ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲುವುದಿಲ್ಲ. ಅದರಲ್ಲೂ ಕಡಿಮೆ ಕ್ಯಾಲಿರಿಯಿದ್ದು ಹೆಚ್ಚು ಪೋಷಕಾಂಶವುಳ್ಳ ಆಹಾರ ಸೇವನೆ ಚಳಿಗಾಲದಲ್ಲಿ ಅವಶ್ಯಕವಾಗಿದೆ. ಆಗ ಮಾತ್ರ ದೇಹದ ತೂಕವನ್ನು ಸರಿಯಾದ ಪ್ರಮಾಣದಲ್ಲಿ ಕಾಯ್ದುಕೊಂಡು ಆರೋಗ್ಯಯುತವಾಗಿಡಲು ಸಾಧ್ಯ. ಹೀಗಾಗಿ ಚಳಿಗಾಲದಲ್ಲಿ ನಿಮ್ಮ ಡಯೆಟ್ ಪಟ್ಟಿಯಲ್ಲಿ ಒಂದಿಷ್ಟು ಹಸಿರು ಸೊಪ್ಪು ಮತ್ತು ತರಕಾರಿಗಳು ಅವಶ್ಯಕವಾಗಿರಲಿ. ಹಸಿರು ಸೊಪ್ಪುಗಳು ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತವೆ. ಹಾಗಾದರೆ ಯಾವೆಲ್ಲಾ ಹಸಿರು ತರಕಾರಿಗಳು ನಿಮ್ಮ ಚಳಿಗಾಲದ ಡಯೆಟ್ಗೆ ಸರಿಹೊಂದಬಹುದು ಎನ್ನುವ ಮಾಹಿತಿ ಇಲ್ಲಿದೆ.
ಪಾಲಕ್ ಸೊಪ್ಪು
ಡಯೆಟ್ ಮಾಡುವವರಿಗೆ ಪಾಲಕ್ ಸೊಪ್ಪು ಉತ್ತಮ ಆಹಾರವಾಗಿದೆ. ಕಡಿಮೆ ಕ್ಯಾಲೋರಿ ಹೊಂದಿರುವ ಸೊಪ್ಪು ದೇಹದ ಅತಿಯಾದ ತೂಕವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ. ಪಾಲಕ್ ರೊಟ್ಟಿ, ಪಾಲಕ್ ಜ್ಯೂಸ್ ಹೀಗೆ ಹಲವು ರೀತಿಯಲ್ಲಿ ನಿಮ್ಮ ದೇಹಕ್ಕೆ ಪಾಲಕ್ ಅನ್ನು ಸೇವಿಸಬಹುದು. ಪಾಲಕ್ ಸಪ್ಪು ನಿಮ್ಮ ನರಮಂಡಲದ ಕಾರ್ಯವನ್ನು ಹಾಗೂ ಮೆದುಳಿನ ಕ್ರಿಯಾಶೀಲತೆಯನ್ನು ಉತ್ತಮಗೊಳಿಸುತ್ತದೆ. ಹೀಗಾಗಿ ನಿಮ್ಮ ಡಯೆಟ್ ಲಿಸ್ಟ್ನಲ್ಲಿ ಅದು ಮುಖ್ಯವಾಗಿ ಚಳಿಗಾಲದಲ್ಲಿ ಪಾಲಕ್ ಸೊಪ್ಪನ್ನು ಸೇರಿಸಿಕೊಳ್ಳುವುದು ಒಳಿತು.
ಹಸಿರು ಬಟಾಣಿ
ಹಸಿರು ಬಟಾಣಿ ನಿಮ್ಮ ತೂಕ ಇಳಿಕೆಯಲ್ಲಿ ಉತ್ತಮ ಆಹಾರವಾಗಿದೆ. ಅಧಿಕ ನಾರಿನಾಂಶ ಹೊಂದಿರುವ ಹಸಿರು ಬಟಾಣಿ ಸೂಪ್, ಪಲ್ಯ, ಸಾಂಬಾರ್ಗಳಲ್ಲೂ ಬಳಸಬಹುದು. ಇದು ದೇಹಕ್ಕೆ ಬೇಕಾದ ಪ್ರೋಟೀನ್ಗಳನ್ನು ಒದಗಿಸಿ ತೂಕ ಇಳಿಕೆಗೂ ಸಹಾಯಕವಾಗಿದೆ.
