
ಲಿಂಫೋಮಾ ಎಂಬ ಪದ ಇತ್ತೀಚಿಗೆ ಎಲ್ಲರ ಬಾಯಲ್ಲಿಯೂ ಕೇಳಿ ಬರುತ್ತಿದೆ. ಕೆಲವರಿಗೆ ಇದರ ಬಗ್ಗೆ ಅಷ್ಟಾಗಿ ತಿಳಿದಿರದ ಕರಣ ಅವುಗಳ ಬಗ್ಗೆ ತಿಳಿಯಲು ಆಸಕ್ತಿ ತೋರುವುದಿಲ್ಲ ಆದರೆ ಇದರ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ. ಏಕೆಂದರೆ ಲಿಂಫೋಮಾ ಎಂಬ ಕ್ಯಾನ್ಸರ್, ಸಾಮಾನ್ಯವಾಗಿ ಕಂಡುಬರುತ್ತಿರುವ ರಕ್ತ ಕ್ಯಾನ್ಸರ್ ಆಗಿದೆ. ತ್ವರಿತವಾಗಿ ಚಿಕಿತ್ಸೆ ಆರಂಭಿಸಿದಲ್ಲಿ ಈ ಕ್ಯಾನ್ಸರ್ ಗುಣಪಡಿಸಬಹುದಾಗಿದ್ದು ಪ್ರತಿಯೊಬ್ಬರು ಈ ಕ್ಯಾನ್ಸರ್ನ ಗುಣಲಕ್ಷಣಗಳ ಬಗ್ಗೆ ಅರಿತುಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಲಿಂಫೋಮಾ ದೇಹದ ರೋಗನಿರೋಧಕ ಶಕ್ತಿಯಾಗಿರುವ ರಕ್ತದಲ್ಲಿನ ಬಿಳಿ ರಕ್ತ ಕಣಗಳಿಂದ ಉಂಟಾಗುತ್ತದೆ. ದೇಹದ ವಿವಿಧ ಭಾಗಗಳಲ್ಲಿರುವ ಲಿಂಪ್ ಗ್ಲ್ಯಾಂಡ್ಸ್ (ದುಗ್ದರಸ ಗ್ರಂಥಿಗಳ) ಮೂಲಕ ಹುಟ್ಟಿಕೊಳ್ಳುತ್ತವೆ. ಹಾಗಾದರೆ ಲಿಂಫೋಮಾದ ಲಕ್ಷಣಗಳು ಹೇಗಿರುತ್ತವೆ, ಯಾಕೆ ಕಂಡುಬರುತ್ತದೆ ಮತ್ತು ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು ಎಂಬುದರ ಬಗ್ಗೆ ಮಂಗಳೂರಿನ ಡಾ. ಬಿ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆ ಯ ಕನ್ಸಲ್ಟೆಂಟ್ ಹೆಮಟೊಲೊಜಿಸ್ಟ್ ಡಾ. ಪ್ರಶಾಂತ ಬಿ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಈ ಲಿಂಫೋಮಾ ಕ್ಯಾನ್ಸರ್ ನಲ್ಲಿ ಹಲವು ವಿಧಗಳಿವೆ. ನಿಧಾನವಾಗಿ ಆರಂಭವಾಗುವ ಟ್ಯೂಮರ್ (ಗಡ್ಡೆ) ನಿಂದ ತೀವ್ರವಾಗಿ ಬೆಳೆಯುವ ರೋಗ ಪತ್ತೆಹಚ್ಚದೇ ಇದ್ದಲ್ಲಿ ಅಥವಾ ಚಿಕಿತ್ಸೆ ಸಿಗದೇ ಇದ್ದಲ್ಲಿ ಕೆಲವೇ ದಿನಗಳಲ್ಲಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಲಿಂಫೋಮಾದ ವಿಧದಲ್ಲಿ ಶೇ. 25ರಷ್ಟು ಹಾಡ್ಗ್ಕಿನ್ಸ್ ಲಿಂಫೋಮಾ ಮತ್ತು ಶೇ. 75ರಷ್ಟು ನಾನ್ ಹಾಡ್ಗ್ಕಿನ್ಸ್ ಲಿಂಫೋಮಾ ಕಂಡುಬರುತ್ತದೆ. ಸದ್ಯ ಹಾಡ್ಗ್ಕಿನ್ಸ್ ಲಿಂಫೋಮಾದಲ್ಲಿ ಶೇ.90- 95 ರಷ್ಟು ಮತ್ತು ನಾನ್ ಹಾಡ್ಗ್ಕಿನ್ಸ್ ಲಿಂಫೋಮಾದಲ್ಲಿ ಶೇ. 50- 60 ರಷ್ಟು ಪ್ರಕರಣಗಳು ಗುಣಪಡಿಸಬಹುದಾಗಿದೆ.
