
ಗರಿಕೆ ಹುಲ್ಲಿನ (Cynodon dactylon) ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಹಸಿರಾಗಿರುವ ಈ ಹುಲ್ಲು ಗಣಪನಿಗೆ ಬಲು ಪ್ರೀಯ. ಇದು ದೇವರ ಪೂಜೆಗೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ಅದರಲ್ಲಿಯೂ ಗರಿಕೆ ಹುಲ್ಲಿನ ರಸ (Durva Grass Juice) ಅಥವಾ ಜ್ಯೂಸ್ ಅಥವಾ ಕಷಾಯ ಸೇವನೆ ಮಾಡುವುದು ನಮ್ಮ ದೇಹಕ್ಕೆ ಒಳ್ಳೆಯದು. ಇದನ್ನು ನಿಯಮಿತವಾಗಿ ಕುಡಿಯುವ ಅಭ್ಯಾಸ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವು ರೀತಿಯ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇತ್ತೀಚಿಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ನಮ್ಮನ್ನು ನಾವು ಸುರಕ್ಷಿತವಾಗಿ ಇರಿಸಿಕೊಳ್ಳಲು ಇಂತಹ ಆಹಾರಗಳ ಸೇವನೆ ಮಾಡಬೇಕಾಗುತ್ತದೆ. ಇದರಲ್ಲಿರುವ ಔಷಧೀಯ ಗುಣಗಳು ನಮ್ಮನ್ನು ಕಾಯಿಲೆಗಳಿಂದ ದೂರವಿರಿಸುತ್ತದೆ. ಇದಕ್ಕೆ ಪೂರಕವೆಂಬಂತೆ ಗರಿಕೆ ಹುಲ್ಲಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಗಿರೀಶ್ (Gireesh Mutthu) ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು ದೂರ್ವಾ ಅಥವಾ ಗರಿಕೆ ಹುಲ್ಲಿನಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ಮತ್ತು ಅದು ಯಾರಿಗೆ ಒಳ್ಳೆಯದು ಎಂಬುದರ ಕುರಿತು ಮಾಹಿತಿ ಈ ಸ್ಟೋರಿಯಲ್ಲಿದೆ.
ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮತ್ತು ಡಯಟ್ ಮಾಡುತ್ತೇವೆ. ಅದರಲ್ಲಿಯೂ ಈ ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಹಲವು ಬಗೆಯ ಜ್ಯೂಸ್ ಹಣ್ಣು, ತರಕಾರಿ ರಸ ಹೀಗೆ ವಿವಿಧ ರೀತಿಯಲ್ಲಿ ಆರೋಗ್ಯಕರ ಮಾರ್ಗಗಳನ್ನು ಕಂಡುಕೊಂಡಿರುತ್ತೇವೆ. ಆದರೆ ಈ ಒಂದು ಜ್ಯೂಸ್ ಅನ್ನು ನೀವು ಕುಡಿದರೆ ನಿಮ್ಮತ್ತ ಕಾಯಿಲೆಗಳು ಸುಳಿಯುವುದೇ ಇಲ್ಲ. ಅದಕ್ಕಾಗಿಯೇ ದೂರ್ವಾ ಅಥವಾ ದೂರ್ವೆ ಅಥವಾ ಗರಿಕೆ ಹುಲ್ಲನ್ನು ಆಯುರ್ವೇದದಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಉಪಯೋಗ ಮಾಡಲಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ರಕ್ತಸ್ರಾವವನ್ನು ಕಡಿಮೆ ಮಾಡುವುದು, ಮತ್ತು ಗಾಯಗಳನ್ನು ಗುಣಪಡಿಸುವ ವರೆಗೆ ಹಲವು ರೀತಿಯಲ್ಲಿ ಉಪಯೋಗ ಮಾಡಲಾಗುತ್ತದೆ. ಮಾತ್ರವಲ್ಲ ಇದು ಜ್ವರದಂತಹ ಸಮಸ್ಯೆಗಳ ನಿವಾರಣೆಗೆ ಕೂಡ ಸಹಾಯ ಮಾಡುತ್ತದೆ.
ವಾರಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಗರಿಕೆ ಹುಲ್ಲಿನ ರಸ ಅಥವಾ ಕಷಾಯದ ಸೇವನೆ ಮಾಡುವುದು ಕೂಡ ಬಹಳ ಒಳ್ಳೆಯದು ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ನಿಯಮಿತವಾಗಿ ಈ ಜ್ಯೂಸ್ ಸೇವಿಸುವುದರಿಂದ ದೇಹದಲ್ಲಿನ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಲ್ಲದೆ ಈ ರಸವನ್ನು ಕುಡಿಯುವುದರಿಂದ ರಕ್ತದಲ್ಲಿರುವ ಕ್ಯಾನ್ಸರ್ ಕೋಶಗಳು ಕಡಿಮೆಯಾಗುತ್ತದೆ. ಮಾತ್ರವಲ್ಲದೆ ರಕ್ತ ಶುದ್ಧವಾಗಿರುತ್ತದೆ. ಈ ಗರಿಕೆ ಹುಲ್ಲಿನಲ್ಲಿ ವಿಟಮಿನ್ ಎ, ಕೆ, ಸಿ ಮತ್ತು ವಿಟಮಿನ್ ಇ ಗಳು ಸಮೃದ್ಧವಾಗಿದ್ದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತದೊತ್ತಡ, ರಕ್ತಹೀನತೆ ಮತ್ತು ರಕ್ತ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುತ್ತದೆ.
ಇದನ್ನೂ ಓದಿ: Daily Devotional: ಗಣೇಶನಿಗೆ ಗರಿಕೆ ಯಾಕೆ ಪ್ರೀತಿ ಅಂತ ತಿಳಿಯಲು ಈ ವಿಡಿಯೋ ನೋಡಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