ಮಗುವಿನ ಒಳಿತಿಗೆ, ಬೆಳವಣಿಗೆಗೆ ಯಾವ ರೀತಿಯ ಅಭ್ಯಾಸವು ಸಹಕಾರಿಯಾಗುತ್ತದೆ? ಎಂಬ ಪ್ರಶ್ನೆ ಎಲ್ಲರಿಗೂ ಒಂದಿಲ್ಲೊಂದು ಸಂದರ್ಭದಲ್ಲಿ ಕಾಡದಿರದು. ಈ ಲೇಖನಗಳ ಸರಣಿಯಲ್ಲಿ ಮೊದಲು ಹೇಳಿದಂತೆ ಯೋಗವು ಪ್ರತಿಯೊಬ್ಬರಿಗೂ ಸಹಾಯಕಾರಿಯೇ. ಈ ಲೇಖನದಲ್ಲಿ ಗರ್ಭಿಣಿಯರಿಗೆ ಯೋಗವು ಹೇಗೆ ಸಹಾಯಕಾರಿಯಾಗಬಲ್ಲುದೇ? ಹೌದು ಎಂದಾದಲ್ಲಿ ಹೇಗೆ ಎಂಬುದನ್ನು ಅರಿಯೋಣ.ವೃತ್ತಿಪರ ಯೋಗ ಶಿಕ್ಷಕ, ಪರಿಣಿತ ನಾಗೇಂದ್ರ ಗದ್ದೆಮನೆ ಅವರು ಟಿವಿ9 ಕನ್ನಡ ಡಿಜಿಟಲ್ಗಾಗಿ ಪ್ರಸ್ತುಪಡಿಸುತ್ತಿರುವ. ‘ಬದುಕಿಗಾಗಿ ಯೋಗ’ ಸರಣಿಯ ಈವಾರದ ಅಂಕಣದಲ್ಲಿ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.
ಗರ್ಭಧಾರಣೆ ಎಂಬುದೊಂದು ಪವಿತ್ರ ಕ್ರಿಯೆ, ಗರ್ಭಾವಧಿ ಎಂಬುದು ಯಜ್ಞದಂತೆ. ಅದು ಸಂತತಿಯ, ಕುಲದ ಮುಂದಿನ ಪೀಳಿಗೆಯನ್ನು ಬೆಳೆಸುವುದು. ಹಾಗಾಗಿ ಹೆಚ್ಚು ಹೆಚ್ಚು ಮನಸ್ಸನ್ನು ಧನಾತ್ಮಕವಾಗಿ ಇರಿಸುವುದು, ಒಳ್ಳೆಯ ಆಹಾರ ಸೇವನೆ ಇವೆಲ್ಲವು ಮಗುವಿನ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುವವು. ಮೊಳಕೆಯಿರುವಾಗಲೇ ಅದಕ್ಕೆ ಸಂಸ್ಕಾರಗಳನ್ನು ಕೊಡುತ್ತ ಬಂದರೆ ಮುಂದೆ ಸತ್ಪ್ರಜೆಯಾಗಿ ಸಮಾಜದ ಒಳಿತಿಗೆ ಶ್ರಮಿಸುವ ಪ್ರಜೆಯಾಗಬಹುದು. ಹಾಗಾಗಿ ತಮ್ಮ ಮಗುವಿನ ಭವಿಷ್ಯ ಹೇಗಿರಬೇಕು ಎಂಬುದನ್ನು ನಿರ್ಧರಿಸಿ, ಅದಕ್ಕನುಗುಣವಾಗಿ ಪಾಲಿಸಬೇಕು.
ಹಿಂದಿನ ಲೇಖನದಲ್ಲಿ ಆಹಾರವು ಹೇಗೆ ಮನಸ್ಸಿನ ಮೇಲೆ ಪರಿಣಾಮ ಬೀರುವುದು ಎಂಬುದನ್ನು ವಿಶ್ಲೇಷಿಸಲಾಗಿದೆ (ಲೇಖನದ ಕೊಂಡಿಯನ್ನು ಈ ಲೇಖನದ ಕೊನೆಗೆ ನೀಡಲಾಗಿದೆ).
