ನರಕಾಸುರನ ಹಿನ್ನೆಲೆ ಏನು? ಸ್ವತಃ ಶ್ರೀಕೃಷ್ಣನೇ ಅಭ್ಯಂಗ ಸ್ನಾನ ಮಾಡಿಕೊಂಡಿದ್ದು ಏಕೆ?

| Updated By: ಸಾಧು ಶ್ರೀನಾಥ್​

Updated on: Oct 24, 2022 | 12:28 PM

ನರಕ ಚತುರ್ದಶಿ ಹಬ್ಬವನ್ನು ಆಶ್ವಯುಜ ಕೃಷ್ಣಪಕ್ಷ ಚತುರ್ದಶಿ ದಿನ ಆಚರಿಸಲಾಗುತ್ತದೆ. ಈ ಹಬ್ಬವನ್ನು ದೈತ್ಯ ನರಕಾಸುರನ ಸಂಹಾರ ನಿಮಿತ್ತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಮೇಲೆ ರಕ್ತದ ಕಲೆಗಳು ಸಿಡಿದಿದ್ದವು. ಅದನ್ನು ತೊಳೆದುಕೊಳ್ಳಲೆಂಬಂತೆ ಶ್ರೀಕೃಷ್ಣನೂ ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು.

ನರಕಾಸುರನ ಹಿನ್ನೆಲೆ ಏನು? ಸ್ವತಃ ಶ್ರೀಕೃಷ್ಣನೇ ಅಭ್ಯಂಗ ಸ್ನಾನ ಮಾಡಿಕೊಂಡಿದ್ದು ಏಕೆ?
ನರಕಾಸುರನ ಹಿನ್ನೆಲೆ ಏನು? ಸ್ವತಃ ಶ್ರೀಕೃಷ್ಣನೇ ಅಭ್ಯಂಗ ಸ್ನಾನ ಮಾಡಿಕೊಂಡಿದ್ದು ಏಕೆ?
Follow us on

ನರಕಾಸುರನ ಎಂಬ ದೈತ್ಯ ರಾಕ್ಷಸ ಪರಮಾತ್ಮನ ವರಾಹಾವತಾರ ಕಾಲದಲ್ಲಿ ಭೂದೇವಿಯಲ್ಲಿ ಜನಿಸಿದ್ದ. (ಪಂಚ ಭೂತಾಭಿಮಾನಿಗಳಲ್ಲಿ ಕೊನೆಯವಳು ಭೂದೇವಿ. ಸಾಕ್ಷಾತ್ ಲಕ್ಷ್ಮೀ ಅಲ್ಲ) ಮೂಲ ಪ್ರಕೃತಿಯಾದ ಮಹಾಲಕ್ಷ್ಮಿಯ ಭೂರೂಪದ ಆವೇಶ ಭೂದೇವಿಯಲ್ಲಿತ್ತು. ಅವನು ಪ್ರಾಗ್ಜೋತಿಷಪುರದ ರಾಜನಾಗಿದ್ದ. ಭೂದೇವಿಯ ಸುತನಾದ್ದರಿಂದ ಇವನನ್ನು ಭೌಮಾಸುರ ಎನ್ನುತ್ತಿದ್ದರು. ನರಕಾಸುರನ ಬಳಿ ವೈಷ್ಣವಾಸ್ತ್ರ ಇತ್ತು ಮತ್ತು ಅವನಿಗೆ ಬ್ರಹ್ಮದೇವರಿಂದ ಅವಧ್ಯತ್ವ ವರವಿದ್ದಿತು. ಆದ್ದರಿಂದ ಅವನನ್ನು ಯಾರೂ ಸೋಲಿಸಲಾಗುತ್ತಿರಲಿಲ್ಲ.

