Kolar: ರಾಜ್ಯದ ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಅಂತರ ಗಂಗೆಯಲ್ಲಿ ಜಾತ್ರಾ ಮಹೋತ್ಸವ; ಹರಿದು ಬಂದ ಭಕ್ತ ಸಾಗರ
ರಾಜ್ಯದ ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದ ಕ್ಷೇತ್ರ ಅಂತರಗಂಗೆಯಲ್ಲಿ ಜಾತ್ರಾ ಮಹೊತ್ಸವದ ಸಂಭ್ರಮ, ಇಲ್ಲಿಗೆ ಕಾಶಿಯಿಂದಲೇ ಗಂಗೆ ಹರಿದು ಬರುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಇಲ್ಲಿ ಸ್ವತ: ಕಾಶಿವಿಶ್ವೇಶ್ವರನೇ ನೆಲೆಸಿದ್ದಾನೆ ಎನ್ನುವ ಪ್ರತೀತಿ ಇದೆ.
ಕೋಲಾರ: ಜಿಲ್ಲಾ ಕೇಂದ್ರದಿಂದ ಎರಡು ಕಿ.ಮೀ ದೂರದಲ್ಲಿರುವ ಪ್ರಸಿದ್ದ ಯಾತ್ರಾಸ್ಥಳ ಅಂತರಗಂಗೆಯಲ್ಲಿ ಕಾರ್ತಿಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ದಕ್ಷಿಣದ ಕಾಶಿ ಎಂದೇ ಪ್ರಸಿದ್ದವಾಗಿರುವ ಅಂತರ ಗಂಗೆಯಲ್ಲಿ ಕಾಶಿವಿಶ್ವೇಶ್ವರನ ಜಾತ್ರೆ ನಡೆಯುತ್ತದೆ. ಬಸವನ ಬಾಯಿಂದ ಹರಿದು ಬರುವ ಗಂಗೆ (ನೀರು) ಕಾಶಿಯಿಂದಲೇ ಹರಿದು ಬರುತ್ತಾಳೆಂಬ ಪ್ರತೀತಿ ಇದೆ. ಜೊತೆಗೆ ಇಲ್ಲಿ ಸಾಕ್ಷಾತ್ ಕಾಶಿವಿಶ್ವೇಶ್ವರ ಸ್ವಾಮಿ ನೆಲೆಸಿದ್ದಾನೆ. ಈ ಸಲುವಾಗಿ ಪ್ರತಿ ವರ್ಷ ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಅಂತರಗಂಗೆಯಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗುತ್ತದೆ. ಈ ದಿನದಂದು ಇಲ್ಲಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ.
ಇನ್ನು ವಿಶೇಷವಾಗಿ ಇಲ್ಲಿಗೆ ಬರುವ ಭಕ್ತರು ಕಾಶಿವಿಶ್ವೇಶ್ವರ ದರ್ಶನ ಪಡೆದು ತಮ್ಮ ಕೋರಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸುತ್ತಾರೆ. ಈ ವಿಶೇಷ ದಿನದ ಅಂಗವಾಗಿ ಕಾಶಿವಿಶ್ವೇಶ್ವರ ಸ್ವಾಮಿಗೆ ಮುಂಜಾನೆ ನಾಲ್ಕು ಗಂಟೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಹೋಮ ಹವನ ಜೊತೆಗೆ ಸಂಜೆ ವೇಳೆಗೆ ತೆಪ್ಪೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಮುಜರಾಯಿ ಇಲಾಖೆಗೆ ಸೇರುವ ಈ ಯಾತ್ರಾಸ್ಥಳದಲ್ಲಿ ಹಿಂದೂ ಪರ ಸಂಘಟನೆಗಳು, ಬರುವ ಭಕ್ತರ ಯೋಗಕ್ಷೇಮ ವಿಚಾರಿಸಿಕೊಂಡು ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆ. ಹೀಗೆ ಕಳೆದ 25 ವರ್ಷಗಳಿಂದ ಭಜರಂಗದಳ, ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಇಲ್ಲಿಗೆ ಬರುವ ಭಕ್ತರಿಗೆ ಕುಡಿಯುವ ನೀರು, ಪ್ರಸಾದ, ಉಚಿತ ಬಸ್ ವ್ಯವಸ್ಥೆ ಸೇರಿದಂತೆ ಹಲವಾರು ಸೌಕರ್ಯಗಳನ್ನು ಕಲ್ಪಿಸುತ್ತಾ ಬಂದಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಅವರು ಕೂಡ ಬಂದು ದೇವರ ದರ್ಶನ ಪಡೆದು ಪುನೀತರಾದರು. ಜೊತೆಗೆ ಈ ಸಂದರ್ಭದಲ್ಲಿ ಮಾತನಾಡಿದ ವರ್ತೂರ್ ಪ್ರಕಾಶ್, ಮುಂದಿನ ವರ್ಷದ ಜಾತ್ರೆಯ ಹೊತ್ತಿಗೆ ಇಲ್ಲಿ ದ್ವಾರ ನಿರ್ಮಾಣ ಮಾಡುವುದಾಗಿ ಹೇಳಿದರು. ಹಲವು ವರ್ಷಗಳಿಂದ ಇಲ್ಲಿಗೆ ಬರುವ ಭಕ್ತರು ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಅದರಂತೆ ಭಕ್ತರ ಕೋರಿಕೆಗಳನ್ನು ಕಾಶಿವಿಶ್ವೇಶ್ವರ ಈಡೇರಿಸುತ್ತಾನೆ ಎಂದು ಭಕ್ತರ ನಂಬಿಕೆ ಆಗಿದೆ.
ಇದನ್ನೂ ಓದಿ: ಬಲಿ ಕಾ ಬಕ್ರಾ ಮಾಡಲು ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆತರಲಾಗುತ್ತಿದೆ: ಸಿ ಎಮ್ ಇಬ್ರಾಹಿಂ
ಒಟ್ಟಾರೆ ಕಡೆಯ ಕಾರ್ತಿಕ ಮಾಸದಲ್ಲಿ ಶಿವನಿಗೆ ಪೂಜೆ ಮಾಡಿದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಅನ್ನುವ ನಂಬಿಕೆ ಭಕ್ತರಲ್ಲಿದೆ. ಅದರಲ್ಲೂ ಕಾಶಿಗೆ ಹೋಗಲಾರದವರು ಇಲ್ಲಿಗೆ ಬಂದು ಶಿವನ ದರ್ಶನ ಪಡೆದು ಪುನೀತರಾಗುತ್ತಾರೆ. ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಕೋಲಾರದ ಅಂತರಗಂಗೆಯಲ್ಲಿ ಜನರ ಜಾತ್ರೆಯೇ ಹರಿದು ಬಂದಿದ್ದು ಮಾತ್ರ ವಿಶೇಷ.
ವರದಿ: ರಾಜೇಂದ್ರ ಸಿಂಹ ಟಿವಿ9 ಕೋಲಾರ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