
ಪ್ರಸ್ತುತ, ಚಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ದೇಹವನ್ನು ಬೆಚ್ಚಗಿಡಲು ನಮ್ಮ ಅಗತ್ಯಗಳು ಬದಲಿಸಿಕೊಳ್ಳುವುದು ಒಳ್ಳೆಯದು. ಅದರಲ್ಲಿಯೂ ಈ ಋತುವಿನಲ್ಲಿ ಸೇವನೆ ಮಾಡುವ ಆಹಾರದ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕು. ಏಕೆಂದರೆ ಅನಾರೋಗ್ಯಕರ ಆಹಾರ ಪದ್ಧತಿಗಳು ಹೃದಯದ ಆರೋಗ್ಯದ (Heart Health) ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಜನರು ಚಳಿಗಾಲದಲ್ಲಿ ಹೆಚ್ಚು ಎಣ್ಣೆಯುಕ್ತ ಮತ್ತು ಹೊಟ್ಟೆ ಬಿರಿಯುವಷ್ಟು ಆಹಾರ ಸೇವನೆ ಮಾಡಿದರೆ, ಇದು ಹೃದಯದ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಮತೋಲಿತ ಆಹಾರವ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ಮೂಲಕ ಹೃದಯವನ್ನು ಆರೋಗ್ಯಕರವಾಗಿಟ್ಟುಕೊಳ್ಳಬೇಕು. ಅದರ ಜೊತೆಗೆ ಯಾವ ಆಹಾರಗಳು ನಿಮ್ಮ ಹೃದಯವನ್ನು ದುರ್ಬಲಗೊಳಿಸಬಹುದು ಎಂಬುದನ್ನು ತಿಳಿದುಕೊಳ್ಳಿ.
ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಅಜಿತ್ ಜೈನ್ ಹೇಳುವ ಪ್ರಕಾರ, ಚಳಿಗಾಲದಲ್ಲಿ ಜನರು ಹೆಚ್ಚಾಗಿ ಹುರಿದ ಮತ್ತು ಮಸಾಲೆಯುಕ್ತ ಆಹಾರ, ತುಂಬಾ ಸಿಹಿ ಮತ್ತು ಅತಿಯಾಗಿ ಉಪ್ಪುಸಹಿತ ಆಹಾರ ಮತ್ತು ಕೆಂಪು ಮಾಂಸವನ್ನು ತಿನ್ನುತ್ತಾರೆ. ಈ ಮೂರು ರೀತಿಯ ಆಹಾರಗಳು ಕೂಡ ಹೃದಯವನ್ನು ದುರ್ಬಲಗೊಳಿಸಬಹುದು. ಶೀತ ವಾತಾವರಣದಲ್ಲಿ ದೇಹದ ಚಯಾಪಚಯ ಕ್ರಿಯೆ ನಿಧಾನವಾಗುವುದರಿಂದ ಈ ರೀತಿಯಾಗುತ್ತದೆ. ಜೊತೆಗೆ ನಿಧಾನ ರಕ್ತ ಪರಿಚಲನೆ ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ. ಹುರಿದ ಮತ್ತು ಮಸಾಲೆಯುಕ್ತ ಆಹಾರಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ ಮತ್ತು ಕೊಲೆಸ್ಟ್ರಾಲ್ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚು ಉಪ್ಪು ಸೇವಿಸುವುದರಿಂದ ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ವಸ್ತುಗಳ ನಿರಂತರ ಸೇವನೆಯು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ಈ ವಸ್ತುಗಳನ್ನು ತಪ್ಪಿಸುವುದು ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಒಳ್ಳೆಯದು.
ಇದನ್ನೂ ಓದಿ: ಹೃದಯ ಆರೋಗ್ಯವಾಗಿರಬೇಕು ಅಂದ್ರೆ ಮೊದಲು ಈ ಆಹಾರಗಳ ಸೇವನೆ ಮಾಡಬೇಕು
ಚಳಿಗಾಲದಲ್ಲಿ ಸಮತೋಲಿತ ಆಹಾರವನ್ನು ಸೇವಿಸುವುದು ಒಳ್ಳೆಯದು. ಹಣ್ಣು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವಿಸಿ, ವಿಶೇಷವಾಗಿ ಕಿತ್ತಳೆ ಮತ್ತು ಸೇಬುಗಳಂತಹ ಕಾಲೋಚಿತ ಹಣ್ಣುಗಳು ಮತ್ತು ಕಾಲೋಚಿತ ತರಕಾರಿಗಳ ಸೇವನೆ ಮಾಡಿ. ಹೃದಯವನ್ನು ಆರೋಗ್ಯಕರವಾಗಿಡುವ ಓಟ್ಸ್, ಗಂಜಿ ಮತ್ತು ಧಾನ್ಯಗಳ ಸೇವನೆಯನ್ನು ಹೆಚ್ಚಿಸಿಕೊಳ್ಳಿ. ಮೀನು, ಬೇಳೆ ಮತ್ತು ಬೀಜಗಳು ಪ್ರೋಟೀನ್‌ನ ಉತ್ತಮ ಮೂಲಗಳಾಗಿದ್ದು ಹೃದಯಕ್ಕೆ ಒಳ್ಳೆಯದು. ಇದರ ಜೊತೆಗೆ ಅಗಸೆ ಬೀಜಗಳು ಮತ್ತು ಒಮೆಗಾ -3 ಭರಿತ ಆಹಾರಗಳನ್ನು ಸೇರಿಸಿಕೊಳ್ಳಿ. ಹೃದಯವನ್ನು ಆರೋಗ್ಯವಾಗಿಡಲು, ಸಾಕಷ್ಟು ನೀರು ಮತ್ತು ಇತರ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಸಹ ಅತ್ಯಗತ್ಯ. ಈ ರೀತಿಯಾಗಿ, ಸಮತೋಲಿತ ಮತ್ತು ಪೌಷ್ಟಿಕ ಆಹಾರವು ಚಳಿಗಾಲದಲ್ಲಿ ಹೃದಯವನ್ನು ರಕ್ಷಿಸುತ್ತದೆ. ಇದೆಲ್ಲದರ ಜೊತೆಗೆ ಪ್ರತಿದಿನ ಲಘು ವ್ಯಾಯಾಮ ಮಾಡಿ, ಸಾಕಷ್ಟು ನಿದ್ರೆ ಮಾಡುವುದನ್ನು ಮರೆಯಬೇಡಿ. ಆರೋಗ್ಯ ಕಾಪಾಡಿಕೊಳ್ಳಲು ಧೂಮಪಾನ ಮತ್ತು ಮದ್ಯಪಾನವನ್ನು ತಪ್ಪಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:12 pm, Sat, 10 January 26