ಮೊಬೈಲ್ ಫೋನ್ಗಳು ಮತ್ತು ವೈರ್ಲೆಸ್ ತಂತ್ರಜ್ಞಾನಗಳಿಂದ ಬರುವ ವಿದ್ಯುತ್ಕಾಂತೀಯ ವಿಕಿರಣವು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬ ಮಾತನ್ನು ಹೊಸ ಅಧ್ಯಯನವೊಂದು ಸುಳ್ಳು ಎಂದು ಬಹಿರಂಗಪಡಿಸಿದೆ. ವೈರ್ ಲೆಸ್ ತಂತ್ರಜ್ಞಾನಗಳು ರವಾನಿಸುವ ರೇಡಿಯೋ ತರಂಗಗಳು ತುಂಬಾ ದುರ್ಬಲವಾಗಿದ್ದು, ಅದರಿಂದ ಯಾವುದೇ ರೀತಿಯ ಹಾನಿಯಿಲ್ಲ. ಅಲ್ಲದೆ ಇವು ಡಿಎನ್ಎಗೆ ಹಾನಿ ಮಾಡಲು ಸಹ ಅವುಗಳಲ್ಲಿ ಸಾಕಷ್ಟು ಶಕ್ತಿ ಇಲ್ಲ ಜೊತೆಗೆ ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆಯೂ ಇಲ್ಲ ಎಂದು ಅಧ್ಯಯನ ತಿಳಿಸಿದೆ. ಈ ಹಿಂದೆ ಇದೇ ವಿಷಯವಾಗಿ ಅನೇಕ ರೀತಿಯ ಚರ್ಚೆ ನಡೆದಿತ್ತು. ಬಳಿಕ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಬೆಂಬಲಿತವಾಗಿ ಹೊಸ ಅಧ್ಯಯನ ನಡೆದಿದ್ದು ಇದನ್ನು ಎನ್ವಿರಾನ್ಮೆಂಟ್ ಇಂಟರ್ನ್ಯಾಷನಲ್ನಲ್ಲಿ ಪ್ರಕಟಿಸಲಾಗಿದೆ.
“ಮೊಬೈಲ್ ಗಳಿಂದ ಮೆದುಳಿನ ಕ್ಯಾನ್ಸರ್ ಅಥವಾ ಇತರೆ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಗಳು ಬರುವುದಿಲ್ಲ ಎಂದು ಪುರಾವೆಗಳಿಂದ ಬಹಿರಂಗವಾಗಿದೆ.” ಎಂದು ಪ್ರಮುಖ ಲೇಖಕ ಕೆನ್ ಕರಿಪಿಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ವಿಕಿರಣ ರಕ್ಷಣೆ ಮತ್ತು ಪರಮಾಣು ಸುರಕ್ಷತಾ ಸಂಸ್ಥೆ (ಅರ್ಪನ್ಸಾ) ಈ ವಿಷಯದ ಬಗ್ಗೆ 5,000 ಕ್ಕೂ ಹೆಚ್ಚು ಅಧ್ಯಯನಗಳನ್ನು ಪರಿಶೀಲಿಸಿದೆ, 22 ದೇಶಗಳ 63 ಅಧ್ಯಯನಗಳನ್ನು ಕೇಂದ್ರೀಕರಿಸಿದೆ ಎಂಬುದು ತಿಳಿದು ಬಂದಿದೆ. ಮೊಬೈಲ್ ಫೋನ್ ಗಳು ಮತ್ತು ವೈರ್ ಲೆಸ್ ತಂತ್ರಜ್ಞಾನದಿಂದ ಹೊರಸೂಸುವ ರೇಡಿಯೋ ತರಂಗಗಳು ದೇಹವನ್ನು ನೇರವಾಗಿ ಹಾನಿಗೊಳಿಸುವಷ್ಟು ಶಕ್ತಿಯನ್ನು ಹೊಂದಿಲ್ಲ ಎಂಬುದಕ್ಕೆ ಪುರಾವೆಗಳು ಲಭ್ಯವಾಗಿದ್ದು ಇಲ್ಲಿಯವರೆಗೆ, ಯಾವುದೇ ಅಧ್ಯಯನಗಳು ಮೊಬೈಲ್ ಫೋನ್ ಬಳಕೆ ಮತ್ತು ಕ್ಯಾನ್ಸರ್ ನಡುವೆ ಸಂಬಂಧವಿದೆ ಎಂಬುದನ್ನು ದೃಢಪಡಿಸಿಲ್ಲ. ಆದ್ದರಿಂದ ವೈರ್ ಲೆಸ್ ತಂತ್ರಜ್ಞಾನಗಳು ಕ್ಯಾನ್ಸರ್ ಗೆ ಕಾರಣವಾಗುವುದಿಲ್ಲ ಎಂದು ಹೇಳಬಹುದಾಗಿದೆ.
