
ಇತ್ತೀಚಿನ ದಿನಗಳಲ್ಲಿ ಒತ್ತಡದ ಕೆಲಸ (stressful job), ಕೆಟ್ಟ ಜೀವನಶೈಲಿಯಿಂದಾಗಿ ಜನರ ಮಾನಸಿಕ ಆರೋಗ್ಯ (Health) ಹದಗೆಡುತ್ತಿದೆ. ಆಫೀಸ್ ಗಳಲ್ಲಿನ ಕೆಲಸದ ಒತ್ತಡ ಮತ್ತು ವೈಯಕ್ತಿಕ ಜೀವನದ ಸಮಸ್ಯೆಗಳಿಂದಾಗಿ ಜನರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇದು ಅರಿವಿಲ್ಲದೆಯೇ ಆರೋಗ್ಯದ ಮೇಲೆ ಕ್ರಮೇಣ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಹೀಗಿರುವವರು ತಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಿಗರೇಟು ಸೇದುವ ಅಭ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ. ಈ ರೀತಿಯ ನಿರಂತರ ಧೂಮಪಾನವು ವ್ಯಸನಕ್ಕೆ ಕಾರಣವಾಗಬಹುದು. ಏಕೆಂದರೆ ಕೆಲವರು ದಿನಕ್ಕೆ 5- 7 ಸಿಗರೇಟುಗಳನ್ನು ಇನ್ನು ಕೆಲವರು 10 ಕ್ಕಿಂತ ಹೆಚ್ಚು ಸಿಗರೇಟುಗಳನ್ನು ಸೇದುತ್ತಾರೆ. ಹಾಗಿದ್ದರೆ, ಸಿಗರೇಟ್ (cigarette) ಸೇದುವುದು ನಿಜವಾಗಿಯೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆಯೇ? ಈ ಬಗ್ಗೆ ತಜ್ಞರು ಹೇಳುವುದೇನು ತಿಳಿದುಕೊಳ್ಳಿ.
ವಾಸ್ತವದಲ್ಲಿ ಸಿಗರೇಟುಗಳು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅವುಗಳು ಅಭ್ಯಾಸವಾದ ನಂತರ ಅದನ್ನು ಬಿಡಲು ಮನಸ್ಸಾಗುವುದಿಲ್ಲ. ಇದಕ್ಕೆ ಸಿಗರೇಟುಗಳಲ್ಲಿ ನಿಕೋಟಿನ್ ಕಾರಣ. ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯು ಸಿಗರೇಟ್ ಸೇದಿದಾಗ ನಿಕೋಟಿನ್ ದೇಹದಲ್ಲಿ ಡೋಪಮೈನ್ (ಹಾರ್ಮೋನ್) ಅನ್ನು ಬಿಡುಗಡೆ ಮಾಡುತ್ತದೆ. ಇದು ಜನರಿಗೆ ಸಂತೋಷ ಹೆಚ್ಚಾಗುವ ಭಾವನೆಯನ್ನು ತರುತ್ತದೆ. ಅದಕ್ಕಾಗಿಯೇ ಒಬ್ಬ ವ್ಯಕ್ತಿಯು ಸಿಗರೇಟ್ ಸೇದಿದ ನಂತರ ಕೆಲವು ಕ್ಷಣಗಳ ವರೆಗೆ ಖುಷಿಯಾಗಿ ಒಳ್ಳೆಯ ಅನುಭವ ಪಡೆದುಕೊಂಡ ಖುಷಿಯಲ್ಲಿರುತ್ತಾರೆ. ಆದರೆ ನಿಕೋಟಿನ್ ಪರಿಣಾಮ ಕಡಿಮೆಯಾಗಲು ಪ್ರಾರಂಭಿಸಿದ ತಕ್ಷಣ, ವ್ಯಕ್ತಿಯಲ್ಲಿ ಮತ್ತೆ ಚಡಪಡಿಕೆ ಮತ್ತು ಮಾನಸಿಕ ಒತ್ತಡ ಅನುಭವಕ್ಕೆ ಬರುತ್ತದೆ.
