
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನವರು ಆಫೀಸ್ ಕೆಲಸ, ಮನೆ ನೋಡಿಕೊಳ್ಳುವುದು ಹೀಗೆ ಕಾರ್ಯನಿರತ ವೇಳಾಪಟ್ಟಿಯನ್ನು ಹಾಕಿಕೊಂಡಿರುತ್ತಾರೆ. ಇದರ ಪರಿಣಾಮವೇ ಅವರಿಗೆ ಅವರ ಬಗ್ಗೆ ಕಾಳಜಿ ವಹಿಸುವುದಕ್ಕೆ ಅಥವಾ ನೋಡಿಕೊಳ್ಳುವುದಕ್ಕೆ ಹೆಚ್ಚಿನ ಸಮಯವೇ ಸಿಗುವುದಿಲ್ಲ. ಇವೆಲ್ಲವೂ ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಷ್ಟೆಲ್ಲಾ ಆಗುತ್ತಿದ್ದರೂ ಕೂಡ ಅನೇಕರಿಗೆ ಇಂತಹ ಸೂಕ್ಷ್ಮತೆಗಳು ತಿಳಿದೇ ಇರುವುದಿಲ್ಲ. ಇನ್ನು ಕೆಲವು ದೈನಂದಿನ ಅಭ್ಯಾಸಗಳು (Daily Habits) ಕೂಡ ಮೂಳೆಗಳನ್ನು (Bone Health) ನಿಧಾನವಾಗಿ ದುರ್ಬಲಗೊಳಿಸುತ್ತವೆ. ಇದು ಮೊಣಕಾಲು ನೋವು, ಆಯಾಸ ಮತ್ತು ನಡೆಯಲು ತೊಂದರೆಗೆ ಕಾರಣವಾಗುತ್ತದೆ. ಪರಿಣಾಮವಾಗಿ, ಜನರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮೂಳೆ ಸಂಬಂಧಿತ ಸಮಸ್ಯೆಗಳನ್ನು ಕಂಡುಬರುತ್ತದೆ. ಕೇವಲ ವಯಸ್ಸಾದ ಮೇಲೆ ಈ ರೀತಿಯಾಗುವುದಿಲ್ಲ ಬದಲಾಗಿ, ನಮ್ಮ ದೈನಂದಿನ ಅಭ್ಯಾಸಗಳು ಕೂಡ ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ರೀತಿ ನಿಮಗೂ ಆಗುತ್ತಿದ್ದರೆ ಈ ಸ್ಟೋರಿ ನಿಮಗಾಗಿ.
ಸಾಮಾನ್ಯವಾಗಿ ಮೂಳೆಗಳನ್ನು ಬಲಪಡಿಸಿಕೊಳ್ಳಲು ಪ್ರತಿಯೊಬ್ಬರ ದೇಹಕ್ಕೂ ವಿಟಮಿನ್ ಡಿ ಅಗತ್ಯ. ಆದರೆ ಇದರಲ್ಲಿ ಕೊರತೆ ಉಂಟಾದಾಗ ಮೂಳೆ ನೋವಿನಂತಹ ಸಮಸ್ಯೆಗಳನ್ನು ಉಂಟಾಗಬಹುದು. ಈ ರೀತಿ ಉಂಟಾದ ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಡೈರಿ ಉತ್ಪನ್ನಗಳು ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ ಅದಕ್ಕಿಂತಲೂ ಉತ್ತಮ ಸೂರ್ಯನ ಬೆಳಕು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಕೆಲಸದ ಕಡೆ ಹೆಚ್ಚಾಗಿ ಗಮನ ಕೊಡುತ್ತಿರುವುದರಿಂದ ಸೂರ್ಯನ ಬೆಳಕಿಗೆ ಹೋಗಲು ಸಮಯವೇ ಇರುವುದಿಲ್ಲ. ಇದು ವಿಟಮಿನ್ ಡಿ ಕೊರತೆಗೆ ಪ್ರಮುಖ ಕಾರಣವಾಗಿದೆ. ಆದ್ದರಿಂದ, ಪ್ರತಿನಿತ್ಯ ಕನಿಷ್ಠ 20- 30 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ಕಳೆಯುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನವರು ಕುರ್ಚಿಗಳ ಮೇಲೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುತ್ತಾರೆ. ಆದರೆ ಒಂದೇ ಜಾಗದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ರಕ್ತ ಪರಿಚಲನೆ ಕಡಿಮೆಯಾಗುತ್ತದೆ, ಇದು ಮೂಳೆಯ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಮೂಳೆಗಳು ದುರ್ಬಲಗೊಳ್ಳುತ್ತವೆ. ಮಾತ್ರವಲ್ಲ, ಬೆನ್ನು ಮತ್ತು ಮೊಣಕಾಲು ನೋವು ಹೆಚ್ಚಾಗುತ್ತದೆ. ಅದರ ಜೊತೆಗೆ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಆದ್ದರಿಂದ, ಪ್ರತಿ 1- 2 ಗಂಟೆಗಳಿಗೊಮ್ಮೆ ವಿರಾಮ ತೆಗೆದುಕೊಂಡು ಬೇರೆ ಚಟುವಟಿಕೆಗಳನ್ನು ಮಾಡಬೇಕು ಅಥವಾ ಒಂದು ಸಣ್ಣ ವಾಕ್ ಮಾಡುವುದು ಒಳ್ಳೆಯದು.
