ಚಳಿಗಾಲದಲ್ಲೇಕೆ ಕ್ಯಾಪ್ಸಿಕಂ ಅನ್ನು ಹೆಚ್ಚೆಚ್ಚು ಸೇವಿಸಬೇಕು? ಇದರ ಹಿಂದಿದೆ ಮಹತ್ವದ ಕಾರಣ

ಕ್ಯಾಪ್ಸಿಕಂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು ಇವುಗಳ ನಿಯಮಿತ ಸೇವನೆಯಿಂದ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲಿಯೂ ಈ ತರಕಾರಿಯನ್ನು ಚಳಿಗಾಲದಲ್ಲಿ ಕಡ್ಡಾಯವಾಗಿ ಸೇವನೆ ಮಾಡಬೇಕು. ಏಕೆಂದರೆ ಇದರಲ್ಲಿರುವ ಆರೋಗ್ಯಕರ ಗುಣಗಳು ಚಳಿಗಾಲದಲ್ಲಿ ಬರುವ ಅನಾರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ. ಹಾಗಾದರೆ ಈ ತರಕಾರಿಯಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ? ಇದು ಯಾರಿಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲೇಕೆ ಕ್ಯಾಪ್ಸಿಕಂ ಅನ್ನು ಹೆಚ್ಚೆಚ್ಚು ಸೇವಿಸಬೇಕು? ಇದರ ಹಿಂದಿದೆ ಮಹತ್ವದ ಕಾರಣ
ಚಳಿಗಾಲದಲ್ಲಿ ಕ್ಯಾಪ್ಸಿಕಂ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳು

Updated on: Nov 18, 2025 | 3:45 PM

ಕ್ಯಾಪ್ಸಿಕಂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಇದು ವರ್ಷವಿಡೀ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಚಳಿಗಾಲದಲ್ಲಿ ಯಥೇಚ್ಛವಾಗಿ, ತಾಜಾತನದಿಂದ ಕೂಡಿರುವ ಕ್ಯಾಪ್ಸಿಕಂ (Capsicum) ಸಿಗುತ್ತದೆ. ಹೆಚ್ಚಾಗಿ ನಾವು ಸೇವಿಸುವ ಕ್ಯಾಪ್ಸಿಕಂ ಹಸಿರು ಬಣ್ಣದಲ್ಲಿರುತ್ತದೆ. ಆದರೆ ಇದು ಹಳದಿ ಮತ್ತು ಕೆಂಪು ಬಣ್ಣಗಳಲ್ಲಿಯೂ ಲಭ್ಯವಿದೆ. ಇದು ನಿಮಗೆ ತಿಳಿದಿರಬಹುದು. ಆದರೂ ಕೂಡ ಹಸಿರು ಕ್ಯಾಪ್ಸಿಕಂ ಬಳಕೆ ಮಾಡುವಷ್ಟು ಇವುಗಳನ್ನು ಮಾಡುವುದಿಲ್ಲ. ಹಾಗಾಗಿ ಕ್ಯಾಪ್ಸಿಕಂ ಎಂದಾಕ್ಷಣ ಹಸಿರಾಗಿ ಗುಂಡು ಗುಂಡಗಿರುವುದೇ ಕಣ್ಣಮುಂದೆ ಬರುತ್ತದೆ. ಈ ತರಕಾರಿ ನೋಡುವುದಕ್ಕೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಇದರ ಆರೋಗ್ಯಕರ ಗುಣಗಳು ದೇಹವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನು ಚಳಿಗಾಲದಲ್ಲಿಯೂ ಇದನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಆದರೆ ಇದಕ್ಕೆ ಕಾರಣವೇನು, ಯಾರಿಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಕ್ಯಾಪ್ಸಿಕಂ ವಿಟಮಿನ್ ಸಿ, ಕೆ, ಎ, ಫೈಬರ್ ಮತ್ತು ಮೆಗ್ನೀಸಿಯಮ್‌ನಂತಹ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಾತ್ರವಲ್ಲ, ಕ್ಯಾಪ್ಸಿಕಂನಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ನಂತಹ ಕ್ಯಾರೊಟಿನಾಯ್ಡ್ ಗಳಿವೆ. ಅವು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಅವು ದೇಹಕ್ಕೆ ಅಗತ್ಯವಿರುವಷ್ಟು ಶಕ್ತಿಯನ್ನು ಪೂರೈಸುತ್ತದೆ. ಅಷ್ಟೇ ಅಲ್ಲ, ತೂಕ ಇಳಿಸಿಕೊಳ್ಳಲು, ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಸಹಕಾರಿಯಾಗಿವೆ.