ನರಕಾಸುರನು ದೇವ ಮಾತೆಯಾದ ಅದಿತಿಯ ಕುಂಡಲಿಗಳನ್ನು ಅಪಹರಿಸಿದ್ದ. ಅವನು ಎಲ್ಲಾ ಪ್ರಸಿದ್ಧ ರಾಜರುಗಳನ್ನೂ ಸೋಲಿಸಿ ಅವರ ಎಲ್ಲಾ ಪುತ್ರಿಯರನ್ನೂ ಅಪಹರಿಸಿದ್ದ. ಹೀಗೆ ಅಪಹರಿಸಿದ್ದ ರಾಜಕುಮಾರಿಯರ‌ ಸಂಖ್ಯೆಯೇ 16,100. ಈ ಎಲ್ಲಾ ರಾಜಕುಮಾರಿಯರೂ ಮೂಲತಃ: ಅಗ್ನಿಪುತ್ರರಾಗಿದ್ದು ಸ್ತ್ರೀತ್ವ ಪಡೆದು ಕೃಷ್ಣನ ಮಡದಿಯರಾಗಬೇಕೆಂದು ತಪಸ್ಸು ಮಾಡಿ ಜನಿಸಿದ್ದರು. ಅಂತಹ ಈ ಎಲ್ಲಾ ರಾಜಕುಮಾರಿಯರೂ ನರಕಾಸುರನ ಬಂಧನದಲ್ಲಿದ್ದರು. ಒಮ್ಮೆ ನಾರದರು ಇವರನ್ನು ಭೇಟಿಯಾಗಿ ಅತ್ಯಂತ ನಿಷ್ಠೆಯಿಂದ ಲಕ್ಷ್ಮೀ ವ್ರತ ಮಾಡಲು ಹೇಳಿದರು. ಅದರಂತೆ ಸಂಪೂರ್ಣ ಇಂದ್ರಿಯ ನಿಗ್ರಹವುಳ್ಳವರಾಗಿ ವ್ರತವನ್ನು ಮಾಡಿದರು. ವಾಯುದೇವರು ಇವರ ತಪಸ್ಸಿಗೆ ಮೆಚ್ಚಿ ಶ್ರೀ ಕೃಷ್ಣನೇ ಪತಿಯಾಗುತ್ತಾನೆಂದು ಹೇಳಿದ್ದರು.

ಒಮ್ಮೆ ನಾರದರು ಕೃಷ್ಣನ ಹಿರಿಮಡದಿ ರುಕ್ಮಿಣೀದೇವಿಗೆ ಪಾರಿಜಾತ ಪುಷ್ಪವನ್ನು ನೀಡಿ ಶ್ರೀ ಕೃಷ್ಣ ಮತ್ತು ರುಕ್ಮಣಿಯರ ಮಹಿಮೆಯನ್ನು ಪ್ರಶಂಸಿದರು. ಇದನ್ನು ನೋಡಿದ ಸತ್ಯಭಾಮೆ ತನ್ನನ್ನು ಹೊಗಳಲಿಲ್ಲ ಎಂದು ಕುಪಿತಳಾದಳು. ಇದನ್ನು ಗಮನಿಸಿದ ಶ್ರೀ ಕೃಷ್ಣನು ನಿನಗೆ ಇಂದ್ರ ಲೋಕದಿಂದ ಪಾರಿಜಾತ ವೃಕ್ಷವನ್ನೇ ತಂದು ಕೊಡುತ್ತೇನೆ ಎಂದನು. ಇಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆ ಇಬ್ಬರೂ ಸಾಕ್ಷಾತ್ ಲಕ್ಷ್ಮೀದೇವಿಯ ಶ್ರೀ ಮತ್ತು ಭೂ ರೂಪಗಳೇ. ಅವರಿಬ್ಬರಿಗೂ ಯಾವುದೇ ವ್ಯತ್ಯಾಸವಿಲ್ಲ. ಆದರೂ ಭೂಲೋಕದಲ್ಲಿ ಅವತಾರ ಮಾಡಿದುದರಿಂದ ಸವತಿ ಮತ್ಸರ ತೋರಿದ್ದಾರೆ ಎಂಬುದನ್ನು ಗಮನಿಸಬೇಕು.

