ಕೊರೊನಾ ಸೋಂಕು ಆರಂಭವಾದಾಗಿನಿಂದ ಒಂದಲ್ಲಾ ಒಂದು ರೀತಿಯ ಔಷಧ ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುತ್ತದೆ. ಕೊವಿಡ್ ತಡೆಗಟ್ಟಲು ಹಲವು ರೀತಿಯ ಪರಿಹಾರೋಪಾಯಗಳನ್ನು ಜನರೇ ಒಬ್ಬರಿಂದ ಒಬ್ಬರಿಗೆ ಹಂಚುತ್ತಾರೆ. ಮತ್ತು ಅದನ್ನು ಬಲವಾಗಿ ನಂಬುವ ಜನರೂ ತುಂಬಾ ಇದ್ದಾರೆ. ವಾಟ್ಸಾಪ್‌ನಲ್ಲಿ ಹರಿದಾಡುವ ಇಂಥಾ ಎಲ್ಲಾ ಸುದ್ದಿಗಳು ನಿಜವೇ ಎಂದು ಯೋಚಿಸಲು ಬಹಳಷ್ಟು ಜನರು ಮುಂದಾಗುವುದಿಲ್ಲ. ಹಾಗೇ ಒಂದು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದು ಯಾವುದೆಂದರೆ, ಚಹಾ ಕುಡಿಯುವುದರಿಂದ ಕೊರೊನಾ ಸೋಂಕನ್ನು ತಡೆಗಟ್ಟಬಹುದು ಎಂಬುದು. ಈ ಸುದ್ದಿ ನಿಜವೇ? ಇಲ್ಲಿದೆ ಮಾಹಿತಿ.
ಚಹಾ ಕುಡಿಯುವುದರಿಂದ ಕೊರೊನಾ ಸೋಂಕು ತಡೆಗಟ್ಟಬಹುದು ಎಂಬ ಸುದ್ದಿಯನ್ನು ಭಾರತ ಸರ್ಕಾರ ಅಲ್ಲಗಳೆದಿದೆ. MyGov India ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಚಹಾ ಕುಡಿಯುವುದರಿಂದ ಕೊರೊನಾ ಸೋಂಕು ಬರುವುದಿಲ್ಲ ಎಂಬ ಸುದ್ದಿ ಸುಳ್ಳು. ಅದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ ಎಂದು ತಿಳಿಸಿದೆ. ಚಹಾ ಕುಡಿಯುವುದರಿಂದ ಸೋಂಕು ಬರುವುದಿಲ್ಲ ಅಥವಾ ಬೇಗ ಕಡಿಮೆ ಆಗುತ್ತದೆ ಎಂಬುದಕ್ಕೆ ಯಾವುದೇ ನಿದರ್ಶನ ಇಲ್ಲ ಎಂದು ಹೇಳಿದೆ.
ಅಷ್ಟೇ ಅಲ್ಲದೆ, ಇಂಥಾ ಸುಳ್ಳು ಸುದ್ದಿಗಳಿಂದ ದಾರಿ ತಪ್ಪದಂತೆ ಎಚ್ಚರ ವಹಿಸಲೂ ಸೂಚಿಸಿದೆ. ಅಧಿಕೃತ ಮೂಲಗಳ ಮಾಹಿತಿ ಮಾತ್ರ ನಂಬಬೇಕು. ಹೀಗಿರುವ ಸುದ್ದಿಗಳನ್ನು ಮತ್ತೊಬ್ಬರಿಗೆ ಹಂಚುವಾಗ ಕೂಡ ಜಾಗ್ರತೆಯಾಗಿರುವಂತೆ, ಜವಾಬ್ದಾರಿಯಿಂದ ವರ್ತಿಸುವಂತೆ ಸರ್ಕಾರ ತಿಳಿಸಿದೆ.
Yes, tea is ❤️ but there is NO scientific evidence that it can prevent #COVID19 or make you recover from it faster! Don’t be misled by rumours, trust authentic sources & be responsible while forwarding such news. For more facts, visit https://t.co/CKhgW2LA7d. #IndiaFightsCorona pic.twitter.com/VTZSi788xE
— MyGovIndia (@mygovindia) May 11, 2021
ವೈರಾಣುವಿನ ಚಟುವಟಿಕೆ ತಡೆಗಟ್ಟಲು ಗ್ರೀನ್ ಟೀ ಕೆಲಸ ಮಾಡುತ್ತದೆಯೇ? ಎಂಬ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಈ ಬಗ್ಗೆ ಶಾಲಿಮಾರ್ ಭಾಗ್ ಫೋರ್ಟಿಸ್ ಆಸ್ಪತ್ರೆಯ ಶ್ವಾಸಕೋಶತಜ್ಞ ಡಾ. ವಿಕಾಸ್ ಮೌರ್ಯ ಮಾಹಿತಿ ನೀಡಿದ್ದಾರೆ. ಆದರೆ ಸದ್ಯ, ಕೊವಿಡ್ ತಡೆಗಟ್ಟಲು ಚಹಾ ಸಹಾಯ ಮಾಡುತ್ತದೆ ಎಂಬ ಬಗ್ಗೆ ಯಾವುದೇ ಸಾಕ್ಷಿ ಇಲ್ಲ. ಇಂಥ ತಪ್ಪು ಮಾಹಿತಿ ಹಂಚಬೇಡಿ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಸೋಂಕು ತಡೆಗಟ್ಟಲು ಇರುವುದು ಸರ್ಕಾರ ತಿಳಿಸಿದ ನಿಯಮಾವಳಿಗಳು ಮಾತ್ರ. ಮಾಸ್ಕ್ ಧರಿಸುವುದು, ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಸಾಮಾಜಿಕ ಅಂತ ಪಾಲಿಸುವುದು ಈ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದು ಅವರು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಕೊರೊನಾ ಸೋಂಕಿಗೂ ಬದುಕುವ ಹಕ್ಕಿದೆ, ಅದು ಕೂಡಾ ಒಂದು ಜೀವಿ’: ಉತ್ತರಾಖಂಡದ ಮಾಜಿ ಸಿಎಂ ರಾವತ್
Kichcha Sudeep: ಕೊರೊನಾದಿಂದ ಸುದೀಪ್ ಗುಣಮುಖ; ಕಷ್ಟದ ದಿನಗಳನ್ನು ಎದುರಿಸಿ ಬಂದ ಕಿಚ್ಚ ಹೇಳಿದ್ದೇನು?
Published On - 8:32 pm, Fri, 14 May 21