ಲಿಂಫೋಮಾದ ಹಂತ ಮತ್ತು ಉಪ ಪ್ರಕಾರವನ್ನು ಆಧರಿಸಿ, ನಿಮ್ಮ ವೈದ್ಯರು ನಿಮಗೆ ಉತ್ತಮ ಚಿಕಿತ್ಸೆಯ ಕೋರ್ಸ್ ಅನ್ನು ನಿರ್ಧರಿಸುತ್ತಾರೆ, ಇದರಲ್ಲಿ ಒಂದು ಅಥವಾ ಹೆಚ್ಚಿನ ಕಿಮೊಥೆರಪಿ, ಇಮ್ಯುನೊಥೆರಪಿ, ಉದ್ದೇಶಿತ ಚಿಕಿತ್ಸೆ ಮತ್ತು ರೇಡಿಯೊಥೆರಪಿ ಸೇರಿವೆ. ಕೆಲವು ಆಕ್ರಮಣಕಾರಿ ಲಿಂಫೋಮಾಗಳಿಗೆ ಸಂಪೂರ್ಣ ಗುಣ ಸಾಧಿಸಲು ಮೂಳೆ ಮಜ್ಜೆಯ ಕಸಿ ಅಗತ್ಯವಿರಬಹುದು.
ಇದನ್ನೂ ಓದಿ: ಮನುಷ್ಯ ಸತ್ತ ಮೇಲೆ ಮಾತ್ರವಲ್ಲ ಬದುಕಿರುವಾಗಲೂ ಅಂಗಾಂಗ ದಾನ ಮಾಡಬಹುದು; ಈ ಬಗ್ಗೆ ಡಾ. ಪ್ರದೀಪ್ ರಂಗಪ್ಪ ಏನ್ ಹೇಳ್ತಾರೆ ನೋಡಿ
ಕಳೆದ ಎರಡು ವರ್ಷಗಳಿಂದ ಲಿಂಫೋಮಾ ಚಿಕಿತ್ಸೆಯಲ್ಲಿ ಅದ್ಭುತವಾದ ಪ್ರಗತಿ ಕಂಡುಬಂದಿದೆ. ಇಮ್ಯುನೊಥೆರಪಿಯಿಂದ, ಟಾರ್ಗೆಟೆಡ್ ಥೆರಪಿ ವರೆಗೆ ಹಲವು ಹೊಸ ಔಷಧಗಳನ್ನು ಕಂಡುಹಿಡಿಯಲಾಗಿದೆ. ರೋಗಿಯ ಸ್ವಂತ ರೋಗನಿರೋಧಕ ವ್ಯವಸ್ಥೆಯ ಸೆಲ್ಗಳನ್ನು ಕ್ಯಾನ್ಸರ್ ಸೆಲ್ಗಳ ವಿರುದ್ಧ ಉತ್ತೇಜಿಸುವ ಸಿಎಆರ್-ಟಿ (CAR-T) ಥೆರಪಿ ಲಿಂಫೋಮಾ ಚಿಕಿತ್ಸೆಯಲ್ಲಿ ಬಹುದೊಡ್ಡ ಆವಿಷ್ಕಾರವಾಗಿದೆ. ಈ ಚಿಕಿತ್ಸೆ ಈಗ ನಮ್ಮ ದೇಶದಲ್ಲೂ ಲಭ್ಯವಿದೆ. ಮುಂದಿನ ದಿನಗಳಲ್ಲಿ ಈ ಚಿಕಿತ್ಸೆಯ ವೆಚ್ಚ ಸಾಮಾನ್ಯ ಜನರಿಗೂ ಕೈಗೆಟಕುವಂತಾಗುವುದು. ಗುಣಪಡಿಸಲು ಸಾಧ್ಯವಿರುವ ಈ ಲಿಂಫೋಮಾ ಕ್ಯಾನ್ಸರ್ನ್ನು ಆರಂಭದಲ್ಲೇ ಗುರುತಿಸುವುದು, ಶೀಘ್ರ ಚಿಕಿತ್ಸೆ ಆರಂಭಿಸುವುದು ಹಾಗೇ ಜನರಿಗೆ ಇದರ ಲಕ್ಷಣಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