ಎಲೆಕೋಸು
ಬಹುಮುಖಿ ಆರೋಗ್ಯ ಹೆಚ್ಚಿಸುವ ಗುಣವುಳ್ಳ ತರಕಾರಿಗಳಲ್ಲಿ ಎಲೆಕೋಸು ಕೂಡ ಒಂದು. ಎಲೆಕೋಸಿನ ಸೇವನೆಯಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತದೆ. ಸ್ನಾಯುಗಳಲ್ಲಾಗುವ ಉರಿಯೂತವನ್ನು ಇದು ತಪ್ಪಿಸುತ್ತದೆ. ಹೃದಯದ ಆರೋಗ್ಯಕ್ಕೂ ಎಲೆಕೋಸು ಉತ್ತಮ ಆಹಾರವಾಗಿದೆ. ಅಧಿಕ ಫೈಬರ್ ಅಂಶಗಳನ್ನು ಹೊಂದಿರುವ ಹೂಕೋಸು ನಿಮ್ಮ ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.
ಬ್ರೊಕೋಲಿ
ಎಲೆಕೋಸು ಜಾತಿಗೆ ಸೇರಿದ ಇನ್ನೊಂದು ಸಸ್ಯ ಬ್ರೋಕೋಲಿ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ ಹೃದಯದ ಆರೋಗ್ಯವನ್ನು ಉತ್ತಮಗೊಳಿಸಲು ಬ್ರೊಕೋಲಿ ಸಹಾಯಕವಾಗಿದೆ. ಬ್ರೊಕೋಲಿಯಲ್ಲಿರುವ ವಿಟಮಿನ್ ಕೆ ಅಂಶವು ನಿಮ್ಮ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಸು, ದೇಹದ ಮೇಲಾದ ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ನಿಮ್ಮ ಡಯೆಟ್ ಹೊಂದಿಕೊಳ್ಳುವ ಬ್ರೊಕೋಲಿಯನ್ನು ಸಲಾಡ್ ಅಥವಾ ಸೂಪ್ ರೀತಿಯಲ್ಲಿ ನೀವು ಸೇವಿಸಬಹುದು.
ಮಂತೆ ಮತ್ತು ಮೆಂತೆ ಸೊಪ್ಪು
ಹೇರಳವಾದ ವಿಟಮಿನ್ ಎ, ಸಿ, ಕೆ ಮತ್ತು ಕ್ಯಾಲ್ಸಿಯಂ, ಆ್ಯಂಟಿಆಕ್ಸಿಡೆಂಟ್, ಪಿರಿಡಾಕ್ಸಿನ್ ಸೇರಿದಂತೆ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಮೆಂತೆ ಮತ್ತು ಮಂತೆಯ ಸೊಪ್ಪು ಹೊಂದಿದೆ. ನೀವು ಡಯೆಟ್ ಸಮಯದಲ್ಲಿ ಮೆಂತೆ ಸೊಪ್ಪಿನ ಪಲ್ಯವನ್ನು ಮಾಡಿ ಸೇವಿಬಹುದು. ಅಲ್ಲದೆ ಮೆಂತೆ ನಿಮ್ಮ ಕೂದಲ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ನಿಮ್ಮ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಪುದೀನಾ ಮತ್ತು ಸೌತೆಕಾಯಿ
ಯಥೇಚ್ಛವಾದ ಫೈಬರ್ ಅಂಶಗಳನ್ನು ಹೊಂದಿರುವ ಪುದೀನಾ ಮತ್ತು ಸೌತೆಕಾಯಿ ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ. ಪುದೀನಾ ಮತ್ತು ಸೌತೆಕಾಯಿಯ ಸಲಾಡ್, ರೈಟಾ ಹೆಚ್ಚು ರುಚಿಯಾಗಿರುತ್ತದೆ. ಇವು ನಿಮ್ಮ ದೇಹದಲ್ಲಿನ ಅತಿಯಾದ ತೂಕ ನಷ್ಟಕ್ಕೂ ಸಹಾಯಕವಾಗಿದೆ.
ಬ್ರಸೆಲ್ಸ್ ಮೊಗ್ಗು
ಬ್ರಸೆಲ್ಸ್ ಮೊಗ್ಗು ಜೆಮ್ಮಿಫೆರಾ ತಳಿಯ ಎಲೆಕೋಸುಗಳ ಗುಂಪಿನ ಸದಸ್ಯ. ಹೇರಳವಾದ ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುವ ಈ ಸಸ್ಯ ವಿಟಮಿನ್ ಸಿ ಮತ್ತು ಕೆಗಳನ್ನೂ ಹೊಂದಿದೆ. ಇದು ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ ಅತಿಯಾದ ತೂಕ ಇಳಿಕೆಗೆ ಸಹಾಯಕವಾಗಿದೆ. ಬ್ರಸೆಲ್ಸ್ ಮೊಗ್ಗುಗಳು ಕಡಿಮೆ ಕಾರ್ಬೋಹೈಡ್ರೇಟ್ ಅಂಶಗಳನ್ನು ಹೊಂದಿರುವುದರಿಂದ ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ.
ಇದನ್ನೂ ಓದಿ:
Winter Health Tips: ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯಿಂದ ಸೈನಸ್ ಹೆಚ್ಚಾಗಬಹುದು: ಎಚ್ಚರಿಕೆಯಿಂದಿರಿ