ಇದೇ ಸಂದರ್ಭದಲ್ಲಿ ನರಕಾಸುರನಿಂದ ದೇವೇಂದ್ರನು ಪರಾಜಿತನಾಗಿ, ಎಲ್ಲಾ ದೇವತೆಗಳಿಂದ ಋಷಿಮುನಿಗಳಿಂದಲೂ ಕೂಡಿ ಕೃಷ್ಣನ ಸಹಾಯ ಕೋರಿದರು. ಕೃಷ್ಣನು ಸತ್ಯಭಾಮಾ ಸಹಿತನಾಗಿ ಗರುಡನ ಏರಿ ಪ್ರಾಗ್ಜ್ಯೋತಿಷಪುರವನ್ನು ತಲುಪಿ , ಅಲ್ಲಿ ಇದ್ದ ಎಲ್ಲಾ ದುರ್ಗಗಳನ್ನೂ ಭೇದಿಸಿ, ಐದು ಮುಖದ ಮುರಾಸುರನ ಸಂಹರಿಸಿ, *ಮುರಾರಿ ಎನಿಸಿದನು. ಆಗ ನರಕಾಸುರ ತನ್ನ 30 ಅಕ್ಷೋಹಿಣಿ ಸೈನ್ಯ ಸಮೇತನಾಗಿ ಯುದ್ಧಕ್ಕೆ ಬಂದು, ಬ್ರಹ್ಮದೇವರು ನೀಡಿದ್ದ *ಶತಘ್ನಿ* ಎಂಬ ಗದೆಯನ್ನು ಕೃಷ್ಣನ ಮೇಲೆ ಎಸೆಯಲು, ತಾನು ಸ್ವತಃ ಅಭೇದ್ಯ, ಅಚ್ಚೇಧ್ಯನಾದರೂ ಅಪ್ರಾಕೃತ ಶರೀರಿಯಾದರೂ, ಆ ಗದಾ ಪ್ರಹಾರದಿಂದ ಶ್ರಮಗೊಂಡವನಂತೆ ನಟಿಸುತ್ತ ಮೂರ್ಛಿತನಾದನು.

ಆಗ ಸತ್ಯಭಾಮೆಯು ಕೃಷ್ಣನ ಶಾಂಜ್ಞ ಬಿಲ್ಲನ್ನು ಹಿಡಿದು ನರಕಾಸುರನ ಜೊತೆಗೆ ಯುದ್ಧ ಮಾಡಿ ಸೋಲಿಸಿದಳು. (ಇಲ್ಲಿ ಲಕ್ಷ್ಮೀದೇವಿಯ ಭೂರೂಪದ ಆವಿಷ್ಟ ರೂಪದ ಮಗ ನರಕಾಸುರ ಮತ್ತು ಸಾಕ್ಷಾತ್ ಲಕ್ಷ್ಮೀ ದೇವಿಯ ಭೂರೂಪದ ಅವತಾರಳಾದ ಸತ್ಯಭಾಮೆಯಿಂದಲೇ ಪರಾಜಿತನಾದ ನರಕಾಸುರ ಎಂಬುದು ಗಮನಾರ್ಹ). ನಂತರ ಕೃಷ್ಣ ಪರಮಾತ್ಮ ಮೇಲೆದ್ದು ತನ್ನ ಸುದರ್ಶನ ಚಕ್ರದಿಂದ ನರಕಾಸುರನ ಶಿರಸ್ಸು ಛೇದಿಸಿದನು. ನಂತರ ಕೃಷ್ಣ ಸತ್ಯಭಾಮೆಯೊಂದಿಗೆ ನರಕಾಸುರನ ಅಂತ:ಪುರ ಪ್ರವೇಶಿಸಿ ಅಲ್ಲಿ ನರಕಾಸುರನ ತಾಯಿ ಭೂದೇವಿಯಿಂದ ಅದಿತಿಯ ಕುಂಡಲಿಗಳನ್ನು ಪಡೆದು, ದೇವೇಂದ್ನನಿಗೆ ನೀಡಿ, ನರಕಾಸುರನ ಪುತ್ರ ಭಗದತ್ತನನ್ನು ರಾಜನಾಗಿ ನೇಮಿಸಿದನು.

