ವಿಜಯಪುರ: ಗುಡ್ಡಾಪುರ ದಾನಮ್ಮ ದೇವಿ ಜಾತ್ರೆ ಸಂಭ್ರಮ; ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಾವಿರಾರು ಭಕ್ತರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 23, 2022 | 9:17 AM

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ ಶ್ರೀಕ್ಷೇತ್ರ ಗುಡ್ಡಾಪುರದಲ್ಲಿ ದಾನಮ್ಮ ದೇವಿ ಜಾತ್ರಾ ಸಂಭ್ರಮ. ರಾಜ್ಯದ ಜನರೇ ಲಕ್ಷಾಂತರ ಸಂಖ್ಯೆಯಲ್ಲಿ ಜಮಾಯಿಸುವ ಜಾತ್ರೆಗೆ ರಾಜ್ಯದ ಜನರು ಪಾದಯಾತ್ರೆ ಮೂಲಕ ಹೋಗುತ್ತಿದ್ದಾರೆ.

ವಿಜಯಪುರ: ಗುಡ್ಡಾಪುರ ದಾನಮ್ಮ ದೇವಿ ಜಾತ್ರೆ ಸಂಭ್ರಮ; ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಾವಿರಾರು ಭಕ್ತರು
ದಾನಮ್ಮ ದೇವಿ
Follow us on

ವಿಜಯಪುರ: ಮಹಾರಾಷ್ಟ್ರ ರಾಜ್ಯದಲ್ಲಿರುವ ಸುಪ್ರಸಿದ್ದ ಶ್ರೀ ದಾನಮ್ಮ ದೇವಿಯ ಜಾತ್ರೆಗೆ ಕರ್ನಾಟಕದಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಪ್ರತಿವರ್ಷ ಹೋಗುತ್ತಾರೆ. ಕಾಲ್ನಡಿಗೆ ಮೂಲಕ ಜಾತ್ರೆಗೆ ಹೋಗುವುದು ಮೊದಲಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯವಾಗಿದೆ. ಪ್ರತಿ ವರ್ಷ ಛಟ್ಟಿ ಅಮವಾಸ್ಯೆಯಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಜಾತ್ರೆಗೆ ನಮ್ಮ ಕರ್ನಾಟಕದಿಂದ ಲಕ್ಷಾಂತರ ಭಕ್ತರು ಹೋಗುತ್ತಾರೆ. ಜಾತ್ರೆಯಲ್ಲಿ ಯಾವುದೇ ಜಾತಿ ಭಾಷೆ ಭೇದಭಾವವಿರುವುದಿಲ್ಲ. ಅಲ್ಲಿರುವುದು ಕೇವಲ ನಿರ್ಮಲ ಭಕ್ತಿ ಮಾತ್ರ. ಬೇಡಿದ ವರವನ್ನು ಕೊಡುವ ತಾಯಿಯೆಂದೇ ಹೆಸರುವಾಸಿ. ಪ್ರತಿ ವರ್ಷ ಬೇಡಿಕೆಗಳನ್ನು ಬೇಡಿಕೊಳ್ಳುವವರು ಹಾಗೂ ಬೇಡಿಕೆಗಳು ಈಡೇರಿದ ಭಕ್ತರು ಕಾಲ್ನಡಿಗೆ ಮೂಲಕ ಜಾತ್ರೆಗೆ ತೆರಳುತ್ತಾರೆ.

ಪ್ರತಿ ವರ್ಷ ಛಟ್ಟಿ ಅಮವ್ಯಾಸೆಯಂದು ಶ್ರೀಕ್ಷೇತ್ರ ಗುಡ್ಡಾಪುರ ಕ್ಷೇತ್ರದಲ್ಲಿ ದಾನಮ್ಮ ದೇವಿಯ ಜಾತ್ರೆಯು ಅದ್ದೂರಿಯಾಗಿ ನಡೆಯುತ್ತದೆ. ನಿತ್ಯ ಮೂರು ಬಾರಿ ಪೂಜೆಗೊಳ್ಳುವ ಶ್ರೀ ದಾನಮ್ಮ ದೇವಿ ಬಾಲ್ಯಾವಸ್ಥೆ, ಯೌವ್ವನ ಹಾಗೂ ವೃದ್ಯಾಪ್ಯದ ಅವತಾರಗಳಲ್ಲಿ ದರ್ಶನ ನೀಡುತ್ತಾಳೆ. ಬಸವಾದಿ ಶರಣರ ಕಾಲದಲ್ಲಿ ಶರಣರಿಗೆ ಊಟದ ವ್ಯವಸ್ಥೆ ಮಾಡಿ ದಾನಮ್ಮ ಶರಣೆಯಾಗಿರುವ ದೇವಿಯ ಮಾಡಿದ ಪವಾಡಗಳು ಅನೇಕ. ವಿಜಯಪುರ ನಗರದ ಮೂಲಕ ಗುಡ್ಡಾಪುರಕ್ಕೆ ಸಾಗುವ ಲಕ್ಷಾಂತರ ಪಾದಯಾತ್ರಿಗಳಿಗೆ ನಗರದ ವಿವಿಧ ಸಂಘಟನೆಗಳು, ಭಕ್ತರು, ವ್ಯಾಪಾರಸ್ಥರು ಉಪಾಹಾರ ಹಾಗೂ ಕುಡಿಯುವ ನೀರು ಸೇರಿದಂತೆ ಇತರೆ ಸೇವೆಗಳನ್ನು ನೀಡುತ್ತಾರೆ. ಭಕ್ತರು ಪಾದಯಾತ್ರೆ ಮೂಲಕ ಹೋಗಿ ದಾನಮ್ಮ ದೇವಿಯ ದರ್ಶನ ಮಾಡಿ ಜಾತ್ರೆ ಮಾಡಿದರೆ ಒಳ್ಳೆಯದನ್ನು ಮಾಡುತ್ತಾಳೆ ಎನ್ನುತ್ತಾರೆ ಭಕ್ತರು.

ಇಂದು (ನ 23) ನಸುಕಿನ ಜಾವದಿಂದ ಗುಡ್ಡಾಪುರದಲ್ಲಿ ಜಾತ್ರೆ ಆರಂಭವಾಗಿದ್ದು ನಿನ್ನೆ ರಾತ್ರಿ ಹಾಗೂ ಇಂದು ನಸುಕಿನ ಜಾವದಲ್ಲಿ ಹೆಚ್ಚಿನ ಭಕ್ತರು ಪಾದಯಾತ್ರೆಯಲ್ಲಿ ಕಂಡು ಬಂದರು. ಕೊರೆಯುವ ಚಳಿಯನ್ನು ಲೆಕ್ಕಿಸದೇ ದಾನಮ್ಮ ದೇವಿ ನಾಮಸ್ಮರಣೆ ಮಾಡುತ್ತಾ ಗುಡ್ಡಾಪುರದತ್ತ ಎಲ್ಲರೂ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯದ ಗಡಿ ಮುಗಿಯುವವರೆಗೂ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಂದೋ ಬಸ್ತ್ ಮಾಡಲಾಗಿದೆ.

ಇದನ್ನೂ ಓದಿ: Kolar: ರಾಜ್ಯದ ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಅಂತರ ಗಂಗೆಯಲ್ಲಿ ಜಾತ್ರಾ ಮಹೋತ್ಸವ; ಹರಿದು ಬಂದ ಭಕ್ತ ಸಾಗರ

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:17 am, Wed, 23 November 22