ಕೋಲಾರ: ಕೈಕೊಟ್ಟ ಆಲೂಗಡ್ಡೆ ಬೆಳೆ, ಪರದಾಡುತ್ತಿರುವ ರೈತರು

ಕೋಲಾರದಲ್ಲಿ ಕಷ್ಟ ಪಟ್ಟು ಸಾಲ ಮಾಡಿ ಬೆಳೆದ ಆಲೂಗೆಡ್ಡೆ ಬೆಳೆಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ. ರೈತರು ಈ ಬಾರಿಯಾದರೂ ಉತ್ತಮ ಬೆಳೆಯನ್ನು ತೆಗೆಯಬೇಕು ಎಂದು ಅಂದುಕೊಂಡು ಮಾಡಿದ ಅಲೂಗಡ್ಡೆ ಬೆಳವಣಿಗೆಯಾಗದೇ ರೈತರನ್ನು ಕಂಗಾಲು ಮಾಡಿದೆ.

ಕೋಲಾರ: ಕೈಕೊಟ್ಟ ಆಲೂಗಡ್ಡೆ ಬೆಳೆ, ಪರದಾಡುತ್ತಿರುವ ರೈತರು
ಆಲೂಗಡ್ಡೆ ಬೆಳೆದ ರೈತರು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 22, 2022 | 3:17 PM

ಕೋಲಾರ: ಬಯಲು ಸೀಮೆ ಕೋಲಾರವು ಕೃಷಿಯನ್ನೇ ಆಶ್ರಯಿಸಿರುವ ಜಿಲ್ಲೆ. ತೋಟಗಾರಿಕೆ ಬೆಳೆಗಳಷ್ಟೇ ಅಲ್ಲದೆ ಎಲ್ಲ ರೀತಿಯ ಬೆಳೆ ಬೆಳೆಯುವುದಕ್ಕೂ ಇಲ್ಲಿನ ರೈತರು ಸೈ ಎನಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಂಗಾರಪೇಟೆ, ಕೋಲಾರ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಈ ಬಾರಿ ಬೆಳೆದ ಆಲೂಗೆಡ್ಡೆ ರೈತರಿಗೆ ಸಂಕಟ ತಂದಿದೆ. ಒಂದು ಎಕರೆ ಆಲೂಗೆಡ್ಡೆ ಬೆಳೆಯಲು ರೈತರು ಸುಮಾರು ₹ 1 ಲಕ್ಷದಷ್ಟು ಖರ್ಚು ಮಾಡಿದ್ದಾರೆ. ನಾಲ್ಕು ತಿಂಗಳು ಕಷ್ಟಪಟ್ಟಿದ್ದಾರೆ. ಒಂದು ಎಕರೆಗೆ ಕನಿಷ್ಠ ನೂರು ಮೂಟೆ ಆಲೂಗಡ್ಡೆ ಬರಬೇಕು. ಆದರೆ ಆಲೂಗಡ್ಡೆ ಅಗೆಯುವ ಸಮಯವಾದರೂ ಆಲೂಗಡ್ಡೆ ಬೆಳವಣಿಗೆಯಾಗುತ್ತಿಲ್ಲ. ಬಂದಿರುವ ಫಸಲಿನ ಗುಣಮಟ್ಟವೂ ಕಳಪೆಯಾಗಿದೆ. ಸಣ್ಣ ಗೋಲಿಯಾಕಾರದ ಆಲೂಗಡ್ಡೆಯನ್ನು ಮಾರುಕಟ್ಟೆಗೆ ಕೊಂಡೊಯ್ದರೂ ಯಾರೂ ಕೇಳುವುದಿಲ್ಲ. ಹೆಚ್ಚಿನ ಫಸಲೂ ಸಿಗುತ್ತಿಲ್ಲ. ಒಂದಿಡೀ ಎಕರೆಗೆ ಕನಿಷ್ಠ ಇಪ್ಪತ್ತೈದು ಮೂಟೆಯೂ ಬರುತಿಲ್ಲ ಎನ್ನುತ್ತಿದ್ದಾರೆ ರೈತರು.

