಾತ ಆಚರಣೆಗಳು ನಡೆಯುತ್ತವೆ. ಭಾರತದಲ್ಲಿ ನವೆಂಬರ್ ತಿಂಗಳು ಕೆಲವು ವಿಶೇಷ ಹಬ್ಬಗಳನ್ನು ಒಳಗೊಂಡಿದೆ. ಹಾಗಾದರೆ ಯಾವ ಯಾವ ಹಬ್ಬಗಳನ್ನು ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ.
ಪ್ರತಿ ತಿಂಗಳ ಚತುರ್ಥಿ ತಿಥಿಯಂದು ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ಗಣಪತಿಯನ್ನು ಪೂಜಿಸುವುದರಿಂದ ಜೀವನದಲ್ಲಿನ ಸಕಲ ಸಂಕಷ್ಟಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಕಾರಣಕ್ಕಾಗಿ ಸಂಕಷ್ಟ ಚತುರ್ಥಿ ದಿನದಂದು ಹೆಚ್ಚಿನ ಜನರು ಗಣಪತಿ ಆರಾಧನೆಯನ್ನು ಮಾಡುತ್ತಾರೆ. ಈ ಬಾರಿಯ ಸಂಕಷ್ಟ ಚತುರ್ಥಿಯನ್ನು ನವೆಂಬರ್ 1 ಬುಧವಾರ ದಂದು ಆಚರಣೆ ಮಾಡಲಾಗುತ್ತದೆ. ಈ ದಿನ ಚಂದ್ರೋದಯ ವಾಗುವುದು ರಾತ್ರಿ 9. 05 ಕ್ಕೆ.
ಹಿಂದೂ ಧಾರ್ಮಿಕ ಪಂಚಾಗ ಪ್ರಕಾರ ಹಾಗೂ ಧಾರ್ಮಿಕ ನಂಬಿಕೆಗಳ ಪ್ರಕಾರ ಸರ್ವೈಕಾದಶಿಯಂದು ವ್ರತಾಚರಣೆಯನ್ನು ಕ್ರಮಬದ್ಧವಾಗಿ ಮಾಡುವುದರಿಂದ ಮತ್ತು ಮಹಾವಿಷ್ಣುವನ್ನು ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ಧನತ್ರಯೋದಶಿ ದಿನ ಭಗವಾನ್ ಧನ್ವಂತರಿ, ಕುಬೇರ ಮತ್ತು ಯಮ ದೇವನನ್ನು ಪೂಜಿಸಲಾಗುತ್ತದೆ. ದೇವರುಗಳ ನಿಧಿಪತಿಯಾದ ಕುಬೇರ ದೇವನನ್ನು ಪೂಜಿಸುವುದರಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಜೊತೆಗೆ ಮನೆಯ ಉತ್ತರ ದಿಕ್ಕನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಿಕೊಳ್ಳಿ. ಕುಬೇರನು ಮನೆಯ ಉತ್ತರ ದಿಕ್ಕಿನಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಈ ದಿಕ್ಕನ್ನು ವಾಸ್ತು ಪ್ರಕಾರ ಇಟ್ಟುಕೊಂಡರೆ ಅಪಾರ ಸಂಪತ್ತು ಮತ್ತು ಆಸ್ತಿಯ ಒಡೆಯರಾಗಬಹುದು ಎಂದು ಹೇಳಲಾಗುತ್ತದೆ. ಈ ಬಾರಿಯ ಧನತ್ರಯೋದಶಿಯನ್ನು ನವೆಂಬರ್ 10 ರಂದು ಆಚರಿಸಲಾಗುತ್ತದೆ.
ಆಶ್ವಿಜ ಮಾಸದ ಕೊನೆಯ ಅತಿ ದೊಡ್ಡ ಹಬ್ಬವೆಂದರೆ ಅದುವೇ ದೀಪಾವಳಿ. ಮೂರು ದಿನಗಳ ಈ ಹಬ್ಬದಲ್ಲಿ ಮೊದಲ ದಿನ ಅಂದರೆ ನರಕ ಚತುರ್ದಶಿಯಂದು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವ ಸಂಪ್ರದಾಯವಿದೆ. ಆ ದಿನ ಬೆಳಿಗ್ಗೆ ಶುಭ ಮುಹೂರ್ತದಲ್ಲಿ ಮೈಗೆ ಎಣ್ಣೆಯನ್ನು ಹಚ್ಚಿ, ಸ್ನಾನ ಮಾಡಿ ಹೊಸ ಉಡುಪನ್ನು ತೊಡುವ ಸಂಪ್ರದಾಯ ನಡೆಯುತ್ತದೆ. ದಂತಕಥೆಯ ಪ್ರಕಾರ, ಈ ದಿನ ಶ್ರೀ ಕೃಷ್ಣನು ನರಕಾಸುರನನ್ನು ಕೊಂದನು, ಆದ್ದರಿಂದ ಈ ದಿನ ಶ್ರೀ ಕೃಷ್ಣನನ್ನು ಪೂಜಿಸಲಾಗುತ್ತದೆ.
