ಕಣ್ಣುಗಳು ಮಂಜಾಗುತ್ತಿದೆಯೇ?; ದೃಷ್ಟಿ ಸಮಸ್ಯೆ ಬಗೆಹರಿಸಲು ಹೀಗೆ ಮಾಡಿ

|

Updated on: Sep 02, 2023 | 4:44 PM

ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಅತ್ಯಗತ್ಯ. ಫಿಟ್ ಆಗಿರಲು ನಿಮ್ಮ ದೇಹವನ್ನು ವ್ಯಾಯಾಮ ಮಾಡುವಂತೆಯೇ ನಿಮ್ಮ ಕಣ್ಣುಗಳ ಶಕ್ತಿ ಸುಧಾರಿಸಲು ನೀವು ವ್ಯಾಯಾಮ ಮಾಡಬಹುದು. ಕಣ್ಣಿನ ವ್ಯಾಯಾಮಗಳು ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಣ್ಣುಗಳು ಮಂಜಾಗುತ್ತಿದೆಯೇ?; ದೃಷ್ಟಿ ಸಮಸ್ಯೆ ಬಗೆಹರಿಸಲು ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Follow us on

ಹಿಂದೆಲ್ಲ ವಯಸ್ಸು 90 ದಾಟಿದರೂ ದೃಷ್ಟಿ ತೀಕ್ಷ್ಣವಾಗಿರುತ್ತಿತ್ತು. ಆದರೆ, ಈಗ ಎಳೆ ವಯಸ್ಸಿನವರಲ್ಲೂ ದೃಷ್ಟಿ ದೋಷ ಹೆಚ್ಚಾಗುತ್ತಿದೆ. ನಿಮ್ಮ ಕಣ್ಣುಗಳು ಕೂಡ ಮಂಜಾಗಲು ಶುರುವಾಗಿದೆಯಾ? ಅದಕ್ಕೆ ಕನ್ನಡಕ ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳು ತಾತ್ಕಾಲಿಕ ಪರಿಹಾರವನ್ನು ನೀಡಬಹುದಾದರೂ ನಿಮ್ಮ ದೃಷ್ಟಿಯ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಆರೋಗ್ಯಕರ ಕಣ್ಣುಗಳನ್ನು ಕಾಪಾಡಿಕೊಳ್ಳಲು ನೈಸರ್ಗಿಕ ಮಾರ್ಗಗಳಿಲ್ಲಿವೆ.

ಪೌಷ್ಟಿಕಾಂಶ ಭರಿತ ಆಹಾರ:
ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಅತ್ಯಗತ್ಯ. ನಿಮ್ಮ ದೃಷ್ಟಿಯನ್ನು ಚೆನ್ನಾಗಿಡಲು ಕೆಲವು ಪೋಷಕಾಂಶಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ವಿಟಮಿನ್ ಎ:
ಕ್ಯಾರೆಟ್, ಗೆಣಸು ಮತ್ತು ಹಸಿರು ಸೊಪ್ಪಿನಲ್ಲಿ ಕಂಡುಬರುವ ವಿಟಮಿನ್ ಎ ಉತ್ತಮ ದೃಷ್ಟಿಗೆ ಅವಶ್ಯಕವಾಗಿದೆ. ಇದು ನಿಮ್ಮ ಕಣ್ಣುಗಳು ಬೆಳಕಿನ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Viral Optical Illusion: ಬಾರ್ಬಿ; ಕಣ್ಣುಮುಚ್ಚಿ ನೋಡಿದರೆ ಮಾತ್ರ ಈ ಚಿತ್ರದೊಳಗಿನ ಪಾತ್ರ ಕಾಣುತ್ತದೆ

