AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಣ ರಂಜಿತ ಧ್ವಜವನ್ನು ಬೈಕ್‌ಗಳಲ್ಲಿ ಹಾಕುವುದೇಕೆ ಗೊತ್ತಾ?

ಒಂದಷ್ಟು ಕಾರ್‌ಗಳ ಹಿಂಬದಿಯಲ್ಲಿ, ಬೈಕ್‌ಗಳಲ್ಲಿ ವರ್ಣರಂಜಿತ ಧ್ವಜ ಹಾಕಿರುವುದನ್ನು ನೀವು ಸಹ ಗಮನಿಸಿರುತ್ತೀರಿ ಅಲ್ವಾ. ಸಾಮಾನ್ಯವಾಗಿ ಲಾಂಗ್‌ ರೈಡ್‌ ಹೋಗುವಂತಹ ಬೈಕರ್ಸ್‌ ತಮ್ಮ ಬೈಕ್‌ಗಳಲ್ಲಿ ಈ ಐದು ಬಣ್ಣದ ಫ್ಲ್ಯಾಗ್‌ ಅನ್ನು ಹಾಕಿರುತ್ತಾರೆ. ಹೆಚ್ಚಿನವರು ಇದನ್ನು ಫ್ಯಾಶನ್‌ಗಾಗಿ, ಅಲಂಕಾರಕ್ಕಾಗಿ ಹಾಕಿರುತ್ತಾರೆ ಎಂದು ಭಾವಿಸುತ್ತಾರೆ, ಆದ್ರೆ ಹೀಗೆ ಬೈಕ್‌ಗಳಲ್ಲಿ ಈ ಫ್ಲ್ಯಾಗ್‌ ಹಾಕುವುದರ ಹಿಂದೆಯೂ ಒಂದು ಅರ್ಥವಿದೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಈ ವರ್ಣ ರಂಜಿತ ಧ್ವಜವನ್ನು ಬೈಕ್‌ಗಳಲ್ಲಿ ಹಾಕುವುದೇಕೆ ಗೊತ್ತಾ?
ಟಿಬೆಟಿಯನ್‌ ಪ್ರಾರ್ಥನಾ ಧ್ವಜImage Credit source: Pinterest
ಮಾಲಾಶ್ರೀ ಅಂಚನ್​
|

Updated on:Feb 21, 2026 | 4:23 PM

Share

ಇತ್ತೀಚಿನ ದಿನಗಳಲ್ಲಿ ಲಡಾಕ್‌ನಂತಹ ಹಿಲ್‌ ಸ್ಟೇಷನ್‌ಗಳಿ ಬೈಕ್‌ ರೈಡ್‌ ಹೋಗುವಂತಹದ್ದು ಟ್ರೆಂಡ್‌ ಆಗಿದೆ. ಯುವ ಜನರಂತೂ ರಜಾ ದಿನಗಳಲ್ಲಿ ಬ್ಯಾಗ್‌ ಪ್ಯಾಕ್‌ ಮಾಡಿ ಈ ರೀತಿ ರೈಡ್‌ಗಳಿಗೆ ಹೋಗುತ್ತಿರುತ್ತಾರೆ. ಹೀಗೆ ದೂರದೂರುಗಳಿಗೆ ರೈಡ್‌ ಹೋಗುವವರು ತಮ್ಮ ಬೈಕ್‌ಗಳಲ್ಲಿ (bikes)ಐದು ಬಣ್ಣಗಳಿಂದ ಕೂಡಿದ ಟಿಬೆಟಿಯನ್ ಫ್ಲ್ಯಾಗ್‌ ಒಂದನ್ನು ನೇತುಹಾಕಿರುತ್ತಾರೆ. ಬಹುಶಃ ನೀವು ಕೂಡ ಇದನ್ನು ಗಮನಿಸಿರುತ್ತೀರಿ ಅಲ್ವಾ. ಸಾಕಷ್ಟು ಮಂದಿ ಇದನ್ನು ಫ್ಯಾಶನ್‌ ಮತ್ತು ಅಲಂಕಾರಕ್ಕಾಗಿ ಹಾಕಿರುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಇದರ ಹಿಂದಿನ ಕಾರಣವೇ ಬೇರೆಯಿದೆ. ಹಾಗಿದ್ರೆ ಈ ಐದು ಬಣ್ಣದ ಧ್ವಜವನ್ನು ಬೈಕ್‌ಗಳಲ್ಲಿ ಹಾಕುವುದೇಕೆ? ಅದರ ಅರ್ಥವೇನು ಎಂಬುದನ್ನು ನೋಡೋಣ ಬನ್ನಿ.