ನರಕಾಸುರನಿಂದ ಬಂಧಿತ 16,100 ರಾಜಕುವರಿಯರನ್ನೂ ಬಂಧ ಮುಕ್ತಗೊಳಿಸಿದನು. ಶ್ರೀಕೃಷ್ಣನು ಭಗದತ್ತನಿಗೆ ಹೀಗೆ ಆದೇಶಿಸುತ್ತಾನೆ – ಈ ಎಲ್ಲಾ ರಾಜಕುವರಿಯರಿಗೂ ಅಭ್ಯಂಜನ ಸ್ನಾನ ಮಾಡಿಸಿ, ಶ್ರೇಷ್ಠ ಉಡುಗೆ ತೊಡುಗೆ ಕೊಟ್ಟು ಕಳುಹಿಸು ಎಂದು. ಆಗ ಭೂದೇವಿ ತನ್ನ ಮಗ ನರಕಾಸುರನ ಕೊಂದ ರಾಜಕುಮಾರಿಯನ್ನು ವಿಮೋಚನೆ ಮಾಡಿಸಿದ ನೆನಪಿಗಾಗಿ ಈ ದಿನವನ್ನು ಹಬ್ಬವನ್ನಾಗಿ ಆಚರಿಸಬೇಕೆಂದು ಕೋರಿದರು.

ಏಕೆ ಅಭ್ಯಂಗ ಸ್ನಾನ ಮಾಡಿಕೊಳ್ಳಬೇಕು?

ಈ ದಿನ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ನರಕಾಸುರನು ಒಂದು ವರವನ್ನು ಕೇಳುತ್ತಾನೆ. “ನನ್ನ ಸಂಹಾರದ ನೆನಪಿಗಾಗಿ ಎಲ್ಲರೂ ಅಭ್ಯಂಗ ಸ್ನಾನವನ್ನು ಮಾಡಬೇಕು ಮತ್ತು ದೀಪ ಪ್ರಜ್ವಲನವನ್ನು ಮಾಡಬೇಕು” ಎಂದು ಕೇಳಿದುದರಿಂದ ಕೃಷ್ಣನು ಹಾಗೆಯೇ ಆಗಲಿ ಎಂದು ಅನುಗ್ರಹಿಸಿದ್ದನು.

ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಮೇಲೆ ರಕ್ತದ ಕಲೆಗಳು ಸಿಡಿದಿದ್ದವು. ಅದನ್ನು ತೊಳೆದುಕೊಳ್ಳಲೆಂಬಂತೆ ಶ್ರೀಕೃಷ್ಣನೂ ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು. ಅದರಂತೆ ಈ ದಿನ ಹಬ್ಬವನ್ನಾಗಿ ಆಚರಿಸಿ, ಅಭ್ಯಂಗ ಸ್ನಾನ ಮಾಡಿ ಕೊಳ್ಳುವ ಪರಿಪಾಠವಿದೆ. ನರಕಾಸುರ ಸಾಯುವ ಮುನ್ನ ಈ ದಿನವನ್ನು ಬಣ್ಣಬಣ್ಣದ ದೀಪಗಳನ್ನು ಹಚ್ಚಿ ಆಚರಿಸಬೇಕೆಂದು ಕೋರಿದನು. ಅದರಂತೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆ.
ಶ್ರೀಕೃಷ್ಣ ಅಸುರ ನರಕಾಸುರನ ವಿರುದ್ಧ ಜಯ ಸಾಧಿಸಿದಂತೆ ನಿಮ್ಮ ಬದುಕಿನಲ್ಲಿರುವ ಕಷ್ಟ, ಸವಾಲುಗಳನ್ನು ಗೆದ್ದು ಜಯ ಸಾಧಿಸುವಂತಾಗಲಿ. (ಲೇಖನ: ರವಿಶಾಸ್ತ್ರಿ ಸೋಮಶೇಖರ್)