ಒಮೆಗಾ -3 ಕೊಬ್ಬಿನಾಮ್ಲಗಳು:
ಕೊಬ್ಬಿನ ಮೀನು (ಸಾಲ್ಮನ್, ಮ್ಯಾಕೆರೆಲ್), ಅಗಸೆ ಬೀಜಗಳು ಮತ್ತು ವಾಲ್​ನಟ್​ಗಳಂತಹ ಆಹಾರಗಳು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಈ ಪೋಷಕಾಂಶಗಳು ಒಣಗಿದಂತಿರುವ ಕಣ್ಣುಗಳು ಮತ್ತು ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಕಣ್ಣಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಲುಟೀನ್ ಮತ್ತು ಝೀಕ್ಸಾಂಥಿನ್:
ಈ ಉತ್ಕರ್ಷಣ ನಿರೋಧಕಗಳು ಪಾಲಕ್ ಸೊಪ್ಪು, ಕೇಲ್ ಮತ್ತು ಬ್ರೊಕೊಲಿಯಂತಹ ತರಕಾರಿಗಳಲ್ಲಿ ಕಂಡುಬರುತ್ತವೆ. ನೇರಳಾತೀತ ಕಿರಣಗಳಂತಹ ಹಾನಿಕಾರಕ ಹೆಚ್ಚಿನ ಶಕ್ತಿಯ ಬೆಳಕಿನ ಕಿರಣಗಳಿಂದ ರೆಟಿನಾವನ್ನು ರಕ್ಷಿಸಲು ಇವು ಸಹಾಯ ಮಾಡುತ್ತವೆ.

ವಿಟಮಿನ್ ಸಿ:
ಸಿಟ್ರಸ್ ಹಣ್ಣುಗಳು, ಸ್ಟ್ರಾಬೆರಿ ಮತ್ತು ಬೆಲ್ ಪೆಪರ್‌ಗಳು ವಿಟಮಿನ್ ಸಿಯ ಅತ್ಯುತ್ತಮ ಮೂಲಗಳಾಗಿವೆ. ಇದು ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ ಸಮಸ್ಯೆ ಹೆಚ್ಚಾಗುವುದನ್ನು ನಿಧಾನಗೊಳಿಸುತ್ತದೆ.

ಇದನ್ನೂ ಓದಿ: ಆಗಾಗ ಕಣ್ಣುಗಳಿಂದ ನೀರು ಬರುವುದೇ?, ಈ ಕಾರಣ ಇರಬಹುದು

ಸತು:
ಬೀನ್ಸ್, ಬೀಜಗಳು ಮತ್ತು ಧಾನ್ಯಗಳಂತಹ ಆಹಾರಗಳು ಸತುವನ್ನು ಹೊಂದಿರುತ್ತವೆ. ಇದು ನಿಮ್ಮ ರೆಟಿನಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ.

ಕಣ್ಣಿನ ವ್ಯಾಯಾಮ:
ಫಿಟ್ ಆಗಿರಲು ನಿಮ್ಮ ದೇಹವನ್ನು ವ್ಯಾಯಾಮ ಮಾಡುವಂತೆಯೇ ನಿಮ್ಮ ಕಣ್ಣುಗಳ ಶಕ್ತಿ ಸುಧಾರಿಸಲು ನೀವು ವ್ಯಾಯಾಮ ಮಾಡಬಹುದು. ಕಣ್ಣಿನ ವ್ಯಾಯಾಮಗಳು ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ವಿರಾಮವನ್ನು ತೆಗೆದುಕೊಳ್ಳಿ. ಕನಿಷ್ಠ 20 ಅಡಿ ದೂರದಲ್ಲಿರುವ ವಸ್ತುವಿನ ಮೇಲೆ ಕೇಂದ್ರೀಕರಿಸಿ. ಈ ವ್ಯಾಯಾಮವು ಕಣ್ಣಿನ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.

ಕಣ್ಣಿನ ಆಯಾಸವನ್ನು ತಡೆಗಟ್ಟಲು ಕಂಪ್ಯೂಟರ್‌ನಲ್ಲಿ ಓದುವಾಗ ಅಥವಾ ಕೆಲಸ ಮಾಡುವಾಗ ಅಲ್ಲಿ ಸಾಕಷ್ಟು ಮತ್ತು ಆರಾಮದಾಯಕ ಬೆಳಕು ಇದೆಯಾ ಎಂಬುದನ್ನು ಗಮನಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