ಕಂಪ್ಯೂಟರ್, ಮೊಬೈಲ್ಗಳ ಬಳಕೆಯ ಪಾರುಪತ್ಯದ ಈ ಕಾಲದಲ್ಲಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟ. ಈಗೀಗಂತೂ ಯಾರೇ ನೋಡಿದರೂ ಕಣ್ಣಿಗೆ ಸಂಬಂಧಪಟ್ಟ ಆ ತೊಂದರೆ ಇದೆ, ಈ ಸಮಸ್ಯೆಯಿದೆ ಎನ್ನುವವರೇ. ಪುಟ್ಟ ಮಕ್ಕಳಲ್ಲೂ ಕಣ್ಣಿನ ಅನಾರೋಗ್ಯ ಹೆಚ್ಚುತ್ತಿದೆ. ಅದಕ್ಕೆ ಕಾರಣ ಪ್ರಸ್ತುತದಲ್ಲಿರುವ ಆಹಾರ ಪದ್ಧತಿ, ಜೀವನ ಶೈಲಿ ಎಂಬುದು ತಜ್ಞರ ಅಭಿಪ್ರಾಯ. ಕಣ್ಣಿನ ಆರೋಗ್ಯದ ಬಗ್ಗೆ ನಾವು ಸದಾ ಜಾಗರೂಕರಾಗಿರಬೇಕು. ಅದರಲ್ಲೂ ಬೇಸಿಗೆಯಲ್ಲಿ ಮತ್ತಷ್ಟು ಕಾಳಜಿ ವಹಿಸಬೇಕು ಎನ್ನುತ್ತಾರೆ ಆರೋಗ್ಯ ಕ್ಷೇತ್ರದ ಮುಂಚೂಣಿ ತಜ್ಞರು. ವಿಪರೀತವಾದ ಉಷ್ಣವಾತಾವರಣ ಇದ್ದಾಗ ಕಣ್ಣಿನ ಅಲರ್ಜಿಗಳು, ಸೋಂಕುಗಳು ಹೆಚ್ಚುವ ಸಾಧ್ಯತೆ ದಟ್ಟವಾಗಿರುತ್ತದೆ. ಹೀಗಾಗಿ ಕಣ್ಣುಗಳನ್ನು ಜಾಸ್ತಿ ಕಾಳಜಿ ಮಾಡಬೇಕು ಎಂಬುದು ಅವರ ಸಲಹೆ..ನೀವೂ ಪಾಲಿಸಿ
ಬೇಸಿಗೆಯಲ್ಲಿ ಕಣ್ಣಿಗೆ ಸಂಬಂಧಪಟ್ಟ ಅಲರ್ಜಿ, ಡ್ರೈ ಐ ಸಮಸ್ಯೆಗಳು ಹೆಚ್ಚಾಗುತ್ತವೆ. ಇದನ್ನು ನಿರ್ಲಕ್ಷಿಸುವಂತಿಲ್ಲ. ತುರಿಕೆ ಹೆಚ್ಚಾದಂತೆ ಕಂಡುಬಂದರೆ, ಕಣ್ಣು ಕೆಂಪಾಗುವುದು, ದೃಷ್ಟಿಯಲ್ಲಿ ಏರುಪೇರಾದರೆ ಕೂಡಲೇ ವೈದ್ಯರ ಬಳಿ ತೋರಿಸಿಕೊಳ್ಳಬೇಕು ಎಂದು ಹೇಳುತ್ತಾರೆ ದೆಹಲಿ ವಿಷನ್ ಐ ಸೆಂಟರ್ನ ಡಾ. ತುಷಾರ್ ಗ್ರೋವರ್. ಹಾಗೇ, ಆಗ್ರಾದ ಆಸ್ಪತ್ರೆಯೊಂದರ ಕಣ್ಣಿನ ತಜ್ಞರಾದ ಚಿಕಿರ್ಷಾ ಜೈನ್ ಕೂಡ ಇದನ್ನೇ ಹೇಳಿದ್ದಾರೆ. ಬೇಸಿಗೆಯಲ್ಲಿ ಸಿಕ್ಕಾಪಟೆ ಬಿಸಿಲು, ಉಷ್ಣತೆ ಇರುವುದರಿಂದ ನಮ್ಮ ಕಣ್ಣುಗಳು ತುಂಬ ಸೂಕ್ಷ್ಮವಾಗುತ್ತವೆ. ಹಾಗಾಗಿ ಬಿಸಿಲಿಗೆ ಹೋಗುವಾಗಂತೂ ಆದಷ್ಟು ಅವುಗಳ ರಕ್ಷಣೆ ಮಾಡಿಕೊಳ್ಳಲೇಬೇಕು. ನೀವೇನಾದರೂ ಕಾಂಟಾಕ್ಟ್ ಲೆನ್ಸ್ ಹಾಕುವವರಾಗಿದ್ದರೆ, ಬೇಸಿಗೆಯಲ್ಲಿ ಸಾಧ್ಯವಾದಷ್ಟು ಕನ್ನಡಕದ ಬಳಕೆಯನ್ನೇ ರೂಢಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಡ್ರೈ ಐ. ಅಂದರೆ ಕಣ್ಣಲ್ಲಿ ನೀರು ಒಣಗುವ ಸಮಸ್ಯೆ. ಇದು ತುರಿಕೆ, ಅಲರ್ಜಿಗೆ ಕಾರಣವಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ ಕಣ್ಣಿನ ಉರಿ, ದೃಷ್ಟಿದೋಷವನ್ನೂ ತಂದೊಡ್ಡುತ್ತದೆ. ಅದಕ್ಕೆ ಚಿಕಿತ್ಸೆ ನೀಡುವುದೂ ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ಸೂರ್ಯನ ಶಾಖ ಭೂಮಿಗೆ ತಲುಪುವ ತೀಕ್ಷ್ಣತೆ ಹೆಚ್ಚು. ಆ ನೇರಳಾತೀತ ಕಿರಣಗಳಿಗೆ ನಮ್ಮ ಕಣ್ಣನ್ನು ಒಡ್ಡಿಕೊಳ್ಳುವುದು ಅಪಾಯ ಮೈಮೇಲೆ ಎಳೆದುಕೊಂಡಂತೆ. ಕಣ್ಣುಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡವೇಬೇಡ. ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುತ್ತಿರಿ ಎಂದೂ ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಯಾದಗಿರಿ: ವಿದ್ಯುತ್ ಟ್ರಾರ್ನ್ಸಪಾರ್ಮರ್ ಸ್ಪರ್ಶಿಸಿ ಎಂಟು ವರ್ಷದ ಬಾಲಕಿ ಸಾವು
Published On - 7:19 am, Mon, 2 May 22