ಹಿಂದಿನ ಕಾಲದ ಆಹಾರ ಸೇವನೆಗೂ ಇಂದಿನ ಜೀವನಶೈಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಸಾಮಾನ್ಯವಾಗಿ ನಾವು ಆಹಾರಗಳನ್ನು ಕೈಗಳಿಂದ ಸೇವನೆ ಮಾಡುತ್ತೇವೆ. ಆದರೆ ಈಗ ಚಮಚಗಳು ಬಂದಿರುವುದರಿಂದ ಈ ಪದ್ಧತಿ ಕಡಿಮೆಯಾಗಿದೆ. ಮನಸ್ಸಿನಲ್ಲಿ ಕೈಗಳಿಂದ ತಿನ್ನಬೇಕು ಎಂಬ ಮನಸ್ಸಿದ್ದರೂ ಬೇರೆಯವರು ಏನೆಂದುಕೊಳ್ಳುತ್ತಾರೋ ಏನೋ ಎಂಬ ಭಾವನೆಯಿಂದ ಚಮಚ ಬಳಸುವವರು ಕೂಡ ಇದ್ದಾರೆ. ಆದರೆ ಇತ್ತೀಚಿಗೆ ನಡೆದಂತಹ ಕೆಲವು ಸಂಶೋಧನೆಗಳ ಪ್ರಕಾರ ಹಳೆಯವರು ಮಾಡಿದ ಸಂಪ್ರದಾಯವನ್ನು ಪಾಲಿಸಬೇಕು ಇದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನೆಗಳನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಆಯುರ್ವೇದದ ಪ್ರಕಾರ ಕೈಗಳನ್ನು ಬಳಸಿ ಆಹಾರ ಸೇವನೆ ಮಾಡುವುದರಿಂದ ನಮ್ಮ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ಬೆರಳುಗಳ ಮೂಲಕ ಆಹಾರವನ್ನು ಸ್ಪರ್ಶಿಸಿದಾಗ ಮೆದುಳಿಗೆ ನಾವು ತಿನ್ನಲು ಆರಂಭಿಸಿದ್ದೇವೆ ಎನ್ನುವ ಸಂದೇಶ ರವಾನೆಯಾಗುತ್ತದೆ. ಇದರಿಂದಾಗಿ ಹೊಟ್ಟೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಅಂಗಗಳು ಕಾರ್ಯಾರಂಭಿಸಲು ತಯಾರಾಗಲಿವೆ. ಅಲ್ಲದೆ ಕೈನಿಂದಲೇ ನಾವು ಆಹಾರ ಸೇವಿಸುವುದರಿಂದ ಏನನ್ನ ತಿನ್ನುತ್ತಿದ್ದೇವೆ? ಎಷ್ಟು ತಿನ್ನುತ್ತಿದ್ದೇವೆ? ಎಂಬುದು ಅರಿವಾಗುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ.
ಇದನ್ನೂ ಓದಿ: ಕಾಫಿ ಪ್ರಿಯರಿಗೆ ಆಘಾತ! ಎಸ್ಪ್ರೆಸೊ ಕಾಫಿ ಪುರುಷರಿಗೆ ಅಪಾಯಕಾರಿ
ಇದು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಕೈಗಳಿಂದ ಆಹಾರ ಸೇವಿಸುವಾಗ ಬೆರಳುಗಳು ಮತ್ತು ಕೈಯ ಸ್ನಾಯುಗಳಿಗೆ ಚಲನೆಯಾಗುತ್ತದೆ. ಹಾಗಾಗಿ ಇದು ದೇಹದಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೈಗಳಿಂದ ಆಹಾರ ಸೇವನೆ ಮಾಡುವುದರಿಂದ ಕೆಲವು ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳು ದೇಹ ಸೇರುತ್ತವೆ. ಈ ಬ್ಯಾಕ್ಟೀರಿಯಾಗಳು ದೇಹ ಸೇರಿರುವ ಕೆಲ ರೋಗ ಕಾರಕಗಳು ಮತ್ತು ಸೋಂಕಿನಿಂದ ನಮ್ಮನ್ನ ರಕ್ಷಣೆ ಮಾಡಲಿವೆ. ಅಲ್ಲದೆ ಬ್ಲಡ್ ಶುಗರ್ ಲೆವೆಲ್ ಮೇಲೆ ಪರಿಣಾಮ ಬೀರುತ್ತದೆ. ಆಹಾರದಲ್ಲಿನ ಗ್ಲೈಸೆಮಿಕ್ ಸೂಚ್ಯಂಕವನ್ನ ನಿಯಂತ್ರಿಸಲಿದ್ದು,ಬ್ಲಡ್ ಶುಗರ್ ಮಟ್ಟದ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಆಹಾರ ಸೇವಿಸಿದ ಬಳಿಕ ಹೊಟ್ಟೆ ತುಂಬುವುದು ಮಾತ್ರವಲ್ಲ, ಆಹಾರವನ್ನ ಆಸ್ವಾದಿಸಿ ತಿನ್ನುವುದು ಕೂಡ ಅಷ್ಟೇ ಮುಖ್ಯ. ಕೈನಿಂದ ಆಹಾರ ಸವಿದಾಗ ಮಾನಸಿಕ ತೃಪ್ತಿ ಸಿಗಲಿದೆ ಎಂಬುದನ್ನ ಹಲವು ಸಂಶೋಧನೆಗಳು ತಿಳಿಸಿವೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