ಬೌದ್ಧ ಸಂಪ್ರದಾಯದ ಸಂಕೇತ ಈ ಧ್ವಜ:

ಬೈಕ್‌ಗಳಲ್ಲಿ ಹಾಕಿರುವಂತಹ ಈ ಫ್ಲ್ಯಾಗ್‌ಗಳನ್ನು ಟಿಬೆಟಿಯನ್‌ ಪ್ರೇಯರ್‌ ಫ್ಲ್ಯಾಗ್‌ ಎಂದು ಕರೆಯಲಾಗುತ್ತದೆ. ಈ ಟಿಬೆಟಿಯನ್ ಧ್ವಜಗಳು ಬೌದ್ಧ ಸಂಪ್ರದಾಯ, ಧಾರ್ಮಿಕ ನಂಬಿಕೆ ಮತ್ತು ಪ್ರಕೃತಿಯ ಮೇಲಿನ ಗೌರವವನ್ನು ಸಂಕೇತಿಸುತ್ತವೆ. ಅಲ್ಲದೆ ಧ್ವಜದ ಐದು ಬಣ್ಣಗಳು ಐದು ಅಂಶಗಳು ಮತ್ತು ಐದು ದಿಕ್ಕುಗಳನ್ನು ಸಂಕೇತಿಸುತ್ತವೆ.  ಟಿಬೆಟ್ ನನ್ಸ್ ಪ್ರಾಜೆಕ್ಟ್ ವೆಬ್‌ಸೈಟ್ ಪ್ರಕಾರ, ಇವು ಟಿಬೆಟಿಯನ್ ಪ್ರಾರ್ಥನಾ ಧ್ವಜಗಳು. ಟಿಬೆಟ್‌ನ ಜನರು ಅವುಗಳನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಈ ಧ್ವಜದಲ್ಲಿ ನೀಲಿ, ಬಿಳಿ, ಕೆಂಪು, ಹಸಿರು ಮತ್ತು ಹಳದಿ ಬಣ್ಣಗಳಿದ್ದು, ಈ ಬಣ್ಣಗಳಲ್ಲಿ ಪ್ರತಿಯೊಂದೂ ವಿಭಿನ್ನ ಅರ್ಥವನ್ನು ಹೊಂದಿದೆ.

ಈ ಧ್ವಜಗಳ ಐದು ಬಣ್ಣಗಳು ಐದು ಅಂಶಗಳನ್ನು ಸಂಕೇತಿಸುತ್ತವೆ. ಮೊದಲ ಬಣ್ಣ ನೀಲಿ, ಇದು ಆಕಾಶ  ಮತ್ತು ಪೂರ್ವ ದಿಕ್ಕನ್ನು ಸಂಕೇತಿಸುತ್ತದೆ. ಬಿಳಿ ಬಣ್ಣ ಗಾಳಿಯನ್ನು ಮತ್ತು ಪಶ್ಚಿಮ ದಿಕ್ಕನ್ನು ಪ್ರತಿನಿಧಿಸುತ್ತದೆ. ಕೆಂಪು ಬಣ್ಣವು ಬೆಂಕಿಯನ್ನು ಮತ್ತು ದಕ್ಷಿಣ ದಿಕ್ಕನ್ನು ಸಹ ಸಂಕೇತಿಸುತ್ತದೆ. ಹಸಿರು ನೀರು ಮತ್ತು ಉತ್ತರ ದಿಕ್ಕಿನೊಂದಿಗೆ ಸಂಬಂಧ ಹೊಂದಿದೆ. ಹಳದಿ ಭೂಮಿ ಮತ್ತು ಅದರ ಕೇಂದ್ರವನ್ನು ಸಂಕೇತಿಸುತ್ತದೆ.