ಮೊಬೈಲ್ ಫೋನ್ ಗಳು ರೇಡಿಯೋಫ್ರೀಕ್ವೆನ್ಸಿ (ಆರ್ ಎಫ್) ತರಂಗಗಳನ್ನು ಬಳಸಿಕೊಂಡು ಸಂಕೇತಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಫೋನ್ ನೆಟ್ ವರ್ಕ್ ಗಳು ಬಳಸುವ ರೇಡಿಯೋಫ್ರೀಕ್ವೆನ್ಸಿ ತರಂಗಗಳು ಅಯಾನೀಕರಣವಲ್ಲದ ವಿಕಿರಣದ ಒಂದು ರೂಪವಾಗಿದೆ. ಈ ವಿಕಿರಣವು ಡೇಟಾವನ್ನು ರವಾನಿಸಲು ಸಣ್ಣ ಪ್ರಮಾಣದ ಶಕ್ತಿಯನ್ನು ಬಳಸುತ್ತದೆ, ಮಾನವ ದೇಹ ಅಥವಾ ಡಿಎನ್ಎ (ಜೀನ್ಗಳು) ಗೆ ಹಾನಿ ಮಾಡಲು ಬೇಕಾಗುವಷ್ಟು ಶಕ್ತಿಯನ್ನು ಹೊಂದಿರುವುದಿಲ್ಲ. ಎಲ್ಲಾ 4 ಜಿ, 5 ಜಿ, ವೈ- ಫೈ ಮತ್ತು ಬ್ಲೂಟೂತ್ ಡೇಟಾವನ್ನು ರವಾನಿಸಲು ರೇಡಿಯೋ ತರಂಗಗಳನ್ನು ಅವಲಂಬಿಸಿದ್ದರೂ, ದೇಹದ ಅಂಗಾಂಶಗಳನ್ನು ಬಿಸಿ ಮಾಡಲು ಅಥವಾ ಡಿಎನ್ಎಗೆ ಹಾನಿ ಮಾಡಲು ಸಾಧ್ಯವಿಲ್ಲ ಎಂದು ಅಧ್ಯಯನ ತಿಳಿಸಿದೆ. ಭಾರತವು 1.2 ಬಿಲಿಯನ್ ಮೊಬೈಲ್ ಫೋನ್ ಬಳಕೆದಾರರನ್ನು ಮತ್ತು 600 ಬಿಲಿಯನ್ ಸ್ಮಾರ್ಟ್ಫೋನ್ ಬಳಕೆದಾರರನ್ನು ಹೊಂದಿದೆ. ಸ್ಮಾರ್ಟ್ಫೋನ್ ವಿಭಾಗದಲ್ಲಿ ಈ ಸಂಖ್ಯೆ 1.55 ಬಿಲಿಯನ್ ತಲುಪುವ ನಿರೀಕ್ಷೆಯಿದೆ.