ದೇಹದಲ್ಲಿರುವ ಮೂಳೆಗಳು ಗಟ್ಟುಮುಟ್ಟಾಗಿರಲು ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸೇವನೆ ಅತ್ಯಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಸಂಸ್ಕರಿಸಿದ ಆಹಾರ, ಫಾಸ್ಟ್ ಫುಡ್ ಮತ್ತು ಚಹಾ ಮತ್ತು ಕಾಫಿಗಳಂತಹ ಆಹಾರಗಳನ್ನು ಸೇವನೆ ಮಾಡುತ್ತಿದ್ದಾರೆ. ಇದು ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತದೆ. ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕೊರತೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತದೆ, ಮೂಳೆ ಸಾಂದ್ರತೆ ಕಡಿಮೆಯಾಗಲು ಮತ್ತು ಆಯಾಸ ಬೇಗನೆ ಉಂಟಾಗಲು ಇದೇ ಕಾರಣ. ಇದನ್ನು ತಡೆಗಟ್ಟಲು, ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಭರಿತ ಆಹಾರಗಳನ್ನು ಸೇರಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ: ದಿನಕ್ಕೆ 10,000 ಹೆಜ್ಜೆ ನಡೆಯುವವರು ಈ ವಿಷಯ ತಿಳಿದುಕೊಳ್ಳಲೇಬೇಕು!
ಜನರು ಸಾಮಾನ್ಯವಾಗಿ ನೀರು ಕುಡಿಯುವುದು ಜಲಸಂಚಯನಕ್ಕಾಗಿ ಮಾತ್ರ ಎಂದು ಭಾವಿಸುತ್ತಾರೆ. ಆದರೆ ಅದು ಸತ್ಯವಲ್ಲ. ದೇಹದಲ್ಲಿ ನೀರಿನ ಕೊರತೆಯು ಮೂಳೆ ಮಜ್ಜೆ ಮತ್ತು ಕೀಲುಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತದೆ. ಪ್ರತಿದಿನ ಸಾಕಷ್ಟು ನೀರು ಕುಡಿಯದಿದ್ದರೆ ಒಣ ಕೀಲುಗಳು, ನೋವು ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯಲ್ಲಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಸಾಧ್ಯವಾದಷ್ಟು ನೀರು ಕುಡಿಯಿರಿ. ಇಲ್ಲವಾದಲ್ಲಿ ಕನಿಷ್ಠಪಕ್ಷ 8 ಗ್ಲಾಸ್ ಆದರೂ ನೀರನ್ನು ಕುಡಿಯುವುದನ್ನು ಮರೆಯಬೇಡಿ.
ಇತ್ತೀಚಿನ ದಿನಗಳಲ್ಲಿ, ಜನರು ತಮ್ಮ ಮೊಬೈಲ್ ಫೋನ್‌ಗಳಿಗೆ ಎಷ್ಟು ವ್ಯಸನಿಗಳಾಗಿದ್ದಾರೆಂದರೆ ಅವುಗಳನ್ನು ಬಳಸದೆ ಮಲಗುವುದು ಕಷ್ಟಕರವಾಗುತ್ತಿದೆ. ಪರಿಣಾಮವಾಗಿ, ಜನರು ತಡರಾತ್ರಿವರೆಗೂ ಟಿವಿ ಕಾರ್ಯಕ್ರಮಗಳನ್ನು, ತಮ್ಮ ಫೋನ್‌ಗಳಲ್ಲಿ ರೀಲ್ಸ್ ಹಾಗೂ ಗಂಟೆಗಟ್ಟಲೆ ಗೇಮ್ ಆಡುತ್ತಾ ತಮ್ಮ ಸಮಯ ಕಳೆಯುತ್ತಾರೆ, ಇದು ಅವರ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ತಡರಾತ್ರಿ ಮಲಗುವುದು ಮೂಳೆ ಕೋಶಗಳನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