Kichcha Sudeep: ಕೊರೊನಾದಿಂದ ಸುದೀಪ್ ಗುಣಮುಖ; ಕಷ್ಟದ ದಿನಗಳನ್ನು ಎದುರಿಸಿ ಬಂದ ಕಿಚ್ಚ ಹೇಳಿದ್ದೇನು?
Coronavirus: ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಯ ಕಾರಣದಿಂದ ಸುದೀಪ್ ಯಾವುದೇ ಚಿತ್ರೀಕರಣಕ್ಕೆ ಗೈರು ಆಗುವವರಲ್ಲ. ಆದರೆ ಈ ಬಾರಿ ಚಿತ್ರೀಕರಣಕ್ಕೆ ಬ್ರೇಕ್ ಹಾಕುವುದು ಅನಿವಾರ್ಯ ಆಗಿತ್ತು. ‘ಸಹಿಸಲಾರದ ನೋವು ಕಾಣಿಸಿಕೊಂಡಿತು. ಆ ಥರದ ನೋವು ಎಂದೂ ಆಗಿರಲಿಲ್ಲ’ ಎಂದು ಸುದೀಪ್ ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರಿಗೆ ಅನಾರೋಗ್ಯ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಅವರ ಅಭಿಮಾನಿಗಳಿಗೆ ಆತಂಕ ಕಾಡಲು ಆರಂಭಿಸಿತ್ತು. ಎಲ್ಲೆಡೆ ಕೊವಿಡ್ ಹರಡಿರುವ ಈ ಸಂದರ್ಭದಲ್ಲಿ ಸುದೀಪ್ ಆರೋಗ್ಯದ ಬಗ್ಗೆ ಫ್ಯಾನ್ಸ್ಗೆ ಚಿಂತೆ ಶುರುವಾಗಿತ್ತು. ಕಿಚ್ಚ ಬೇಗ ಹುಷಾರಾಗಲಿ ಎಂದು ಅನೇಕ ದೇವಸ್ಥಾನಗಳಲ್ಲಿ ಅಭಿಮಾನಿಗಳಿಂದ ಪೂಜೆ ಸಲ್ಲಿಸಲಾಯಿತು. ಎಲ್ಲದರ ಫಲವಾಗಿ ಸುದೀಪ್ ಈಗ ಗುಣಮುಖರಾಗಿದ್ದಾರೆ. ಅವರಿಗೆ ಏನಾಗಿತ್ತು ಎಂಬ ಬಗ್ಗೆಯೇ ಅಭಿಮಾನಿಗಳಿಗೆ ಸ್ಪಷ್ಟತೆ ಇರಲಿಲ್ಲ. ಈಗ ಚೇತರಿಸಿಕೊಂಡಿರುವ ಅವರು ಕೊವಿಡ್ ಗೆದ್ದು ಬಂದಿದ್ದಾರೆ ಎಂಬುದು ತಿಳಿದುಬಂದಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಅನಾರೋಗ್ಯದಿಂದಾದ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಕೆಲವು ವಾರಗಳ ಹಿಂದೆ ಬಿಗ್ ಬಾಸ್ ಶೋ ನಿರೂಪಣೆಗಾಗಿ ಹಲವು ಗಂಟೆಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡ ಬಳಿಕ ಸುದೀಪ್ ಅವರಿಗೆ ಕಾಲು ನೋವು ಶುರುವಾಗಿದೆ ಎಂಬುದು ತಿಳಿದು ಬಂತು. ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಯ ಕಾರಣಕ್ಕೆ ಸುದೀಪ್ ಯಾವುದೇ ಚಿತ್ರೀಕರಣಕ್ಕೆ ಗೈರು ಆಗುವವರಲ್ಲ. ಆದರೆ ಈ ಬಾರಿ ಚಿತ್ರೀಕರಣಕ್ಕೆ ಬ್ರೇಕ್ ಹಾಕುವುದು ಅನಿವಾರ್ಯ ಆಗಿತ್ತು. ‘ಸಹಿಸಲಾರದ ನೋವು ಕಾಣಿಸಿಕೊಂಡಿತು. ಆ ಥರದ ನೋವು ಎಂದೂ ಆಗಿರಲಿಲ್ಲ. ಆನಂತರ ಮತ್ತೆ ರಿಸ್ಕ್ ತೆಗೆದುಕೊಳ್ಳಲು ನಾನು ಸಿದ್ಧವಿರಲಿಲ್ಲ’ ಎಂದು ಸುದೀಪ್ ಹೇಳಿದ್ದಾರೆ.
ಸುದೀಪ್ಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹಾಗಾಗಿ ಅವರು ಚೇತರಿಸಿಕೊಳ್ಳಲು ನಾಲ್ಕು ವಾರಗಳು ಬೇಕಾದವು. ‘ಎಲ್ಲ ಬಗೆಯ ಸುದ್ದಿಗಳು ನಮ್ಮ ಕಿವಿಗೆ ಬೀಳುತ್ತಿತ್ತು. ಪರಿಸ್ಥಿತಿ ತುಂಬ ಅನಿಶ್ಚಿತವಾಗಿತ್ತು. ಹುಷಾರಾಗೋಕೆ ತುಂಬ ಸಮಯ ಆಗುತ್ತಿದೆ ಎಂದಾಗ ನಮ್ಮ ಮನಸ್ಥಿತಿ ಎಷ್ಟು ಗಟ್ಟಿಯಾಗಿದೆ ಎಂಬುದು ಅವಾಗಲೇ ಗೊತ್ತಾಗೋದು. ನನಗೂ ಭಯ ಆಗುತ್ತಿತ್ತು’ ಎಂದು ಆ ದಿನಗಳ ಕಷ್ಟವನ್ನು ಮೆಲುಕು ಹಾಕಿದ್ದಾರೆ.
ಈ ಸಂದರ್ಭದಲ್ಲಿ ಸ್ಟಾರ್ಡಮ್, ಹಣ ಕೆಲಸಕ್ಕೆ ಬರುವುದಿಲ್ಲ. ನಿಮ್ಮ ಸಮಯ ಸರಿ ಇರಬೇಕು. ಸುತ್ತಮುತ್ತ ಇರುವವರ ಪ್ರಾರ್ಥನೆ ಚೆನ್ನಾಗಿರಬೇಕು. ಅದು ನನ್ನ ವಿಚಾರದಲ್ಲಿ ಚೆನ್ನಾಗಿತ್ತು. ಕುಟುಂಬದವರು ಕೂಡ ಜೊತೆಯಲ್ಲಿ ಇದ್ದು ಸಮಾಧಾನ ಮಾಡೋಕೆ ಸಾಧ್ಯವಿಲ್ಲ. ನಮ್ಮವರಿಗೆ ಆ ರೀತಿ ಏನಾದರೂ ಆಗಿದ್ದರೆ ಅವರಿಗೆ ಫೋನ್, ಮೆಸೇಜ್ ಮೂಲಕ ಧೈರ್ಯ ತುಂಬುವ ಕೆಲಸ ಮಾಡಬೇಕು’ ಎಂದಿದ್ದಾರೆ ಸುದೀಪ್.
ಸ್ವತಃ ಸುದೀಪ್ ಆತಂಕದ ಸ್ಥಿತಿಯಲ್ಲಿ ಇದ್ದರೂ ಕೂಡ ಜನರ ಸೇವೆಯನ್ನು ಅವರು ನಿಲ್ಲಿಸಿಲ್ಲ. ಅವರ ಚಾರಿಟೇಬಲ್ ಟ್ರಸ್ಟ್ ಮೂಲಕ ಕಷ್ಟದಲ್ಲಿರುವವರ ಸಹಾಯಕ್ಕೆ ಅವರು ನಿಂತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಊಟ ಮತ್ತು ಅಗತ್ಯ ವಸ್ತುಗಳನ್ನು ನೀಡುವ ಕಾಯವನ್ನು ಅವರು ಮುಂದುವರಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕರಿಗೆ ಸಹಾಯ ಮಾಡಿದ್ದಾರೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಪಾಟೀಲ್ ಅವರ ತಾಯಿ ಬಾಗಲಕೋಟೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಸೋನು ಪಾಟೀಲ್ ಅವರು ವಿಡಿಯೋ ಮೂಲಕ ಹೇಳಿಕೊಂಡಿದ್ದರು. ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಯನ್ನು ನೀಡಿದ ಸುದೀಪ್ಗೆ ಸೋನು ಧನ್ಯವಾದ ಅರ್ಪಿಸಿದ್ದರು.
ಇದನ್ನೂ ಓದಿ:
Kichcha Sudeep: ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ಕಿಚ್ಚ ಸುದೀಪ್
ಬಿಗ್ ಬಾಸ್ ಕೊನೆಯ ಎಪಿಸೋಡ್ನಲ್ಲಿ ವಿನ್ನರ್ ಘೋಷಿಸಿದ ಸುದೀಪ್; ಅಚ್ಚರಿ ಮೂಡಿಸಿದ ಕಿಚ್ಚನ ಮಾತು