ಹೆಚ್ಚಾಗಿ ಸ್ತ್ರೀಯರು ಗರ್ಭಾವಧಿಯಲ್ಲಿ ಮಾನಸಿಕ ಒತ್ತಡ, anxiety, ಖಿನ್ನತೆ, ನೋವು, ರಕ್ತದೊತ್ತಡ, ಅಸ್ವಸ್ಥತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಯೋಗಾಭ್ಯಾಸವು ಈ ಸಮಸ್ಯೆಗಳಿಂದ ಹೊರಬರಲು ಸಹಾಯಕಾರಿಯಾಗುವುದು.
ಗರ್ಭಾವಧಿಯಲ್ಲಿ ತಾಯಿಯ ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ದೇಹಕ್ಕೆ ಬಹಳ ವಿಶ್ರಾಂತಿಯು ಬೇಕಾಗುತ್ತದೆ. ಕೆಲವೊಂದು ಸುಲಭವಾದ ಆಸನಗಳ ಅಭ್ಯಾಸವು ತಾಯಿ ಹಾಗೂ ಮಗುವಿನ ದೇಹದಲ್ಲಿ ಸುಗಮವಾದ ರಕ್ತಸಂಚಾರ ಹಾಗೂ ಅವಶ್ಯಕವಾದ ಆಮ್ಲಜನಕವನ್ನು ಗಳಿಸಲು ಸಹಕಾರಿಯಾಗಬಲ್ಲವು. ಹಾಗಾದರೆ ಯಾವ ಆಸನಗಳನ್ನು ಗರ್ಭಿಣಿಯರು ಮಾಡಬಹುದು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಆದರೆ ಯೋಗ ಪರಿಣಿತರ ಸಮಕ್ಷಮದಲ್ಲೇ ಗರ್ಭಿಣಿಯರು ಆಸನಗಳನ್ನು ಮಾಡಬೇಕು ಎಂಬುದನ್ನು ಮರೆಯಬಾರದು.
ಕೆಲವೊಂದು ಸುಲಭವಾದ ಆಸನಗಳು ಹೀಗಿವೆ
ವೃಕ್ಷಾಸನ –
ವೃಕ್ಷಾಸನವು ಗರ್ಭಿಣಿಯ ಸೊಂಟ ಹಾಗೂ ಪೃಷ್ಠಖಂಡಗಳನ್ನು ಬಲಿಷ್ಠಗೊಳಿಸಲು ಸಹಕಾರಿಯಾಗುವುದು. ಮೊಣಕಾಲುಗಳನ್ನು ಸುದೃಢ ಹಾಗೂ ಸ್ಥಿರತೆಯನ್ನು ವರ್ಧಿಸುವುದು.
ಮಲಾಸನ–
ಮಲಾಸನವು ದೇಹದ ಕೆಳ ಭಾಗಗಳನ್ನು ಸುದೃಢಗೊಳಿಸಲು ಸಹಕಾರಿ. ಮೀನಖಂಡ, ನಿತಂಬಸ್ನಾಯುಗಳು, hamstring. ಸೊಂಟ ಇವುಗಳನ್ನು ಬಲಿಷ್ಠಗೊಳಿಸಲು ಸಹಕಾರಿ.
ತಾಡಾಸನ–
ತಾಡಾಸನವು ತಾಯಿಯ ದೇಹದ ಸಮತೋಲನ ಹಾಗೂ ಸ್ಥಿರತೆ (balance)ಯನ್ನು ಕಾಪಾಡಿಕೊಳ್ಳಲು ಸಹಕಾರಿ.
ಅಧೋಮುಖ ಶ್ವಾನಾಸನ-
ಈ ಆಸನವು ಮಾನಸಿಕ ಒತ್ತಡ, anxiety, ಸಾಮಾನ್ಯವಾಗಿ ಗರ್ಭಾವಧಿಯಲ್ಲಿ ಕಾಣಿಸಿಕೊಳ್ಳವು ನೋವು ಇವುಗಳ ನಿವಾರಣೆಗೆ ಸಹಕಾರಿ.
