ಆಕಳಿಕೆ ಪದೇ ಪದೇ ಬಂದರೆ ನಿರ್ಲಕ್ಷಿಸಬೇಡಿ! ಅತಿಯಾದ ಆಕಳಿಕೆಗೆ ಇಲ್ಲಿದೆ ಕಾರಣಗಳು?
ಪದೇಪದೇ ಆಕಳಿಕೆ ಬರುವುದು ಸಾಮಾನ್ಯ ದಣಿವು ಅಥವಾ ನಿದ್ರಾಹೀನತೆಯಿಂದಾಗಿರಬಹುದು. ಆದರೆ ಎದೆನೋವು, ಉಸಿರಾಟದ ತೊಂದರೆ, ತಲೆಸುತ್ತುವಿಕೆ ಸೇರಿದಂತೆ ಇತರ ಲಕ್ಷಣಗಳಿದ್ದರೆ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಕೇವಲ ಆಕಳಿಕೆಯನ್ನು ಹೃದಯಾಘಾತದ ನೇರ ಸೂಚನೆ ಎಂದು ಪರಿಗಣಿಸಬಾರದು. ಹಾಗಾದರೆ ಆಕಳಿಕೆ ಏಕೆ ಬರುತ್ತದೆ, ಅದಕ್ಕೆ ಕಾರಣವೇನು, ಅತಿಯಾಗಿ ಆಕಳಿಕೆ ಬರುವಾಗ ಏನನ್ನು ಗಮನಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆಕಳಿಕೆ ಎಂದರೆ ನಿದ್ರೆ ಬರುತ್ತಿರುವಾಗ ಅಥವಾ ದೇಹ ದಣಿದಾಗ ಸಹಜವಾಗಿ ಕಾಣಿಸಿಕೊಳ್ಳುವ ಕ್ರಿಯೆ. ಆದರೆ ಕೆಲವರಿಗೆ ಯಾವುದೇ ಕಾರಣವಿಲ್ಲದೆ ಪದೇಪದೇ ಆಕಳಿಕೆ ಬರುತ್ತಿರುತ್ತದೆ. ಸಾಮಾನ್ಯವಾಗಿ ಅತಿಯಾದ ಆಕಳಿಕೆಗೆ ನಿದ್ರಾಹೀನತೆ, ದೈಹಿಕ-ಮಾನಸಿಕ ದಣಿವು, ಒತ್ತಡ, ಕೆಲವು ಔಷಧಿಗಳ ಪರಿಣಾಮ ಸೇರಿದಂತೆ ಹಲವು ಕಾರಣಗಳಿರಬಹುದು. ಕೆಲವರು ಆಕಳಿಕೆ ಮತ್ತು ಹೃದಯದ ಸಮಸ್ಯೆಗಳ ನಡುವೆ ನೇರ ಸಂಬಂಧವಿದೆ ಎಂದು ಹೇಳುತ್ತಾರೆ ಆದರೆ ಇದನ್ನು ಸತ್ಯ ಎಂದು ಒಪ್ಪಿಕೊಳ್ಳಲು ಸದ್ಯಕ್ಕೆ ಬಲವಾದ ವೈದ್ಯಕೀಯ ಪುರಾವೆಗಳಿಲ್ಲ. ಹಾಗಾದರೆ ಆಕಳಿಕೆ ಏಕೆ ಬರುತ್ತದೆ, ಅದಕ್ಕೆ ಕಾರಣವೇನು, ಅತಿಯಾಗಿ ಆಕಳಿಕೆ ಬರುವಾಗ ಏನನ್ನು ಗಮನಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಆಕಳಿಕೆ ಏಕೆ ಬರುತ್ತದೆ?
ಸಾಮಾನ್ಯವಾಗಿ ಆಕಳಿಕೆ ಏಕೆ ಉಂಟಾಗುತ್ತದೆ ಎಂಬುದಕ್ಕೆ ಸ್ಪಷ್ಟ ಕಾರಣವಿಲ್ಲ. ನಿದ್ರೆ ಮತ್ತು ಎಚ್ಚರದ ನಡುವಿನ ಬದಲಾವಣೆ, ದಣಿವು, ಬೇಸರ ಅಥವಾ ಮಾನಸಿಕ ಒತ್ತಡದ ಸಂದರ್ಭಗಳಲ್ಲಿ ಆಕಳಿಕೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ದೇಹದ ಉಷ್ಣತೆಯನ್ನು ನಿಯಂತ್ರಿಸುವ ಪ್ರಕ್ರಿಯೆಯೊಂದಿಗೂ ಇದು ಸಂಬಂಧಿಸಿರಬಹುದು ಎಂದು ಅಧ್ಯಯನಗಳು ಸೂಚಿಸಿವೆ.
