ಬಿಲ್ವಪತ್ರೆ
ಶಿವನಿಗೆ ಅತ್ಯಂತ ಪ್ರೀಯವಾದ ವಸ್ತುಗಳಲ್ಲಿ ಬಿಲ್ವಪತ್ರೆ ಅಗ್ರ ಸ್ಥಾನದಲ್ಲಿರುತ್ತದೆ. ನೀರು ಮತ್ತು ಬಿಲ್ವಪತ್ರೆ ಇದ್ದರೆ ಸಾಕು ಭಗವಾನ್ ಶಂಕರನನ್ನು ಮೆಚ್ಚಿಸಬಹುದು. ಆ ಪರಮೇಶ್ವರ ಬಿಲ್ವದಳಕ್ಕೆ ಪರಮಾನಂದನಾಗುತ್ತಾನೆ ಎಂದು ಪುರಾಣಗಳಲ್ಲಿಯೂ ಹೇಳಲಾಗಿದೆ. ಈ ಪವಿತ್ರವಾದ ಬಿಲ್ವಪತ್ರೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಅಲ್ಲದೆ ಪ್ರತಿದಿನ ಈ ಒಂದು ಎಲೆ ತಿಂದರೆ ವೈದ್ಯರ ಬಳಿಗೆ ಹೋಗುವ ಅಗತ್ಯವಿರುವುದಿಲ್ಲಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಸಿಗುವ ಉಪಯೋಗಗಳೇನು? ಯಾವ ರೀತಿ ಬಳಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಆರೋಗ್ಯ ಪ್ರಯೋಜನಗಳೇನು?
- ಈ ಎಲೆಗಳಲ್ಲಿ ವಿಟಮಿನ್ ಎ, ಬಿ 1, ಬಿ 2, ಸಿ, ಖನಿಜಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ ಸೇರಿದಂತೆ ಅನೇಕ ರೀತಿಯ ಪೋಷಕಾಂಶಗಳಿವೆ. ಇದು ದೇಹವನ್ನು ತಂಪಾಗಿಸುತ್ತದೆ. ಅಲ್ಲದೆ ಇದನ್ನು ಸೇವನೆ ಮಾಡುವುದರಿಂದ ಹೃದ್ರೋಗ ಮತ್ತು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳು ಕಡಿಮೆಯಾಗುತ್ತವೆ.
- ಈ ಎಲೆಗಳಲ್ಲಿ ಹೆಚ್ಚಿನ ಪೊಟ್ಯಾಸಿಯಮ್ ಅಂಶವಿದ್ದು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯದು. ಈ ಮರದಿಂದ ಬರುವ ಗಾಳಿಯು ದೇಹಕ್ಕೆ ಸೋಂಕು ತಗುಲದಂತೆ ನೋಡಿಕೊಳ್ಳುವ ಮೂಲಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
- ಬಿಲ್ವಪತ್ರೆಯಲ್ಲಿರುವ ಕಬ್ಬಿಣದ ಅಂಶವು ರಕ್ತದಲ್ಲಿ ಕೆಂಪು ರಕ್ತ ಕಣಗಳು ಮತ್ತು ಹಿಮೋಗ್ಲೋಬಿನ್ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ.
- ಬಿಲ್ವದಳದ ಸೇವನೆಯಿಂದ ಅಧಿಕ ಕೊಲೆಸ್ಟ್ರಾಲ್ ಸಹ ಕಡಿಮೆಯಾಗುತ್ತದೆ. ಓರಲ್ ಥ್ರಷ್ ನಿಂದ ಬಳಲುತ್ತಿರುವವರು ಇದನ್ನು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು.
- ಅತಿಸಾರ, ಬೊಕ್ಕೆಗಳು ಮತ್ತು ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಈ ಎಲೆ ತುಂಬಾ ಪ್ರಯೋಜನಕಾರಿಯಾಗಿದೆ.
- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಸೇವನೆ ಮಾಡುವುದರಿಂದ ಗ್ಯಾಸ್, ಆಮ್ಲೀಯತೆ ಮತ್ತು ಅಜೀರ್ಣದಿಂದ ಪರಿಹಾರ ಸಿಗುತ್ತದೆ.
- ಈ ಎಲೆಗಳಲ್ಲಿರುವ ಕ್ಯಾಲ್ಸಿಯಂ ಅಂಶ ಹಲ್ಲುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಜ್ವರ, ಶೀತ, ಕೆಮ್ಮು ಮತ್ತು ಅಲರ್ಜಿಯಿಂದ ಬಳಲುತ್ತಿರುವವರಿಗೆ ಈ ದಳ ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂಓದಿ: ಗೊರಕೆ ಸಮಸ್ಯೆಗೆ ಈ ಮನೆಮದ್ದುಗಳನ್ನು ಬಳಸಿ ನಿವಾರಣೆ ಮಾಡಿಕೊಳ್ಳಿ
ಈ ರೀತಿ ಸೇವನೆ ಮಾಡಿ:
- ಬಿಲ್ವಪತ್ರೆಯನ್ನು ಒಣಗಿಸಿ ಪುಡಿ ಮಾಡಿ ಅದರ ಜೊತೆಗೆ ಉಪ್ಪು ಮತ್ತು ಕರಿಮೆಣಸನ್ನು ಸೇರಿಸಿ ತಿನ್ನಿ. ಇದು ನಿಮಗೆ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ಈ ಮಿಶ್ರಣವನ್ನು ಮಜ್ಜಿಗೆಯ ಜೊತೆ ಕುಡಿಯುವುದು ಉತ್ತಮ.
- ಬಿಲ್ವದ ಎಲೆಗಳನ್ನು ಒಣಗಿಸಿ 1 ಚಮಚ ಪುಡಿಯನ್ನು ಒಂದು ಲೋಟ ಮಜ್ಜಿಗೆಗೆ ಹಾಕಿ ಕುಡಿಯುವುದರಿಂದ ಹಸಿವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಸರಿಯಾಗಿ ಹಸಿವು ಆಗುವುದಿಲ್ಲ ಎಂದರೆ ಇದರ ಸೇವನೆ ಉತ್ತಮ ಆಯ್ಕೆಯಾಗಿದೆ.
- ಬಿಲ್ವ ಎಲೆಗಳ ಕಷಾಯ ಜಠರದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಬಿಲ್ವಪತ್ರೆಯ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಹೊಟ್ಟೆಯ ಅನೇಕ ಕಾಯಿಲೆಗಳು ದೂರವಾಗುತ್ತವೆ.
- ಊಟದ ಜೊತೆ ತಂಬುಳಿ, ಚಟ್ನಿ ಮಾಡಿಯೂ ಸೇವನೆ ಮಾಡಬಹುದು. ಇದು ಕೂಡ ಆರೋಗ್ಯಕ್ಕೆ ಒಳ್ಳೆಯದು. ಇಲ್ಲವಾದಲ್ಲಿ ಪ್ರತಿದಿನ ಇದರ ಎಲೆಗಳನ್ನು ಜಗಿದು ತಿನ್ನುವುದು ಕೂಡ ಒಳ್ಳೆಯದಾಗಿದೆ.
ಸೂಚನೆ: ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ. ಆದರೂ ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