ವೀರಭದ್ರಾಸನ–
ವೀರಭದ್ರಾಸನವು ಕಾಲಿನ ಮಾಂಸಖಂಡಗಳನ್ನು ಸಕ್ರಿಯಗೊಳಿಸಿ, ರಕ್ತಸಂಚಾರವನ್ನು ಅಧಿಕಗೊಳಿಸುವುದು. ದೇಹದ ಸ್ಥಿರತೆ ಹಾಗೂ ದೀರ್ಘ ಉಸಿರಾಟ ಕ್ರಿಯೆಗೆ ಪ್ರೇರೇಪಿಸುವುದು
ಉತ್ಕಟಾಸನ–
ಉತ್ಕಟಾಸನವು ಕಾಲುಗಳನ್ನು ಬಲಿಷ್ಠಗೊಳಿಸುವುದಲ್ಲದೇ, ಗರ್ಭಾವಧಿಯ ಮೊದಲ ಹಂತದಲ್ಲಿ ತಾಯಿಗೆ ಮುಂದೆ ಹೆಚ್ಚಾಗುವ ದೇಹದ ತೂಕವನ್ನು ಸಮದೂಗಿಸಿಕೊಳ್ಳಲು ಪೂರ್ವಭಾವಿಯಾಗಿ ಸಹಕಾರಿ.
ಹೀಗೆ ಹಲವಾರು ಆಸನಗಳನ್ನು ಯೋಗ ಶಿಕ್ಷಕರ ಮಾರ್ಗದರ್ಶನದೊಂದಿಗೆ, ಗರ್ಭಿಣಿಯ ಸಾಮರ್ಥ್ಯ ಹಾಗೂ ಅನುಕೂಲದಂತೆ ಅಭ್ಯಸಿಸಬಹುದು.
ಪ್ರಾಣಾಯಾಮಗಳು (ಯೋಗಶಿಕ್ಷಕರ ಮಾರ್ಗದರ್ಶನದಲ್ಲಿಯೇ ಅಭ್ಯಸಿಸಬೇಕು)
ದೀರ್ಘ ಉಸಿರಾಟ ಪ್ರಕ್ರಿಯೆ- ನಿಧಾನವಾಗಿ ದೀರ್ಘವಾದ ಉಚ್ಛ್ಬಾಸ, ಕ್ರಿಯೆಯನ್ನು ಅನುಭವಿಸಬೇಕು, ಸಂಪೂರ್ಣವಾದ ನಿಶ್ವಾಸ. ಉಚ್ಛ್ವಾಸಕ್ಕಿಂತ ನಿಶ್ವಾಸ ಪ್ರಕ್ರಿಯೆಯನ್ನು ದೀರ್ಘಗೊಳಿಸುವ ಪ್ರಯತ್ನವಿರಬೇಕು. ಅನುಲೋಮ-ವಿಲೋಮ ಪ್ರಾಣಾಯಾಮ, ನಾಡಿಶೋಧನ ಪ್ರಾಣಾಯಾಮ ಮುಂತಾದ ಪ್ರಾಣಾಯಾಮಗಳನ್ನು ಹೆಚ್ಚು ಹೆಚ್ಚು ಅಭ್ಯಸಿಸಿದಂತೆ ತಾಯಿಯ ಹಾಗೂ ಮಗುವಿನ ಮನಸ್ಸಿನ ಮೇಲ ಒಳ್ಳೆಯ ಪರಿಣಾಮವನ್ನು ಬೀರುವವು. ಮೇಲೆ ಉಲ್ಲೇಖಿಸಲಾದ ಆಸನಗಳು, ಪ್ರಾಣಾಯಾಮಗಳನ್ನು ಅಥವಾ ಇನ್ನುಳಿದ ಯಾವುದೇ ಯೋಗಾಭ್ಯಾಸಗಳನ್ನು ವೈದ್ಯರ ಹಾಗೂ ಯೋಗ ಶಿಕ್ಷಕರ ಮಾರ್ಗದರ್ಶನವಿಲ್ಲದೇ ತಮಗೆ ತಿಳಿದಂತೆ ಮಾಡಕೂಡದು.
ಪ್ರತಿದಿನವೂ ಯೋಗಾಭ್ಯಾಸ, ಹಿತ-ಮಿತವಾದ ಆಹಾರ ಸೇವನೆ, ಮನಸ್ಸನ್ನು ಮುದಗೊಳಿಸುವ ಸಂಗೀತಗಳ ಶ್ರವಣ, ಓಂಕಾರ ಶ್ರವಣ, ಒಳ್ಳೆಯ ಪುಸ್ತಕಗಳ ಪಠನ ಇಂತಹ ಧನಾತ್ಕಕ ಕ್ರಿಯೆಗಳು ಮಗುವಿನ ಮನಸ್ಸಿನ ಬಲವಾದ ಧನಾತ್ಮಕ ಪರಿಣಾಮವನ್ನು ಬೀರುವವು. ಹಾಗಾಗಿ ಋಣಾತ್ಮಕತೆಗೆ ದಾರಿ ಮಾಡಿಕೊಡದೇ, ಗರ್ಭಾವಧಿಯನ್ನು ಸುಂದರವಾಗಿ ಕಳೆದಲ್ಲಿ ಮುಂದಿನ ಪೀಳಿಗೆಯು ತನ್ನ, ಕುಟುಂಬದ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು.
ಲೇಖಕರ ಪರಿಚಯ
ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರಾದ ನಾಗೇಂದ್ರ ಗದ್ದೇಮನೆ ಅವರು ವಿಯೆಟ್ನಾಂನಲ್ಲಿ ವೃತ್ತಿಪರ ಯೋಗ ಶಿಕ್ಷಕರು. ಯೋಗದಲ್ಲಿ ಆಳವಾದ ನಿಪುಣತೆ ಪಡೆದ ಅವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ, ಯಜುರ್ವೇದ ಸಂಹಿತಾಂತ ಅಧ್ಯಯನವನ್ನೂ ಮಾಡಿದ್ದಾರೆ. ಪುರಾತನ ಯೋಗವನ್ನು ಹೊಸ ತಲೆಮಾರಿಗೆ, ಅದರಲ್ಲೂ ವಿದೇಶದಲ್ಲಿ ಪ್ರಚುರಪಡಿಸುತ್ತಿರುವ ಹೆಮ್ಮೆ ನಾಗೇಂದ್ರ ಅವರದು. ಜತೆಗೆ ಎಲೆಕ್ಟ್ರಾನಿಕ್ ಗಾಡ್ಜೆಟ್, ಆಟೋಮೊಬೈಲ್ ಕ್ಷೇತ್ರದಲ್ಲೂ ಅಪಾರ ಆಶಕ್ತಿ ಹೊಂದಿದ್ದಾರೆ. ತಮ್ಮ ಪ್ರವಾಸದ ಅನುಭವಗಳನ್ನು ಯೂಟ್ಯೂಬ್ನಲ್ಲಿ NAGENDRA GADDEMANE ಎಂಬ ಹೆಸರಿನ ವ್ಲೋಗ್ನ್ನು ಸಹ ನಡೆಸುತ್ತಿದ್ದಾರೆ.
ಮಾಹಿತಿ ಮತ್ತು ಸಲಹೆಗಳಿಗಾಗಿ ಅವರ ವಾಟ್ಸ್ಆ್ಯಪ್ ಸಂಖ್ಯೆ: 8762939451
ಇದನ್ನೂ ಓದಿ:
Yoga Malike: ದಿನವಿಡೀ ದೈಹಿಕ ಶ್ರಮದ ಕೆಲಸ ಮಾಡುವವರಿಗೆ ಯೋಗ ಅವಶ್ಯವೇ?
ವಿಯೆಟ್ನಾಂ ಯೋಗ: ಬುದ್ಧನ ನಾಡಲ್ಲಿ ಯೋಗ ಕಲಿಸುವ ಕರ್ನಾಟಕದ ಯೋಗ ಶಿಕ್ಷಕರು ಬರೆಯುತ್ತಾರೆ..
(Can Pregnant Women Do Yoga here is the expert tips for good health)
Published On - 6:25 am, Sun, 15 August 21