ಹಿಂದೂ ಪಂಚಾಂಗದ ಪ್ರಕಾರ, ದೀಪಾವಳಿ ಅಮಾವಾಸ್ಯೆಯಂದು ಪ್ರದೋಷ ಕಾಲವಿರುವಾಗ ದೀಪಾವಳಿಯಂದು ಮಹಾಲಕ್ಷ್ಮೀಯನ್ನು ಪೂಜಿಸಲಾಗುವುದು. ದೀಪಾವಳಿಯ ಸಂಜೆಯ ಶುಭ ಸಮಯದಲ್ಲಿ ಲಕ್ಷ್ಮೀ, ಗಣೇಶ, ಸರಸ್ವತಿ ಮತ್ತು ಕುಬೇರ ದೇವರನ್ನು ಪೂಜಿಸಲಾಗುತ್ತದೆ. ಈ ಬಾರಿಯ ದೀಪಾವಳಿ ಅಮಾವಾಸ್ಯೆಯನ್ನು ನ. 13 ರಂದು ಆಚರಿಸಲಾಗುತ್ತದೆ.
ಇದು ಹಿಂದೂ ತಿಂಗಳ ಕಾರ್ತಿಕ ಮಾಸದ ಮೊದಲ ದಿನವಾಗಿದೆ. ರಾಕ್ಷಸ ರಾಜ ಬಲಿಯ ಮೇಲೆ ವಿಷ್ಣುವಿನ ವಿಜಯವನ್ನು ಸಂಕೇತಿಸಲು ಇದನ್ನು ಆಚರಿಸಲಾಗುತ್ತದೆ. ರಾಜ ಬಲಿ ಭೂಮಿಗೆ ಕಾಲ್ಪನಿಕವಾಗಿ ಹಿಂದಿರುಗಿದ ಗೌರವಾರ್ಥವಾಗಿ ಇದನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ದಿನ, ರಾಜ ಬಲಿಯ ಧಾರ್ಮಿಕ ಪೂಜೆಯನ್ನು ಮಾಡಲಾಗುತ್ತದೆ.
ಈ ಬಾರಿ ದೇವುತ್ಥಾನ ಅಥವಾ ದೇವ ಪ್ರಬೋಧಿನಿ ಏಕಾದಶಿಯನ್ನು ನವೆಂಬರ್ 23 ರಂದು ಆಚರಿಸಲಾಗುತ್ತದೆ. ಈ ಏಕಾದಶಿ ಧಾರ್ಮಿಕ ಗ್ರಂಥಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ದೇವುತ್ಥಾನ ಅಥವಾ ದೇವ ಪ್ರಬೋಧಿನಿ ಏಕಾದಶಿ ವ್ರತಕ್ಕೆ ಸಂಬಂಧಿಸಿದ ಅನೇಕ ಪೌರಾಣಿಕ ಕಥೆಗಳಿದ್ದು, ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ಈ ದಿನದಂದು ತುಳಸಿ ಮತ್ತು ಸಾಲಿಗ್ರಾಮಕ್ಕೆ ವಿವಾಹವನ್ನು ಮಾಡಿಸುವುದರಿಂದ ಅಪಾರ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ.
ಕಾರ್ತಿಕ ಶುಕ್ಲ ದ್ವಾದಶಿಯಂದು ಉತ್ಥಾನ ದ್ವಾದಶಿ ಹಬ್ಬವನ್ನು ಆಚರಣೆ ಮಾಡುವುದು ವಾಡಿಕೆ. ಶ್ರೀಮನ್ನಾರಾಯಣನು ತನ್ನ ನಿದ್ರಾ ಮುದ್ರೆಯನ್ನು ಬಿಟ್ಟು ಎಚ್ಚರಿಕೆ ಹೊಂದುವ ಮುದ್ರೆಯನ್ನು ಭಕ್ತರಿಗೆ ತೋರಿಸುವುದು ದ್ವಾದಶಿ ತಿಥಿಯಾದ್ದರಿಂದ ಇದನ್ನು ಉತ್ಥಾನ ದ್ವಾದಶಿ ಎನ್ನುವರು. ಉತ್ಥಾನ ದ್ವಾದಶಿಯ ದಿನ ವಿಷ್ಣುವಿನ ಪೂಜೆ ಹಾಗೂ ಜೊತೆಗೆ ಧಾತ್ರೀ ಅಂದರೆ ನೆಲ್ಲಿ ಗಿಡ, ಸಹಿತವಾಗಿ ತುಳಸಿಗೆ ಈ ದಿನ ವಿಶೇಷ ಪೂಜೆ ಹಾಗೂ ನೈವೇದ್ಯ ಮಾಡಲಾಗುತ್ತದೆ. ಕಬ್ಬು, ಹುಣಸೆ ಎಲ್ಲವನ್ನೂ ಇಟ್ಟು ಸಿಂಗಾರ ಮಾಡಿ ಪೂಜಿಸಲಾಗುತ್ತದೆ.