ಮನೋವೈದ್ಯ ಡಾ. ಅಸ್ತಿಕ್ ಜೋಶಿ ಹೇಳುವ ಪ್ರಕಾರ ಸಿಗರೇಟ್ ಸೇದುವುದರಿಂದ ಸ್ವಲ್ಪ ಸಮಯದ ವರೆಗೆ ನಿಮಗೆ ಉತ್ತಮ ಭಾವನೆ ಉಂಟಾಗುತ್ತದೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ. ಅದಲ್ಲದೆ ಸಿಗರೇಟ್ ಸೇದುವ ಅಭ್ಯಾಸವು ಕ್ರಮೇಣ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಏಕೆಂದರೆ ನಿಕೋಟಿನ್ ನ ದೀರ್ಘಕಾಲದ ಸೇವನೆಯು ದೇಹದಲ್ಲಿನ ಹಾರ್ಮೋನುಗಳ ಸಮತೋಲನವನ್ನು ಹಾನಿಗೊಳಿಸುತ್ತದೆ. ಇದು ಆತಂಕ ಮತ್ತು ಖಿನ್ನತೆಯ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸಿಗರೇಟುಗಳಲ್ಲಿರುವ ನಿಕೋಟಿನ್ ವ್ಯಸನವಾಗಿ ಬದಲಾಗುವುದರಿಂದ ದೀರ್ಘಕಾಲದಿಂದ ಧೂಮಪಾನ ಮಾಡುತ್ತಿರುವ ವ್ಯಕ್ತಿಯು ಅದನ್ನು ಬಿಡುವುದು ಸುಲಭವಲ್ಲ ಎಂದು ಡಾ. ಜೋಶಿ ಹೇಳುತ್ತಾರೆ. ಒಬ್ಬ ವ್ಯಕ್ತಿ ಧೂಮಪಾನ ತ್ಯಜಿಸಲು ಪ್ರಯತ್ನಿಸಿದಾಗ, ದೇಹದಲ್ಲಿ ನಿಕೋಟಿನ್ ಕೊರತೆ ಉಂಟಾಗುತ್ತದೆ. ಈ ಕಾರಣದಿಂದಾಗಿ, ಕಿರಿಕಿರಿ, ಕೋಪ ಮತ್ತು ಇತರ ಅನೇಕ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ಧೂಮಪಾನ ಬಿಡಲು ಬಯಸಿದರೂ ಸಹ ಅದನ್ನು ಬಿಟ್ಟಿರಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಹೋಟೆಲ್ಅಂಗಡಿಗಳಲ್ಲಿ ಪೇಪರ್ ಕಪ್ ಗಳಲ್ಲಿ ಟೀ ಹೀರೋರು ಇನ್ಮುಂದೆ ಹುಷಾರಾಗಿರಿ!
*ಪ್ರತಿನಿತ್ಯ ವಾಕಿಂಗ್, ವ್ಯಾಯಾಮ ಅಥವಾ ಯಾವುದೇ ರೀತಿಯ ದೈಹಿಕ ಚಟುವಟಿಕೆಗಳನ್ನು ಮಾಡಿ.
*ಆಳವಾದ ಉಸಿರಾಟವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
*ಬೆಳಿಗ್ಗೆ ಏಳುವುದು ಮತ್ತು ನಿದ್ರೆ ಮಾಡುವ ಸಮಯವನ್ನು ಸರಿಯಾಗಿ ನಿಗದಿ ಮಾಡಿಕೊಳ್ಳಿ. ಪ್ರತಿನಿತ್ಯ ಅದನ್ನು ಪಾಲಿಸಿ.
*ದಿನವೂ ಚೆನ್ನಾಗಿ ನಿದ್ರೆ ಮಾಡಿ.
*ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿರಿ, ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ.
*ಬಿಡುವಿದ್ದಾಗ ಪುಸ್ತಕಗಳನ್ನು ಓದಿ. ಅಥವಾ ನಿಮ್ಮ ನೆಚ್ಚಿನ ಕೆಲಸಗಳನ್ನು ಮಾಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