ಹೆಚ್ಚು ಆಕಳಿಕೆ ಬರುವುದಕ್ಕೂ ಹೃದಯದ ಸಮಸ್ಯೆಗೂ ಸಂಬಂಧವಿದೆಯೇ?
ಅತಿಯಾದ ಆಕಳಿಕೆ ಬರುವುದನ್ನು ಮಾತ್ರ ಹೃದಯಾಘಾತದ ಲಕ್ಷಣ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಆಕಳಿಕೆಯ ಜೊತೆಗೆ ಎದೆನೋವು, ಎದೆ ಬಿಗಿತ, ಉಸಿರಾಟದ ತೊಂದರೆ, ಬೆವರು, ವಾಕರಿಕೆ, ತಲೆಸುತ್ತುವಿಕೆ ಅಥವಾ ದವಡೆ, ಕುತ್ತಿಗೆ, ಭುಜ ಮತ್ತು ಕೈಗಳಲ್ಲಿ ನೋವು ಕಂಡುಬಂದರೆ ಎಚ್ಚರಿಕೆ ವಹಿಸುವುದು ಅಗತ್ಯ. ಇಂತಹ ಲಕ್ಷಣಗಳು ಹೃದಯಾಘಾತದ ಸೂಚನೆಗಳಾಗಿರಬಹುದು. ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಮುಖ್ಯ.
ಇದನ್ನೂ ಓದಿ: ನಿರ್ಜಲ, ಸಜಲ, ಸದ್ರವ ಉಪವಾಸ.. ಯಾವುದನ್ನು ಹೇಗೆ ಮಾಡಬೇಕು? ಇಲ್ಲಿದೆ ಡಾ. ಸುಹಾಸ್ ನೀಡಿರುವ ಮಾಹಿತಿ
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಸರಿಯಾಗಿ ನಿದ್ರೆ ಮಾಡಿ ಎದ್ದ ಮೇಲೂ ನಿರಂತರವಾಗಿ ಆಕಳಿಕೆ ಬರುತ್ತಿದ್ದರೆ, ದಿನವಿಡೀ ಅತಿಯಾದ ನಿದ್ರೆ ಬರುವುದು ಅಥವಾ ದಣಿವಿದ್ದರೆ ವೈದ್ಯರನ್ನು ಸಂಪರ್ಕಿಸಿ. ಅದರಲ್ಲಿಯೂ ಅತಿಯಾದ ಆಕಳಿಕೆಯ ಜೊತೆಗೆ ಉಸಿರಾಟದ ತೊಂದರೆ, ಎದೆನೋವು ಅಥವಾ ಇತರ ಅಸಾಮಾನ್ಯ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬಾರದು.
ಆಕಳಿಕೆ ಬಂದಾಗ ಏನನ್ನು ಗಮನಿಸಬೇಕು?
- ಪ್ರತಿದಿನ ಸಾಕಷ್ಟು ನಿದ್ರೆ ಮಾಡುತ್ತಿದ್ದೀರಾ ಎಂಬುದನ್ನು ಗಮನಿಸಿ.
- ಅತಿಯಾದ ಒತ್ತಡ ಅಥವಾ ದೈಹಿಕ ದಣಿವು ಇದೆಯೇ ಎಂದು ಪರಿಶೀಲಿಸಿ.
- ಹೊಸದಾಗಿ ಯಾವುದೇ ಔಷಧಿ ಸೇವನೆ ಆರಂಭಿಸಿದ್ದರೆ ವೈದ್ಯರಿಗೆ ತಿಳಿಸಿ.
- ಆಕಳಿಕೆಯ ಜೊತೆಗೆ ಎದೆನೋವು ಅಥವಾ ಉಸಿರಾಟದ ತೊಂದರೆ ಇದ್ದರೆ ತಕ್ಷಣ ವೈದ್ಯರ ಸಹಾಯ ಪಡೆಯಿರಿ.
ಆಕಳಿಕೆ ಸಾಮಾನ್ಯ ದೈಹಿಕ ಕ್ರಿಯೆಯಾಗಿರಬಹುದು. ಕೇವಲ ಆಕಳಿಕೆ ಬರುತ್ತಿದೆ ಎಂಬ ಕಾರಣಕ್ಕೆ ಹೃದಯಾಘಾತ ಎಂದು ನಿರ್ಧರಿಸಬಾರದು. ಆದರೆ ಇತರ ಅಸಾಮಾನ್ಯ ಲಕ್ಷಣಗಳೊಂದಿಗೆ ಕಾಣಿಸಿಕೊಂಡಾಗ ಅದರ ಕಾರಣವನ್ನು ವೈದ್ಯರಿಂದ ಪರಿಶೀಲಿಸಿಕೊಳ್ಳುವುದು ಸೂಕ್ತ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




