Hair Care Tips : ದಟ್ಟವಾದ ಹೊಳಪುಳ್ಳ ಕೂದಲು ನಿಮ್ಮದಾಗಬೇಕೇ, ಮೆಂತ್ಯೆ ಕಾಳನ್ನು ಹೀಗೆ ಬಳಸಿ!
ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುವುದೇ ನೀಳವಾದ ಕೂದಲು. ಆದರೆ ಇತ್ತೀಚೆಗಿನ ದಿನಗಳಲ್ಲಿ ಕೂದಲಿಗೆ ಕತ್ತರಿ ಹಾಕುವವರ ಸಂಖ್ಯೆಯು ಹೆಚ್ಚಾಗಿದೆ. ಉದ್ದ ಕೂದಲಿದ್ದರೆ ಅದರ ಆರೈಕೆ ಮಾಡುವುದು ಕಷ್ಟ ಎನ್ನುವುದು ಬಹುತೇಕರ ಅಭಿಪ್ರಾಯ. ಅದಲ್ಲದೇ, ಕೂದಲು ಉದುರುವುದು, ತಲೆ ಹೊಟ್ಟು, ಚರ್ಮದ ತುರಿಕೆ ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿದ್ದು, ಅಡುಗೆ ಮನೆಯಲ್ಲಿರುವ ಮೆಂತ್ಯೆ ಕಾಳನ್ನು ಈ ರೀತಿ ಬಳಸಿದರೆ ದಪ್ಪವಾದ ನೀಳವಾದ ಕೂದಲು ನಿಮ್ಮದಾಗುತ್ತದೆ.
ಮೆಂತ್ಯ ಕಾಳು ಗುಣದಲ್ಲಿ ಕಹಿಯಾದರೂ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಈ ಮೆಂತ್ಯ ಕಾಳಿನಲ್ಲಿ ಕ್ಯಾಲರಿ, ಕಾರ್ಬೋಹೈಡ್ರೇಟ್, ಫೈಬರ್, ಪ್ರೊಟೀನ್ ಸೇರಿದಂತೆ ಅನೇಕ ಫೋಷಕಾಂಶಗಳು ಹೇರಳವಾಗಿವೆ. ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಕೂದಲಿನ ಆರೈಕೆಗೂ ಈ ಸಣ್ಣ ಸಣ್ಣ ಕಾಳುಗಳು ಬಹಳಷ್ಟು ಪ್ರಯೋಜನಕಾರಿಯಾಗಿದೆ. ಈ ಮೆಂತ್ಯವು ಕೂದಲಿನ ಅನೇಕ ಸಮಸ್ಯೆಗಳನ್ನು ಪರಿಹರಿಸಿ ಕೂದಲು ಉದ್ದ ಹಾಗೂ ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ.
- ಮೆಂತ್ಯ ಕಾಳುಗಳನ್ನು ತೆಗೆದುಕೊಂಡು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದರೆ ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಆರೈಕೆ ಮಾಡುತ್ತದೆ.
- ರಾತ್ರಿಯಿಡೀ ನೆನೆಸಿದ ಮೆಂತ್ಯ ಬೀಜಗಳನ್ನು ಸಲಾಡ್‌ಗಳಲ್ಲಿಯೂ ತಿನ್ನಬಹುದು. ಇಲ್ಲವಾದರೆ ದಿನನಿತ್ಯ ಅಡುಗೆಯಲ್ಲಿ ಈ ಮೆಂತ್ಯೆ ಕಾಳನ್ನು ಉಪಯೋಗಿಸಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
- ನೆನೆಸಿದ ಮೆಂತ್ಯ ಕಾಳುಗಳ ನೀರನ್ನು ಸೋಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಬೆಳಿಗ್ಗೆ ಕೂದಲಿಗೆ ಹೇರ್ ಸ್ಪ್ರೇ ರೀತಿಯಲ್ಲಿ ಬಳಸಬಹುದು. ಸ್ವಲ್ಪ ಸಮಯದ ನಂತರ ಕೂದಲನ್ನು ತೊಳೆದರೆ ಕೂದಲು ಉದುರುವಿಕೆ ಸಮಸ್ಯೆಯು ದೂರವಾಗುತ್ತದೆ.
- ತೆಂಗಿನೆಣ್ಣೆಗೆ ಮೆಂತ್ಯೆ ಕಾಳನ್ನು ಹಾಕಿ ಕುದಿಸಿ ಈ ಎಣ್ಣೆಯನ್ನು ಹಚ್ಚುತ್ತ ಬಂದರೆ ಕೂದಲು ಕಪ್ಪಾಗಿ ಹಾಗೂ ಸೊಂಪಾಗಿ ಬೆಳೆಯುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