ಸಾಮಾನ್ಯವಾಗಿ ಮನೆಯಲ್ಲಿ ಅನ್ನದೊಂದಿಗೆ ಕಲಸಿಕೊಂಡು, ಇಲ್ಲವೇ ಊಟ ಮಾಡಿದ ನಂತರದಲ್ಲಿ ಒಂದು ಲೋಟ ಮೊಸರು ಕುಡಿಯದೇ ಇದ್ದರೆ ಕೆಲವರಿಗೆ ಸಮಾಧಾನವೇ ಇಲ್ಲ. ಅಷ್ಟರ ಮಟ್ಟಿಗೆ ಮೊಸರು ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಅದರಂತೆ ಮೊಸರಿನಲ್ಲಿ ವಿಟಮಿನ್ ಬಿ -2, ವಿಟಮಿನ್ ಬಿ -12, ರಂಜಕ, ಕ್ಯಾಲ್ಸಿಯಂ, ಮೆಗ್ನೀಶಿಯಮ್, ಪೊಟ್ಯಾಸಿಯಮ್ ಮತ್ತು ಇತರೆ ಖನಿಜಾಂಶವಿದ್ದು, ಇದು ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಜತೆಗೆ ಮೊಸರು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಬೇಸಿಗೆಯಲ್ಲಿ ಮೊಸರು ಹೆಚ್ಚು ಸೇವಿಸುವುದರಿಂದ ದೇಹದ ಉಷ್ಣತೆಯು ಸ್ಥಿರವಾಗಿರುತ್ತದೆ. ಆದಾಗ್ಯೂ, ಮೊಸರಿನೊಂದಿಗೆ ಕೆಲವು ಪದಾರ್ಥಗಳನ್ನು ತಿನ್ನಬಾರದು ಇದು ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ಮೊಸರನ್ನು ಸೇವಿಸುವ ಕ್ರಮ ಹೇಗೆ ಎನ್ನುವುದರ ಕುರಿತು ತಿಳಿದುಕೊಳ್ಳುವುದು ಸೂಕ್ತ.
ಬೇಸಿಗೆಯಲ್ಲಿ ತಾಜಾ ಮೊಸರು ಅಥವಾ ಮಜ್ಜಿಗೆ ದೇಹವನ್ನು ತಂಪಾಗಿಸುತ್ತದೆ. ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸುವ ಪ್ರೋಬಯಾಟಿಕ್ ಪದಾರ್ಥಗಳನ್ನು ಹೊಂದಿದೆ. ಮೊಸರು ಜೀರ್ಣಾಂಗ ಮತ್ತು ಕರುಳನ್ನು ಆರೋಗ್ಯವಾಗಿರಿಸುತ್ತದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ನಾವು ಹೆಚ್ಚು ಮೊಸರು ಸೇವಿಸುತ್ತೇವೆ. ಆದರೆ ಮೊಸರಿನೊಂದಿಗೆ ಕೆಲವು ಪದಾರ್ಥಗಳನ್ನು ಸೇವಿಸುವುದರಿಂದ ತೊಂದರೆಯಾಗುತ್ತದೆ ಅವುಗಳು ಈ ಕೆಳಗಿನಂತಿವೆ.
ಮೊಸರು ಸೇವಿಸಿದ ಕೂಡಲೇ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಡಿ
ಮೊಸರಿನೊಂದಿಗೆ ಆಹಾರವನ್ನು ಸೇವಿಸಿದ ಕೂಡಲೇ ಹೆಚ್ಚು ಎಣ್ಣೆ ಮತ್ತು ತುಪ್ಪದಿಂದ ಕರಿದ ಆಹಾರವನ್ನು ಸೇವಿಸಬೇಡಿ. ಇದು ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಅಜೀರ್ಣಕ್ಕೆ ಕಾರಣ.
ಮೀನು ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದನ್ನು ಕಡಿಮೆ ಮಾಡಿ
ಆಯುರ್ವೇದದ ಪ್ರಕಾರ, ಒಂದೇ ಸಮಯದಲ್ಲಿ ಅನೇಕ ಪ್ರೋಟೀನ್ ಆಹಾರವನ್ನು ಸೇವಿಸದಿರುವುದು ಉತ್ತಮ. ಮೀನು ಮತ್ತು ಮೊಸರು ಎರಡರಲ್ಲೂ ಪ್ರೋಟೀನ್ ಅಧಿಕವಾಗಿದೆ. ಎರಡನ್ನೂ ಒಂದೇ ಸಮಯದಲ್ಲಿ ತೆಗೆದುಕೊಳ್ಳುವುದರಿಂದ ಅಜೀರ್ಣ ಮತ್ತು ಚರ್ಮದ ತೊಂದರೆ ಉಂಟಾಗುತ್ತದೆ.
ಹಾಲು ಮತ್ತು ಮೊಸರನ್ನು ಎಂದಿಗೂ ಒಟ್ಟಿಗೆ ಸೇವಿಸಬಾರದು
ಹಾಲು ಮತ್ತು ಮೊಸರನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣ ಕ್ರಿಯೆಗೆ ತೊಂದರೆಯಾಗುತ್ತದೆ. ಅಲ್ಲದೆ ಅತಿಸಾರ ಮತ್ತು ಹೊಟ್ಟೆ ಉಬ್ಬರಿಸಿದಂತಾಗುತ್ತದೆ. ಹಾಲು ಮತ್ತು ಮೊಸರಿನಲ್ಲಿ ಕೊಬ್ಬಿನಾಂಶ ಹೆಚ್ಚು ಇರುವುದರಿಂದ ತಜ್ಞರು, ಈ ಆಹಾರವನ್ನು ಒಂದೇ ಸಮಯದಲ್ಲಿ ತಿನ್ನಬಾರದು ಎಂದು ಸಲಹೆ ನೀಡುತ್ತಾರೆ.
ಮಾವಿನ ಹಣ್ಣು ಮತ್ತು ಮೊಸರನ್ನು ಒಂದೇ ಸಮಯದಲ್ಲಿ ತಿನ್ನಬಾರದು
ಮೊಸರು ಮತ್ತು ಮಾವು ಸೇರಿಸಿ ವಿವಿಧ ರುಚಿಕರವಾದ ಜ್ಯೂಸ್ ತಯಾರಿಸಲಾಗುತ್ತದೆ. ಮತ್ತು ಇದನ್ನು ಜನರು ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ. ಆದರೆ, ಮೊಸರು ಸೇವಿಸಿದ ತಕ್ಷಣ ಮಾವಿನಹಣ್ಣು ಅಥವಾ ಇವೆರಡರ ಸಂಯೋಜನೆಯು ದೇಹಕ್ಕೆ ವಿಷವನ್ನುಂಟು ಮಾಡುತ್ತದೆ. ಇದರಿಂದಾಗಿ ಚರ್ಮರೋಗಗಳು ಹರಡುವ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿಟ್ರಸ್ ಹಣ್ಣುಗಳೊಂದಿಗೆ ಮೊಸರು ತಿನ್ನುವುದು ಹಾನಿಕಾರಕ
ಸಿಟ್ರಸ್ ಅಂಶವುಳ್ಳ ಹಣ್ಣುಗಳನ್ನು ಮೊಸರಿನೊಂದಿಗೆ ತಿನ್ನಬಾರದು. ಇದು ವಿವಿಧ ಕಿಣ್ವಗಳನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ಮೊಸರು ಮತ್ತು ಸಿಟ್ರಸ್ ಅಂಶವುಳ್ಳ ಹಣ್ಣನ್ನು ಒಟ್ಟಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ಜೀರ್ಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಅಂತಿಮವಾಗಿ ಮಲಬದ್ಧತೆ, ಅಜೀರ್ಣ ಮತ್ತು ಅತಿಸಾರದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ:
ಆಹಾರದಲ್ಲಿನ ನಾರಿನಾಂಶ ಎಂದರೆ ಏನು? ಮಲಬದ್ಧತೆಯಿಂದ ದೂರವಿರಲು ಇದು ಹೇಗೆ ಸಹಕಾರಿಯಾಗಿದೆ
Weight loss Tips: ತೂಕವನ್ನು ಇಳಿಸಲು ದೇಹದಂಡನೆ ಮಾಡುವುದನ್ನು ಬಿಡಿ; ಈ ಸರಳ ಆಹಾರ ಪದ್ಧತಿಯನ್ನು ಅನುಸರಿಸಿ