World Health Day 2021: ಬೇಸಿಗೆ ಹೊಟ್ಟೆ ಸಮಸ್ಯೆಗಳನ್ನು ತರಬಹುದು; ಸಾಮಾನ್ಯವಾಗಿ ಕಾಡುವ ಅಜೀರ್ಣ, ವಾಕರಿಕೆಯಿಂದ ಪಾರಾಗಲು ಹೀಗಿರಲಿ ನಿಮ್ಮ ಆಹಾರ

ಬಿರುಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆಗಳು ಒಂದಷ್ಟಿವೆ. ಅದರಲ್ಲಿ ಮುಖ್ಯವಾಗಿ ಜಠರದ ಉರಿಯೂತ (Gastroenteritis). ವಾತಾವರಣದಲ್ಲಿ ಅತಿ ಉಷ್ಣತೆ ಇದ್ದಾಗ ಜಠರದ ಉರಿಯೂತ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಬಹುತೇಕ ಎಲ್ಲ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತದೆ.

  • TV9 Web Team
  • Published On - 16:26 PM, 7 Apr 2021
World Health Day 2021: ಬೇಸಿಗೆ ಹೊಟ್ಟೆ ಸಮಸ್ಯೆಗಳನ್ನು ತರಬಹುದು; ಸಾಮಾನ್ಯವಾಗಿ ಕಾಡುವ ಅಜೀರ್ಣ, ವಾಕರಿಕೆಯಿಂದ ಪಾರಾಗಲು ಹೀಗಿರಲಿ ನಿಮ್ಮ ಆಹಾರ
ಬೇಸಿಗೆಯಲ್ಲಿ ಹಣ್ಣು, ತರಕಾರಿ ಸೇವನೆ ಒಳ್ಳೆಯದು

ಬೇಸಿಗೆ ಕಾಲ ಶುರುವಾಗಿದೆ. ಈಗಾಲೇ ಬಿರುಬಿಸಿಲು ಆಯಾಸ ಸೇರಿ ಹಲವು ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುವುದರಲ್ಲಿ ಸಂಶಯವಿಲ್ಲ. ಬಿಸಿಲು ಹೆಚ್ಚಾದಂತೆ ನಮ್ಮಲ್ಲಿ ಡಿ ಹೈಡ್ರೇಶನ್​, ಜ್ವರ, ಹೊಟ್ಟೆಯ ಸಮಸ್ಯೆ ಸೇರಿ ಹಲವು ರೀತಿಯ ಅನಾರೋಗ್ಯಗಳು ಉಂಟಾಗುತ್ತಿವೆ. ಅದರಲ್ಲೂ ಮುಖ್ಯವಾಗಿ ಜೀರ್ಣಕ್ರಿಯೆ ಶಕ್ತಿ ಕುಂದುತ್ತದೆ. ತಿಂದ ಆಹಾರ ಜೀರ್ಣವಾಗಲು ಹೆಚ್ಚಿನ ಸಮಯ ಬೇಕಾಗಬಹುದು.. ಅಥವಾ ಊಟದ ಪ್ರಮಾಣವೇ ಕಡಿಮೆ ಆಗಬಹುದು. ಈ ಸಮಸ್ಯೆಯಿಂದ ಪಾರಾಗಲು, ಅತ್ಯುಷ್ಣತೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮ್ಮ ನಿತ್ಯ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಒಳಿತು.

ಬಿರುಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆಗಳು ಒಂದಷ್ಟಿವೆ. ಅದರಲ್ಲಿ ಮುಖ್ಯವಾಗಿ ಜಠರದ ಉರಿಯೂತ (Gastroenteritis). ವಾತಾವರಣದಲ್ಲಿ ಅತಿ ಉಷ್ಣತೆ ಇದ್ದಾಗ ಜಠರದ ಉರಿಯೂತ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಬಹುತೇಕ ಎಲ್ಲ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತದೆ. ವಾಂತಿಯಾಗುವುದು, ನೀರಿನ ರೂಪದಲ್ಲಿ ಮಲವಿಸರ್ಜನೆ, ಮಲದಲ್ಲಿ ರಕ್ತ ಹೋಗುವುದು, ಡಿಹೈಡ್ರೇಶನ್​, ಹೊಟ್ಟೆ ನೋವು ಇದರ ಲಕ್ಷಣಗಳು. ಹಾಗೆ, ಇನ್ನೂ ಕೆಲವರಲ್ಲಿ ಜಾಯಂಡಿಸ್ ಕಾಣಿಸಿಕೊಳ್ಳಬಹುದು. ಜಾಯಂಡೀಸ್​​ನಿಂದ ಹೆಚ್ಚೇ ಸಮಸ್ಯೆಯಾಗಬಹುದು. ವಾಕರಿಕೆ, ಮುಖ, ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವ ಲಕ್ಷಣಗಳನ್ನು ಇದು ಒಳಗೊಂಡಿರುತ್ತದೆ. ಮುಖ್ಯವಾಗಿ ಕಲುಷಿತ ಆಹಾರ, ನೀರಿನಿಂದ ಈ ಕಾಯಿಲೆ ಉದ್ಭವಿಸುತ್ತದೆ.

ಹಾಗೇ ಟೈಫಾಯ್ಡ್ ಜ್ವರವೂ ಕಾಣಿಸಿಕೊಳ್ಳಬಹುದು. ದೇಹದ ಉಷ್ಣತೆ ಅತ್ಯಂತ ಹೆಚ್ಚಾಗುವುದಲ್ಲದೆ, ಹೊಟ್ಟೆನೋವು, ಬಳಲಿಕೆ, ಅತಿಯಾದ ಆಯಾಸ, ತಲೆನೋವು ಇದರ ಲಕ್ಷಣಗಳಾಗಿದೆ. ಇನ್ನು ಬೇಸಿಗೆಯಲ್ಲಿ ಫುಡ್ ಪಾಯ್ಸನ್​ ಆಗುವ ಸಾಧ್ಯತೆಯೂ ಹೆಚ್ಚಾಗಿಯೇ ಇರುತ್ತದೆ ಎನ್ನುತ್ತಾರೆ ಚೆಂಬೂರ್​ ಜೆನ್​ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವೈದ್ಯ ಡಾ. ರಾಯ್​ ಪಟಾಂಕರ್​. ಇದರೊಂದಿಗೆ ವಾಕರಿಕೆ, ಆಮ್ಲ ಹಿಮ್ಮುಖ ಹರಿಯುವಿಕೆಗಳೆಲ್ಲ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳಾಗಿವೆ. ಐಬಿಎಸ್​ (ಇರಿಟೇಬಲ್​ ಬೌಲ್ ಸಿಂಡ್ರೋಮ್​) ಕೂಡ ಬೇಸಿಗೆಯಲ್ಲಿ ಹೆಚ್ಚಾಗಬಹುದು.

ಈ ಸಮಸ್ಯೆಗಳಿಂದ ಪಾರಾಗಲು ಬೇಸಿಗೆಯಲ್ಲಿ ನಿಮ್ಮ ಜೀವನಶೈಲಿ, ಆಹಾರ ಪದ್ಧತಿಯನ್ನು ತುಸು ಬದಲಿಸಿಕೊಳ್ಳುವುದು ಒಳಿತು. ಈ ಟಿಪ್ಸ್​ಗಳನ್ನು ಪಾಲಿಸಿ, ನಿಮ್ಮ ಅಜೀರ್ಣ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಿ.

ಹಗುರವಾದ ಆಹಾರ, ಕಡಿಮೆ ಪ್ರಮಾಣದಲ್ಲಿ ಸೇವಿಸಿ
ಬೇಸಿಗೆಯಲ್ಲಿ ನೀವು ಹೆಚ್ಚೆಚ್ಚು ತರಕಾರಿ, ಹಣ್ಣು, ದ್ವಿದಳಧಾನ್ಯಗಳು, ಬೀನ್ಸ್​, ಕಾಳುಗಳು ಸೇರಿ ನಾರಿನಾಂಶ ಜಾಸ್ತಿ ಇರುವ ಆಹಾರಗಳನ್ನು ಸೇವಿಸುವುದು ತುಂಬ ಒಳ್ಳೆಯದು. ಒಂದೇ ಬಾರಿ ತುಂಬ ಆಹಾರ ಸೇವನೆ ಮಾಡುವುದರಿಂದ ಸರಾಗ ಜೀರ್ಣಕ್ರಿಯೆ ಆಗುವುದಿಲ್ಲ. ಅಜೀರ್ಣವಾದರೆ ಮತ್ತೆ ಹೊಟ್ಟೆನೋವು, ವಾಂತಿಯಂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಡೆಯಲು ಒಂದು ಬಾರಿ ಕಡಿಮೆ ಆಹಾರ ಸೇವಿಸಿ, ಒಂದೆರಡು ತಾಸುಗಳ ಬಳಿಕ ಮತ್ತೆ ತಿನ್ನಬಹುದು. ಹಸಿರು ತರಕಾರಿ, ಟೊಮ್ಯಾಟೋ, ಸೇಬು ಹಣ್ಣು, ಕಲ್ಲಂಗಡಿ, ಗೆಣಸು, ಸೌತೆಕಾಯಿ, ಪೈನಾಪಲ್, ಪೇರಲೆ ಹಣ್ಣುಗಳ ಸೇವನೆ ಒಳಿತು. ಸೌತೆಕಾಯಿ, ಟೊಮ್ಯಾಟೊ, ಕ್ಯಾರೆಟ್​, ಈರುಳ್ಳಿ ಸೇರಿಸಿ ಸಲಾಡ್​ ಮಾಡಿಕೊಂಡು ತಿಂದರೆ ರುಚಿಯಾಗಿಯೂ ಇರುತ್ತದೆ, ಆರೋಗ್ಯದ ದೃಷ್ಟಿಯಿಂದಲೂ ತುಂಬ ಒಳ್ಳೆಯದು. ಹಾಗೇ ನಟ್​ಗಳು, ಡ್ರೈಫ್ರೂಟ್​​ಗಳು ಸಹ ನಿಮ್ಮ ಡಯಟ್​​ನಲ್ಲಿರಲಿ. ಕಬ್ಬಿಣಾಂಶ, ಪ್ರೋಟಿನ್​, ಕ್ಯಾಲ್ಸಿಯಂ, ವಿಟಾಮಿನ್​, ಫೈಬರ್​​ಗಳನ್ನು ಹೇರಳವಾಗಿ ಹೊಂದಿರುವ ಖರ್ಜೂರವನ್ನೂ ತಿನ್ನಬಹುದು.

ತುಂಬ ನೀರು ಕುಡಿಯಿರಿ
ಬೇಸಿಗೆಯಲ್ಲಿ ಬಾಯಾರಿಕೆ ಸಹಜವಾಗಿ ಜಾಸ್ತಿಯೇ ಇರುತ್ತದೆ. ಒಮ್ಮೆ ಬಾಯಾರಿಕೆ ಆಗದೆ ಇದ್ದರೂ ಜಾಸ್ತಿ ಪ್ರಮಾಣದಲ್ಲಿ ನೀರು ಕುಡಿಯಲೇಬೇಕು. ಅತಿಯಾದ ಶಾಖದಿಂದ ಮೈಯಲ್ಲಿನ ದ್ರವದ ಅಂಶ ಕಡಿಮೆಯಾಗುತ್ತದೆ. ಹಾಗಾಗಿ ಹೆಚ್ಚು ನೀರು ಅಗತ್ಯ ಇರುತ್ತದೆ. ನೀರು ಕಡಿಮೆ ಕುಡಿದರೆ ಡಿಹೈಡ್ರೇಶನ್, ಮಲಬದ್ಧತೆಯಂತಹ ಸಮಸ್ಯೆಗಳು ಉದ್ಭವ ಆಗುತ್ತದೆ. ಅದರಲ್ಲೂ ಎಳನೀರು ಇನ್ನೂ ಉತ್ತಮ. ಹೊಟ್ಟೆಯೊಳಗಿನ ಆಮ್ಲೀಯ ಪ್ರಮಾಣವನ್ನು ಕಡಿಮೆ ಮಾಡಿ, ಉಷ್ಣವನ್ನು ನಿಯಂತ್ರಿಸುತ್ತದೆ.

ಜಂಕ್​ ಫುಡ್​ಗಳು ಬೇಡ
ನೀವು ಜಂಕ್​ ಫುಡ್​, ಸ್ಪೈಸಿ, ಫ್ರೈಡ್​ ತಿಂಡಿಗಳಿಗೆ ಎಷ್ಟೇ ಅಡಿಕ್ಟ್ ಆಗಿದ್ದರೂ, ಬೇಸಿಗೆಯಲ್ಲಿ ಇದನ್ನೆಲ್ಲ ಬಿಟ್ಟುಬಿಡಿ. ಪಿಜ್ಜಾ, ಚಿಪ್ಸ್​, ಬೇಕರಿ ತಿಂಡಿಗಳ ಸೇವನೆ ಹೊಟ್ಟೆಯಲ್ಲಿ ಆಮ್ಲೀಯತೆ, ಉರಿಯೂತ, ಹೊಟ್ಟೆ ಉಬ್ಬರಿಸುವ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗೇ, ರಸ್ತೆ ಬದಿಯಲ್ಲಿ ಚಾಟ್ಸ್​, ಇನ್ನಿತರ ತಿಂಡಿಗಳನ್ನು ತಿನ್ನಬೇಡಿ. ಫುಡ್​ಪಾಯ್ಸನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ವ್ಯಾಯಾಮ ತಪ್ಪಿಸಬೇಡಿ
ಬೇಸಿಗೆಯಲ್ಲಿ ಬೆಳಗ್ಗೆಯಿಂದಲೇ ಸೆಖೆ ಶುರುವಾಗುತ್ತದೆ. ಏಳುತ್ತಲೇ ಯಾವುದೋ ಒಂದು ಆಯಾಸ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಹಾಗಂತ ವ್ಯಾಯಾಮ ನಿಲ್ಲಿಸಬೇಡಿ. ಯೋಗಾ, ಸ್ವಿಮ್​, ಸೈಕ್ಲಿಂಗ್​, ರನ್ನಿಂಗ್​, ಎರೋಬಿಕ್ಸ್​ಗಳನ್ನು ಮಾಡಿ. ಒಟ್ಟಾರೆ ದೇಹಕ್ಕೆ ನಿಯಮಿತವಾಗಿ ವ್ಯಾಯಾಮ ನೀಡಿ.

ಇದನ್ನೂ ಓದಿ: World Health Day 2021: ಉತ್ತಮ ಆರೋಗ್ಯದ ನಿರೀಕ್ಷೆಯಲ್ಲಿದ್ದವರಿಗೆ ಈ ಬಾರಿಯ ವಿಶ್ವ ಆರೋಗ್ಯ ದಿನ ಹೊಸ ಮೈಲಿಗಲ್ಲಾಗಲಿ

Health Tips: ಈ ಔಷಧೀಯ ಸಸ್ಯಗಳು ನಿಮ್ಮ ಗಾರ್ಡನ್​​ನಲ್ಲಿ ಇರಲಿ; ಅಡುಗೆಗೂ ಆಯಿತು.. ಆರೋಗ್ಯಕ್ಕೂ ಒಳ್ಳೆಯದು

(Follow these type of diet to beat digestive problems in Summer)