ಟಿಬೆಟಿಯನ್ ಧ್ವಜ ಬೌದ್ಧಧರ್ಮದ ನಂಬಿಕೆಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಈ ಧ್ವಜಗಳನ್ನು ಶಾಂತಿ ಮತ್ತು ಕರುಣೆಯನ್ನು ಸಹ ಸಂಕೇತಿಸುತ್ತವೆ. ಟಿಬೆಟಿಯನ್ ಸಂಸ್ಕೃತಿಯಲ್ಲಿ ಅವುಗಳನ್ನು ದಾರ್-ಚೋ ಎಂದು ಕರೆಯಲಾಗುತ್ತದೆ. ದಾರ್ ಎಂದರೆ ಜೀವನ, ಸಂಪತ್ತು, ಸಮೃದ್ಧಿ ಮತ್ತು ಆರೋಗ್ಯ, ಆದರೆ ಚೋ ಎಂದರೆ ಎಲ್ಲಾ ಜೀವಿಗಳು. ಈ ಧ್ವಜಗಳು ಗಾಳಿಯಲ್ಲಿ ಹಾರಿದಾಗ, ಅವುಗಳ ಶಕ್ತಿಯು ದೂರದವರೆಗೆ ಹರಡಿ ಎಲ್ಲರಿಗೂ ಯೋಗಕ್ಷೇಮವನ್ನು ಕರುಣಿಸುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಚುಂಬನದಲ್ಲಿ ಎಷ್ಟು ಪ್ರಕಾರಗಳಿವೆ, ಅವುಗಳ ಅರ್ಥವೇನು ಗೊತ್ತಾ?

ಟಿಬೆಟಿಯನ್‌ ಧ್ವಜದ ಮೇಲೆ ಬರೆದ ಮಂತ್ರಗಳ ಅರ್ಥವೇನು?

ಧ್ವಜದ ಮೇಲೆ ಟಿಬೆಟಿಯನ್ ಅಕ್ಷರ “ಓಂ ಮಣಿ ಪದ್ಮೇ ಹಮ್” ಇದೆ. ಓಂ ಎಂಬುದು ಅತ್ಯಂತ ಪವಿತ್ರ ಪದ, ನಂತರ ಮಣಿ ಎಂದರೆ ರತ್ನ, ಪದ್ಮೇ ಎಂದರೆ ಕಮಲ ಮತ್ತು ಹಮ್ ಎಂದರೆ ಪ್ರಬುದ್ಧ ಆತ್ಮ. ಇದು ಕರುಣೆ, ನೈತಿಕತೆ, ತಾಳ್ಮೆ, ಕಠಿಣ ಪರಿಶ್ರಮ, ತ್ಯಾಗ ಮತ್ತು ಬುದ್ಧಿವಂತಿಕೆಯಂತಹ ಮೌಲ್ಯಗಳ ಸಂಯೋಜನೆಯಾಗಿದೆ. ಧ್ಯಾನದ ಸಮಯದಲ್ಲಿ ಮಂತ್ರವನ್ನು ಪಠಿಸುವುದರಿಂದ ಅಹಂ, ಅಸೂಯೆ, ಅಜ್ಞಾನ, ದುರಾಸೆ ಮತ್ತು ಆಕ್ರಮಣಶೀಲತೆಯನ್ನು ಹೋಗಲಾಡಿಸಬಹುದು ಎಂದು ಹೇಳಲಾಗುತ್ತದೆ.

ಟಿಬೆಟಿಯನ್ ಧ್ವಜವನ್ನು ಬೈಕ್‌ಗಳಲ್ಲಿ ಏಕೆ ಹಾರಿಸಲಾಗುತ್ತದೆ?

ಓಂ ಮಣಿ ಪದ್ಮೇ ಹಮ್ ಎಂಬ ಮಂತ್ರವಿರುವ ಈ ಧ್ವಜಗಳು ಗಾಳಿಯಲ್ಲಿ ಹಾರಾಡಿದಾಗ ಮಂತ್ರದ ಶಕ್ತಿ ಸಕ್ರಿಯವಾಗುತ್ತದೆ. ಇದು ಎಲ್ಲಾ ಅಪಾಯಗಳಿಂದ ನಮ್ಮನ್ನು ರಕ್ಷಿಸುತ್ತದೆ ಮತ್ತು  ಈ ಮಂತ್ರಗಳ ಸಕಾರಾತ್ಮಕತೆಯು ವಾತಾವರಣಕ್ಕೆ ಹರಿಯುತ್ತದೆ ಎಂದು ಎಂದು ನಂಬಲಾಗಿದೆ. ಹಾಗಾಗಿ ಬೈಕ್‌ಗಳಲ್ಲಿ ಈ ಧ್ವಜ ಹಾಕುವುದು. ಟಿಬೆಟಿಯನ್ನರು ಅವುಗಳನ್ನು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ ಮತ್ತು ಈ ಧ್ವಜಗಳನ್ನು ಕಸದ ಬುಟ್ಟಿಗೆ ಎಸೆಯುವುದನ್ನು ಅಥವಾ ನೆಲದ ಮೇಲೆ ಇಡುವುದನ್ನು ನಿಷೇಧಿಸಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Sat, 21 February 26