ರೋಗಗಳಿಂದ ರಕ್ಷಿಸುತ್ತದೆ

ಈ ತರಕಾರಿಯಲ್ಲಿ ಫ್ಲೇವನಾಯ್ಡ್ ಗಳು ಎಂಬ ಉತ್ಕರ್ಷಣ ನಿರೋಧಕಗಳಿವೆ. ಅವು ದೇಹವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತವೆ. ಕೆಂಪು ಕ್ಯಾಪ್ಸಿಕಂನಲ್ಲಿರುವ ಉತ್ಕರ್ಷಣ ನಿರೋಧಕ ಕ್ಯಾಪ್ಸಾಂಥಿನ್ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಕ್ಯಾಪ್ಸಿಕಂ ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾಗಿದೆ. ಅವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ದೇಹದಲ್ಲಿ ರಕ್ತದ ಕೊರತೆಯಿಂದ ರಕ್ತಹೀನತೆ ಉಂಟಾಗಿದ್ದರೆ, ಮೊದಲು ಅವರು ಕ್ಯಾಪ್ಸಿಕಂ ಸೇವನೆ ಮಾಡಬೇಕು ಏಕೆಂದರೆ ಇದರಲ್ಲಿರುವ ಕಬ್ಬಿಣದ ಅಂಶವು ರಕ್ತಹೀನತೆಯ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲೇಕೆ ಪರ್ಸಿಮನ್‌ ಹಣ್ಣನ್ನು ಹೆಚ್ಚೆಚ್ಚು ಸೇವಿಸಬೇಕು? ಇದರ ಹಿಂದಿದೆ ಮುಖ್ಯ ಕಾರಣ

ತೂಕ ಕಡಿಮೆ ಮಾಡಿಕೊಳ್ಳಲು, ಕ್ಯಾನ್ಸರ್ ತಡೆಯಲು ಸಹಕಾರಿ

ಕ್ಯಾಪ್ಸಿಕಂ ಉತ್ಕರ್ಷಣ ನಿರೋಧಕ ಲೈಕೋಪೀನ್ ಮತ್ತು ವಿಟಮಿನ್ ಸಿ ಮತ್ತು ಎ ಯ ಉತ್ತಮ ಮೂಲವಾಗಿದೆ. ಈ ಎಲ್ಲಾ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತವೆ. ಅಷ್ಟೇ ಅಲ್ಲ, ಇದು ತೂಕ ನಷ್ಟಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ತೂಕ ಹೆಚ್ಚಾಗಿದ್ದು ಅದನ್ನು ಕಡಿಮೆ ಮಾಡಿಕೊಳ್ಳಲು ಹೆಣಗಾಡುತ್ತಿರುವವರು ತಮ್ಮ ಆಹಾರದಲ್ಲಿ ಕ್ಯಾಪ್ಸಿಕಂ ಅನ್ನು ಸೇರಿಸಿಕೊಳ್ಳಬಹುದು. ಇದನ್ನು ತಿನ್ನುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅದರಲ್ಲಿಯೂ ಚಳಿಗಾಲದಲ್ಲಿ ನಾವು ಹೆಚ್ಚು ಹೆಚ್ಚು ಆಹಾರಗಳನ್ನು ಸೇವನೆ ಮಾಡುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಅದಕ್ಕಾಗಿಯೇ ಈ ತರಕಾರಿ ನಿಯಮಿತ ಸೇವನೆಯಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ಅಷ್ಟೇ ಅಲ್ಲ, ಕ್ಯಾಪ್ಸಿಕಂಗಳು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಕೂಡ ಸಹಾಯ ಮಾಡುತ್ತವೆ. ಅವುಗಳು ಎಪಿಜೆನಿನ್, ಲುಪಲೋಲ್, ಕ್ಯಾಪ್ಸೈಸಿನೇಟ್ ಮತ್ತು ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿರುತ್ತವೆ. ಇವು ಕ್ಯಾನ್ಸರ್ ವಿರುದ್ಧ ಹೋರಾಡುವ ಉತ್ಕರ್ಷಣ ನಿರೋಧಕಗಳಾಗಿವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