AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಜಲ, ಸಜಲ, ಸದ್ರವ ಉಪವಾಸ.. ಯಾವುದನ್ನು ಹೇಗೆ ಮಾಡಬೇಕು? ಇಲ್ಲಿದೆ ಡಾ. ಸುಹಾಸ್ ನೀಡಿರುವ ಮಾಹಿತಿ

ಲಂಘನಂ ಪರಮೌಷಧಂ ಎಂಬ ಮಾತಿನಂತೆ, ಸರಿಯಾದ ಕ್ರಮದಲ್ಲಿ ಮಾಡುವ ಉಪವಾಸ ದೇಹಕ್ಕೆ ಹಲವು ರೀತಿಯಲ್ಲಿ ಸಹಕಾರಿಯಾಗಬಹುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಆದರೆ ಉಪವಾಸದ ಅವಧಿ, ವಿಧಾನ ಮತ್ತು ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಇದನ್ನು ಮಾಡುವುದು ಮುಖ್ಯ. ಅತಿಯಾದ ಉಪವಾಸದಿಂದ ಸುಸ್ತು, ಬಾಯಾರಿಕೆ, ಬಲಕ್ಷಯ ಹಾಗೂ ಪೌಷ್ಟಿಕಾಂಶಗಳ ಕೊರತೆ ಉಂಟಾಗುವ ಸಾಧ್ಯತೆಯೂ ಇದೆ.

ನಿರ್ಜಲ, ಸಜಲ, ಸದ್ರವ ಉಪವಾಸ.. ಯಾವುದನ್ನು ಹೇಗೆ ಮಾಡಬೇಕು? ಇಲ್ಲಿದೆ ಡಾ. ಸುಹಾಸ್ ನೀಡಿರುವ ಮಾಹಿತಿ
Types Of Fasting ExplainedImage Credit source: Tv9 kannada
ಪ್ರೀತಿ ಭಟ್​, ಗುಣವಂತೆ
|

Updated on:Sep 01, 2026 | 5:16 PM

Share

ಲಂಘನಂ ಪರಮೌಷಧಂ ಎನ್ನುವ ಮಾತಿದೆ ಅಂದರೆ ಸರಿಯಾದ ಕ್ರಮದಲ್ಲಿ ಮಾಡಿದ ಉಪವಾಸವೇ ಔಷಧ ಎಂದು ಪ್ರಾಚೀನ ಕಾಲದಿಂದಲೂ ಉಪವಾಸಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ನಮ್ಮ ಪರಂಪರೆಯಲ್ಲಿ ಹದಿನೈದು ದಿನಕ್ಕೊಮ್ಮೆ ಬರುವ ಏಕಾದಶಿ ಉಪವಾಸ ಬಹಳ ಹಿಂದಿನಿಂದಲೂ ಬಂದಿರುವ ಪದ್ಧತಿ. ಇದರ ಹೊರತಾಗಿ ಶ್ರಾವಣ, ಕಾರ್ತೀಕ ಹೀಗೆ ಆಯಾ ಮಾಸದಲ್ಲಿ ಕೆಲವು ದಿನ ದೇವರನ್ನು ನೆನೆದು ವಿಶೇಷ ಪೂಜೆ ಮಾಡಿ ಉಪವಾಸ ಮಾಡುವವರಿದ್ದಾರೆ. ಆದರೆ ಈ ಉಪವಾಸದ ಕ್ರಮಗಳು ಹೇಗಿದೆ, ಇದರಿಂದ ದೇಹಕ್ಕೆ ಸಿಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ಶೃಂಗೇರಿ ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸುಹಾಸ್ ಹೆಚ್. ಡಿ ಅವರು ಹೆಚ್ಚಿನ ಮಾಹಿತಿ ನೀಡಿದ್ದು ಇದರಿಂದ ಸಿಗುವ ಪ್ರಯೋಜನ ಮತ್ತು ಅತಿಯಾದ ಉಪವಾಸದಿಂದ ಏನೆಲ್ಲಾ ಆಗಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಉಪವಾಸದ ಕ್ರಮಗಳು:

ಉಪವಾಸದಲ್ಲಿ ಹಲವು ಕ್ರಮಗಳಿವೆ. ಉಪವಾಸದ ಅವಧಿ ಒಂದು ಹೊತ್ತಿಗೆ ಅಥವಾ ಒಂದು ದಿನಕ್ಕೂ ಆಗಬಹುದು.