ವೈಕುಂಠ ಚತುರ್ದಶಿಯು ಭಗವಾನ್ ವಿಷ್ಣು ಮತ್ತು ಶಿವ ಭಕ್ತರಿಗೆ ಪವಿತ್ರವೆಂದು ಪರಿಗಣಿಸಲಾಗಿದೆ. ಜೊತೆಗೆ ಈ ದಿನ ಭಕ್ತಿಯಿಂದ ಪೂಜೆ ಸಲ್ಲಿಸುವುದರಿಂದ ವೈಕುಂಠ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ. ಕಾರ್ತಿಕ ಪೂರ್ಣಿಮೆಯ ಒಂದು ದಿನ ಮೊದಲು ಈ ದಿವನ್ನು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನಾಂಕವು ವಿಶೇಷ ಮಹತ್ವವನ್ನು ಹೊಂದಿದೆ. ವಾರಣಾಸಿಯ ಹೆಚ್ಚಿನ ದೇವಾಲಯಗಳಲ್ಲಿ ವೈಕುಂಠ ಚತುರ್ದಶಿಯನ್ನು ಆಚರಿಸುತ್ತಾರೆ. ಅದರ ಹೊರತಾಗಿ, ವೈಕುಂಠ ಚತುರ್ದಶಿಯನ್ನು ಋಷಿಕೇಶ, ಗಯಾ ಮತ್ತು ಮಹಾರಾಷ್ಟ್ರದ ಅನೇಕ ನಗರಗಳಲ್ಲಿಯೂ ಆಚರಿಸಲಾಗುತ್ತದೆ.
ಕಾರ್ತಿಕ ಮಾಸವನ್ನು ಎಲ್ಲಾ ತಿಂಗಳುಗಳಿಗಿಂತಲೂ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಭಗವಾನ್ ವಿಷ್ಣುವು ಕಾರ್ತಿಕ ಮಾಸದಲ್ಲಿ ಮತ್ಸ್ಯ ಅವತಾರವನ್ನು ತೆಗೆದುಕೊಂಡನೆಂದು ನಂಬಲಾಗಿದೆ. ಕಾರ್ತಿಕ ಪೂರ್ಣಿಮಾವನ್ನು ದೇವ ದೀಪಾವಳಿ ಎಂದೂ ಕರೆಯಲಾಗುತ್ತದೆ. ಈ ಬಾರಿ ಕಾರ್ತಿಕ ಪೂರ್ಣಿಮೆ ಯನ್ನು ನವೆಂಬರ್ 27 ರಂದು ಆಚರಿಸಲಾಗುತ್ತದೆ.
ಬಿಕ್ಕಟ್ಟನ್ನು ಸೋಲಿಸುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಸಂಕಷ್ಟ ಎಂಬ ಪದದ ಅರ್ಥ ಕಷ್ಟದ ಸಮಯಗಳಿಂದ ಮುಕ್ತಿ ನೀಡುವುದು ಎಂಬುದಾಗಿದೆ. ಯಾವುದೇ ರೀತಿಯ ದುಃಖವಿದ್ದರೆ ಅದನ್ನು ಹೋಗಲಾಡಿಸಲು ಈ ಚತುರ್ಥಿಯಂದು ವಿಧಿವತ್ತಾಗಿ ಉಪವಾಸವಿದ್ದು ಗೌರಿಯ ಪುತ್ರನಾದ ಗಣೇಶನನ್ನು ಪೂಜಿಸಬೇಕು. ಜನರು ಸೂರ್ಯೋದಯದ ಸಮಯದಿಂದ ಚಂದ್ರನ ಉದಯದವರೆಗೆ ಉಪವಾಸ ಮಾಡಿ ಚಂದ್ರ ದರ್ಶನ ಮಾಡುವ ಮೂಲಕ ಉಪವಾಸ ಮುರಿಯುತ್ತಾರೆ. ಈ ದಿನ ಚಂದ್ರೋದಯ ರಾತ್ರಿ 8.43 ಕ್ಕೆ.
1509 ರ ಡಿಸೆಂಬರ್ 3 ರಂದು ತಿಮ್ಮಪ್ಪ ನಾಯಕರಾಗಿ ಜನಿಸಿದ ಕನಕದಾಸರು, ಪ್ರಸಿದ್ಧ ತತ್ವಜ್ಞಾನಿ, ಕವಿ ಮತ್ತು ಸಂಗೀತಗಾರರಾಗಿದ್ದಾರೆ. ಪ್ರತಿ ವರ್ಷ ಇವರ ಜನ್ಮದಿನವನ್ನು ಕನಕದಾಸರ ಜಯಂತಿ ಎಂದು ಕರ್ನಾಟಕ ರಾಜ್ಯಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Thu, 26 October 23