ಏಮ್ಸ್ ಡಾ. ಅಭಿಷೇಕ್ ಶಂಕರ್ ಹೇಳುವ ಪ್ರಕಾರ, “ಸೆಲ್ ಫೋನ್ಗಳಿಂದ ಬರುವ ವಿಕಿರಣವು ಅಯಾನೀಕರಣಗೊಳ್ಳುವುದಿಲ್ಲ ಹಾಗಾಗಿ ಅವು ಕ್ಯಾನ್ಸರ್ ಗೆ ಕಾರಣವಾಗುವುದಿಲ್ಲ. ಮತ್ತೊಂದೆಡೆ, ಎಕ್ಸ್- ರೇ ಯಂತ್ರದಿಂದ ಬರುವ ವಿಕಿರಣವು ಅಯಾನೀಕರಣಗೊಳ್ಳುವುದರಿಂದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ಡಾ. ಶಂಕರ್ ಹೇಳಿದ್ದಾರೆ. ಅಲ್ಲದೆ ಎಲ್ಲ ತಜ್ಞರು ಹೇಳುವಂತೆ ಧೂಮಪಾನದಂತಹ ಅಭ್ಯಾಸಗಳನ್ನು ಮಿತಿಗೊಳಿಸಲು ಶಿಫಾರಸು ಮಾಡುತ್ತಾರೆ. ಅಲ್ಲದೆ ಮೊಬೈಲ್ ಫೋನ್ ಗಳ ಬಳಕೆಯನ್ನು ಆದಷ್ಟು ಮಿತಿಗೊಳಿಸಲು ಶಿಫಾರಸು ಮಾಡುತ್ತಾರೆ, ಇಲ್ಲವಾದಲ್ಲಿ ಇದರಿಂದ ತಲೆನೋವು, ಆತಂಕ ಮತ್ತು ಶ್ರವಣ ನಷ್ಟಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: ಪ್ರವಾಸದ ಸಮಯದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಈ ರೀತಿ ಮಾಡಿ
ಕಳೆದ ಮೂರು ದಶಕಗಳಲ್ಲಿ ಮೊಬೈಲ್ ಫೋನ್ ಬಳಕೆ ಮತ್ತು ಕ್ಯಾನ್ಸರ್ ಬಗ್ಗೆ ಅನೇಕ ಅಧ್ಯಯನಗಳನ್ನು ಮಾಡಲಾಗಿದೆ.
ಕಾಸ್ಮೋಸ್ ಅಧ್ಯಯನ: 2024 ರಲ್ಲಿ ಪ್ರಕಟವಾದ ಮೊಬೈಲ್ ಫೋನ್ಗಳು ಮತ್ತು ಆರೋಗ್ಯದ ಕುರಿತ ಅಧ್ಯಯನ (ಕಾಸ್ಮೋಸ್) 250,000 ಕ್ಕೂ ಹೆಚ್ಚು ಮೊಬೈಲ್ ಬಳಕೆದಾರರನ್ನು ಒಳಗೊಂಡ ಡೇಟಾವನ್ನು ಹೊಂದಿದೆ, ಅವರಲ್ಲಿ ಅನೇಕರು 15 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಮೊಬೈಲ್ ಬಳಕೆ ಮಾಡುತ್ತಿರುವವರಾಗಿದ್ದರೂ ಕೂಡ ಮೆದುಳಿಗೆ ಸಂಬಂಧ ಪಟ್ಟಂತೆ ಯಾವುದೇ ರೀತಿಯ ಅಪಾಯವಿಲ್ಲ ಎಂಬುದನ್ನು ತಿಳಿಸಿದೆ.
ಇಂಟರ್ಫೋನ್ ಅಧ್ಯಯನ: 13 ದೇಶಗಳ ಸಂಶೋಧಕರು ಮೆದುಳಿನ ಗೆಡ್ಡೆಗಳಿರುವ 5,000 ಕ್ಕೂ ಹೆಚ್ಚು ಜನರಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನೋಡಿದ್ದಾರೆ. ಒಟ್ಟಾರೆಯಾಗಿ, ತಮ್ಮ ಸೆಲ್ ಫೋನ್ ಗಳನ್ನು ಹೆಚ್ಚು ಬಳಸುವ 10% ಜನರಲ್ಲಿ ಒಂದು ನಿರ್ದಿಷ್ಟ ವ್ಯಕ್ತಿಗೆ ಮೆದುಳಿನ ಗೆಡ್ಡೆಯ ಅಪಾಯವಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
50 ವರ್ಷಗಳ ವಿಮರ್ಶೆ: 1966 ಮತ್ತು 2016 ರ ನಡುವೆ ನಡೆಸಿದ 22 ಅಧ್ಯಯನಗಳ ವಿಮರ್ಶೆಯು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸೆಲ್ ಫೋನ್ ಗಳನ್ನು ಬಳಸಿದವರಿಗೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಸೂಚಿಸಿದೆ.
2018 ಟ್ರೆಂಡ್ ರಿಸರ್ಚ್: ಆಸ್ಟ್ರೇಲಿಯಾದ ಸಂಶೋಧಕರು ಕ್ಯಾನ್ಸರ್ ಮತ್ತು ಸೆಲ್ ಫೋನ್ ಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