ಕಳೆದ ಹದಿನೈದು ವರ್ಷಗಳಿಂದ ಕೋಲಾರದಲ್ಲಿ ಮಳೆ-ಬೆಳೆ ಸರಿಯಾಗಿಲ್ಲ. ಕಳೆದೆರೆಡು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ರೈತರು ಸಂಕಷ್ಟದಿಂದ ಹೊರಬರಲು ಆಗುತ್ತಿಲ್ಲ. ಆಲೂಗಡ್ಡೆಯ ಬಿತ್ತನೆ ಬೀಜಕ್ಕೆ ಮೂಟೆಯೊಂದಕ್ಕೆ ₹ 1400 ಕೊಡಬೇಕಿದೆ. ಹಾಕಿದ ಹಣವೂ ವಾಪಸ್ ಬರುತ್ತಿಲ್ಲ. ನೂರರಿಂದ ಇನ್ನೂರು ಗ್ರಾಂ ತೂಕ ಬರಬೇಕಿದ್ದ ಆಲೂಗಡ್ಡೆ ಸಣ್ಣ ಗೋಲಿಗಳಂತೆ ಇದ್ದು, ಇಳುವರಿ ಸಂಪೂರ್ಣವಾಗಿ ಕುಂಠಿತವಾಗಿದೆ. ಈ ಬಾರಿ ಆದರೂ ಒಳ್ಳೆ ಬೆಳೆ ಪಡೆದು ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲಿದ್ದ ರೈತರಿಗೆ ಕಳಪೆ ಬಿತ್ತನೆ‌ ಬೀಜಗಳಿಂದ ಮೋಸಹೋದಂತಾಗಿದೆ.

ಬಂಗಾರಪೇಟೆ ತಾಲೂಕು ಒಂದರಲ್ಲಿಯೇ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆಯಾಗಿದೆ. ಅದರಲ್ಲಿ ಬಹುತೇಕ ಎಲ್ಲಾ ಆಲೂಗಡ್ಡೆ ಬೆಳೆಯೂ ಹಾಳಾಗಿದ್ದು ಇದು ಕಳಪೆ ಬಿತ್ತನೆ ಬೀಜದ ಎಫೆಕ್ಟ್ ಎಂದು ರೈತ ಮುಖಂಡರು ಆರೋಪ ಮಾಡುತ್ತಿದ್ದಾರೆ. ಈ ಕುರಿತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಕೊಡಿಸುವ ಪ್ರಯತ್ನವಾದರೂ ಮಾಡಬೇಕು ಅನ್ನುವುದು ರೈತ ಮುಖಂಡರ ಆಗ್ರಹವಾಗಿದೆ.

ಇತ್ತೀಚಿನ ದಿನಗಳಲ್ಲಿನ ವಾತಾವರಣದ ಪರಿಣಾಮವೋ ಅಥವಾ ಕಳಪೆ ಬಿತ್ತನೆ ಆಲೂಗಡ್ಡೆಯ ಪರಿಣಾಮವೋ ಗೊತ್ತಿಲ್ಲ, ಈ ಬಾರಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಸಂಪೂರ್ಣ ಆಲೂಗಡ್ಡೆ ಬೆಳೆ ಹಾಳಾಗಿದ್ದು, ಇದನ್ನು ನಂಬಿಕೊಂಡು ಸಾಲ ಮಾಡಿ ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡು ಬೆಳೆದಿದ್ದ ರೈತರು ಈಗ ಆಲೂಗಡ್ಡೆಯಂತೆ ಗಟ್ಟಿಮನಸ್ಸು ಮಾಡಿಕೊಂಡು ನಷ್ಟ ಸಹಿಸಿಕೊಳ್ಳುವ ಪರಿಸ್ಥಿತಿ ಬಂದಿದೆ.

ವರದಿ: ರಾಜೇಂದ್ರಸಿಂಹ, ಟಿವಿ9, ಕೋಲಾರ

ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದ್ರೆ ನಾನು ಕನಿಷ್ಠ 50000 ಮತಗಳಿಂದ ಗೆಲ್ಲುತ್ತೇನೆ: ವರ್ತೂರ್ ಪ್ರಕಾಶ್ ವಿಶ್ವಾಸ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