ಹಿಂದಿನ ಕಾಲದಿಂದಲೂ ಮೆಂತ್ಯವನ್ನು ಅಡುಗೆಗೆ ಮಾತ್ರವಲ್ಲ ಔಷಧಿಯಾಗಿಯೂ ಬಳಸಲಾಗುತ್ತಿದೆ. ಮೆಂತೆಕಾಳು ಕಹಿಯಾಗಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಖನಿಜಾಂಶಗಳು ಇವೆ. ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿಟ್ಟುಕೊಂಡು ಅದನ್ನು ಕುಡಿಯುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಯಾವ ಸಮಸ್ಯೆಗಳಿರುವವರು ಇದನ್ನು ಕುಡಿಯಬೇಕು? ಇಲ್ಲಿದೆ ಮಾಹಿತಿ.
ಮೆಂತ್ಯವನ್ನು ನೆನೆಸಿ ಬೆಳಿಗ್ಗೆ ಆ ನೀರನ್ನು ಕುಡಿಯುವುದರಿಂದ, ಅನೇಕ ರೀತಿಯ ಕಾಯಿಲೆಗಳನ್ನು ಗುಣಪಡಿಸಬಹುದು. ಇದು ಅಜೀರ್ಣ, ಉಬ್ಬರ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಮೆಂತ್ಯ ನೀರು ಹಸಿವನ್ನು ಕಡಿಮೆ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಜೊತೆಗೆ ಕೊಬ್ಬು ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಇದನ್ನೂ ಓದಿ: ಬೆವರುವುದು ಆರೋಗ್ಯಕ್ಕೆ ಒಳ್ಳೆಯದು , ಯಾಕೆ ಗೊತ್ತಾ?
ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು, ಅಲ್ಲದೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಇದನ್ನು ಕುಡಿದಾಗ ಹೊಟ್ಟೆ ತುಂಬಿದ ಭಾವನೆ ಬರುವುದರಿಂದ ನೀವು ಹೆಚ್ಚಾಗಿ ಆಹಾರ ಸೇವನೆ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಇದು ಹೆಚ್ಚುವರಿ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುವ ಮೂಲಕ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇದೆಲ್ಲದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ. ಸೋಂಕುಗಳ ವಿರುದ್ಧ ದೇಹವನ್ನು ರಕ್ಷಿಸುತ್ತದೆ. ಮುಟ್ಟಿನ ನೋವನ್ನು ಕೂಡ ನಿವಾರಿಸುತ್ತದೆ. ಇದು ಋತುಚಕ್ರದ ಸೆಳೆತ ಮತ್ತು ಉಬ್ಬರದಂತಹ ರೋಗಲಕ್ಷಣಗಳನ್ನು ನಿವಾರಿಸಲು ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ. ಅಲ್ಲದೆ, ಮೆಂತ್ಯವನ್ನು ನೆನೆಸಿ ತಲೆಗೆ ಹಚ್ಚುವುದು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: