ಹೋಟೆಲ್ಅಂಗಡಿಗಳಲ್ಲಿ ಪೇಪರ್ ಕಪ್ ಗಳಲ್ಲಿ ಟೀ ಹೀರೋರು ಇನ್ಮುಂದೆ ಹುಷಾರಾಗಿರಿ!
ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ಮಾಡುವುದು, ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಸೇರ್ಪಡೆ ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಸರಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಇದು ತಿಳಿದಿರುವ ವಿಚಾರ. ಆದರೆ ಈಗ ಪೇಪರ್ ಗ್ಲಾಸ್ ಸರದಿ. ಹೌದು. ಪೇಪರ್ ಗ್ಲಾಸ್ ಬಳಕೆ ಕೂಡ ನಮ್ಮ ಆರೋಗ್ಯ ಹಾಳು ಮಾಡುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಸಮಸ್ಯೆಗಳು ಬರಬಹುದು? ತಜ್ಞರು ಈ ಬಗ್ಗೆ ಹೇಳುವುದೇನು ತಿಳಿದುಕೊಳ್ಳಿ.

ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ಮಾಡುವುದು, ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಸೇರ್ಪಡೆ ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಸರಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಇದು ತಿಳಿದಿರುವ ವಿಚಾರ. ಆದರೆ ಈಗ ಪೇಪರ್ ಗ್ಲಾಸ್ (paper glasses) ಸರದಿ. ಹೌದು. ಪೇಪರ್ ಗ್ಲಾಸ್ ಬಳಕೆ ಕೂಡ ನಮ್ಮ ಆರೋಗ್ಯ ಹಾಳು ಮಾಡುತ್ತದೆ. ಈ ಬಗ್ಗೆ ಹಿಂದೆ ಕೆಲವು ಚರ್ಚೆಗಳು ನಡೆದಿದ್ದರೂ ಕೂಡ ಜನರಾಗಲಿ ಅಥವಾ ಸರಕಾರವಾಗಲಿ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹೊರಗಡೆ ಸಿಗುವ ಆಹಾರಗಳ ಗುಣಮಟ್ಟದ ಬಗ್ಗೆ, ಅವುಗಳ ಆಯ್ಕೆಯ ಬಗ್ಗೆ ಜನರು ಹೆಚ್ಚಾಗಿ ಚರ್ಚಿಸುತ್ತಿರುವುದರಿಂದ ಈ ರೀತಿಯ ವಿಷಯಗಳು ಸರಕಾರದ ಕದ ತಟ್ಟಿದೆ. ಹಾಗಾದರೆ ಪೇಪರ್ ಗ್ಲಾಸ್ ಕೂಡ ನಮ್ಮ ಆರೋಗ್ಯ ಹಾಳು ಮಾಡುತ್ತಾ? ಕ್ಯಾನ್ಸರ್ ತಜ್ಞರು ಈ ಪೇಪರ್ ಗ್ಲಾಸ್ ಬಳಕೆ ಬಗ್ಗೆ ಶಾಕಿಂಗ್ ಅಂಶಗಳನ್ನು ಹೊರ ಹಾಕಿದ್ದು, ಗೊತ್ತಿಲ್ಲದೇ ಹೊಟ್ಟೆ ಸೇರುತ್ತಿರುವ ಕ್ಯಾನ್ಸರ್ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿಯೂ ಕಿದ್ವಾಯಿ ಆಸ್ಪತ್ರೆಯ ಆರೋಗ್ಯ ತಜ್ಞರು ಪೇಪರ್ ಗ್ಲಾಸ್ ಗಳ ಅಪಾಯದ ಬಗ್ಗೆ ಗಮನ ಹರಿಸಿ, ಟೆಸ್ಟ್ ಮಾಡುವಂತೆ ಆಹಾರ ಹಾಗೂ ಗುಣಮಟ್ಟ ಇಲಾಖೆಗೆ ಮನವಿ ಮಾಡಿದ್ದಾರೆ. ಹಾಗಾದರೆ ಇದರಿಂದ ಯಾವ ರೀತಿಯ ಸಮಸ್ಯೆಗಳು ಬರಬಹುದು? ತಜ್ಞರು ಈ ಬಗ್ಗೆ ಹೇಳುವುದೇನು ತಿಳಿದುಕೊಳ್ಳಿ.
ಪೇಪರ್ ಗ್ಲಾಸ್‌ನಲ್ಲಿ ಟೀ ಕುಡಿಯುವವರ ಹೊಟ್ಟೆ ಸೇರ್ತಿದೆ ಕ್ಯಾನ್ಸರ್!
ಕಿದ್ವಾಯಿ ಆಸ್ಪತ್ರೆ ಕ್ಯಾನ್ಸರ್ ತಜ್ಞರಾಗಿರುವ ಡಾ. ನವೀನ್ ಅವರು ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಅವರು ಹೇಳುವ ಪ್ರಕಾರ, “ಪೇಪರ್ ಗ್ಲಾಸ್ ನಲ್ಲಿ ಟೀ ಕುಡಿಯುವವರು ತುಂಬಾ ಹುಷಾರಾಗಿರಬೇಕು, ಏಕೆಂದರೆ ಪೇಪರ್ ಗ್ಲಾಸ್ ಬಿಸಿಗೆ ಮೆಲ್ಟ್ ಆಗುವ ಕಾರಣದಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿದೆ. ಅದಲ್ಲದೆ ಟೀ ಕಪ್ ನಲ್ಲಿನ ಮೈಕ್ರೋ ಪ್ಲಾಸ್ಟಿಕ್ ನಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಈ ಮೈಕ್ರೋ ಪ್ಲಾಸ್ಟಿಕ್ ಆರೋಗ್ಯಕ್ಕೆ ಹಾನಿಕಾರವಾಗಿದೆ. ಸಾಮಾನ್ಯವಾಗಿ ಪೇಪರ್ ಗ್ಲಾಸ್ ನಲ್ಲಿ ಜಲ ನಿರೋಧಕ ಶಕ್ತಿ ಇರದ ಕಾರಣ ಮೈಕ್ರೋಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತದೆ. ಹೀಗಾಗಿ ನಮಗರಿವಿಲ್ಲದಂತೆ ಹೊಟ್ಟೆ ಸೇರುವ ಪ್ಲಾಸ್ಟಿಕ್ ಕಣಗಳು ನಿಧಾನಗತಿಯಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಹುದು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮನೆಯ ಒಳಗೆ ಚಪ್ಪಲಿ ಧರಿಸುವುದು ಆರೋಗ್ಯಕ್ಕೆ ಒಳ್ಳೆಯದೇ? ಯಾವುದು ಸರಿ
ಪೇಪರ್ ಕಪ್‌ಗಳು ನೇರವಾಗಿ ಕ್ಯಾನ್ಸರ್‌ಗೆ ಸಂಬಂಧಿಸಿಲ್ಲ, ಆದರೆ ಅವುಗಳ ಒಳಪದರದಲ್ಲಿ ಬಳಸುವ ರಾಸಾಯನಿಕಗಳಾದ ಮೈಕ್ರೋಪ್ಲಾಸ್ಟಿಕ್ ಅಥವಾ ಪರ್ಫ್ಲೋರೊಆಲ್ಕೈಲ್ (PFASYL) ಹೊಟ್ಟೆ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇತ್ತೀಚಿನ ದಿನಗಳ ಹೊಟ್ಟೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರು ಈ ವಿಚಾರವನ್ನು ಟಿವಿ9 ಮುಂದೆ ಹಂಚಿಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಾರ್ವಜನಿಕರ ಅಭಿಪ್ರಾಯವೇನು?
ಪೇಪರ್ ಕಪ್ ಬಳಕೆಗೆ ಸಾರ್ವಜನಿಕ ವಲಯದಲ್ಲಿಯೂ ವಿರೋಧ ವ್ಯಕ್ತವಾಗುತ್ತಿದ್ದು ಟೀ ಕಾಫಿ ಕೇಳಿದಾಗ ಈ ಪೇಪರ್ ಗ್ಲಾಸ್ ಕೊಡುತ್ತಾರೆ. ನಮಗೆ ಈ ಕಪ್ ಗಳ ಅಪಾಯದ ಬಗ್ಗೆ ಅಷ್ಟಾಗಿ ಮಾಹಿತಿ ಇರದ ಕಾರಣ ಸರ್ಕಾರ ಈ ಬಗ್ಗೆ ಕ್ರಮ ವಹಿಸಿಬೇಕು. ಇತ್ತೀಚಿನ ದಿನಗಳಲ್ಲಿ ಆಹಾರವೂ ಅಷ್ಟಾಗಿ ಸೇಪ್ ಇರದ ಕಾರಣ ಸರಕಾರ ನಿಗಾ ವಹಿಸಿ ಜನರ ಆರೋಗ್ಯಕ್ಕೆ ಹಾನಿ ಮಾಡುವಂತಹ ವಸ್ತುಗಳ ಬಳಕೆಗೆ ಇತಿಶ್ರೀ ಹಾಡುವ ಮೂಲಕ ಈ ಪೇಪರ್ ಕಪ್ ಗಳನ್ನು ಬ್ಯಾನ್ ಮಾಡುವುದು ಒಳ್ಳೆಯದು ಎನ್ನುತ್ತಿದ್ದಾರೆ. ಆದರೆ ಸರಕಾರ ಈ ಬಗ್ಗೆ ತನಿಖೆ ನಡೆಸಿ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:48 am, Sat, 15 March 25