ನಿರ್ಜಲ ಉಪವಾಸ: ನೀರನ್ನೂ ಕೂಡ ಸೇವಿಸದೇ ಉಪವಾಸ ಮಾಡುವ ಕ್ರಮಕ್ಕೆ ನಿರ್ಜಲ ಉಪವಾಸ ಎಂದು ಹೆಸರು. ಉತ್ತಮ ಶಾರೀರಿಕ ಬಲ ಇರುವವರಿಗೆ ಇದು ಸೂಕ್ತ.

ಸಜಲ ಉಪವಾಸ: ಕೇವಲ ನೀರನ್ನು ಮಾತ್ರ ಸೇವಿಸಿ ಉಪವಾಸ ಮಾಡುವುದು.

ಸದ್ರವ ಉಪವಾಸ: ಹಣ್ಣಿನ ರಸ, ಅಥವಾ ಇತರ ದ್ರವಾಹಾರಗಳನ್ನು ಸೇವಿಸಿ ಉಪವಾಸ ಮಾಡುವುದು.

ಉಪವಾಸದ ಉದ್ದೇಶಗಳನ್ನು ಅವಲಂಬಿಸಿ ಉಪವಾಸದ ಕ್ರಮಗಳು ಹಾಗು ಶರೀರದ ಬಲಕ್ಕೆ ಅನುಗುಣವಾಗಿ ಉಪವಾಸದ ಅವಧಿ ನಿರ್ಧರಿತವಾಗುತ್ತದೆ.

ರೋಗಿಗಳಲ್ಲಿ ಉಪವಾಸ:

ಜ್ವರದ ಪ್ರಾರಂಭಾವಸ್ಥೆಯಲ್ಲಿ ಶರೀರದ ಬಲಕ್ಕನುಸರಿಸಿ ಉಪವಾಸವನ್ನು ಮಾಡುವುದರಿಂದ ಜ್ವರ ಯಾವುದೇ ಔಷಧ ತೆಗೆದುಕೊಳ್ಳದೇ ನಿವಾರಣೆಯಾಗುತ್ತದೆ. ಅತಿಸಾರ ಹಾಗೂ ವಾಂತಿಯಲ್ಲೂ ಕೂಡ ಉಪವಾಸವೂ ಒಂದು ವಿಧದ ಚಿಕಿತ್ಸೆಯಾಗಿದೆ. ಯಾವುದೇ ಉದರ ಸಂಬಂಧಿ ಕಾಯಿಲೆಗಳಿಗೂ ಉಪವಾಸ ಸಹಕಾರಿ.

ಸ್ಥೂಲ ಕಾಯರಿಗೆ:

ಅತಿಯಾದ ದೇಹದ ತೂಕವನ್ನು ಇಳಿಸಲು ಸದ್ರವ ಉಪವಾಸ ಸಹಕಾರಿ. ಉಪವಾಸವು ಇತ್ತಿಚಿನ ದಿನಗಳಲ್ಲಿ ಕಂಡುಬರುವ Mental Fog ಅನ್ನು ದೂರಗೊಳಿಸುತ್ತದೆ.

ಉಪವಾಸದಿಂದ ದೇಹದ ಮೇಲಾಗುವ ಪರಿಣಾಮಗಳು:

ಉಪವಾಸ ಮಾಡಿದಾಗ ಮೊದಲು ಜೀರ್ಣವಾಗದೆ ಉಳಿದ ಆಹಾರ ಪೂರ್ಣವಾಗಿ ಜೀರ್ಣವಾಗುವುದು ನಂತರದಲ್ಲಿ ದೇಹದಲ್ಲಿರುವ ದೋಷಗಳು ಜೀರ್ಣವಾಗಿ ಮಲರೂಪದಿಂದ ಹೊರಕ್ಕೆ ಹೋಗುವುದರಿಂದಾಗಿ ಮೈ ಹಗುರವಾಗಿ ಮನಸ್ಸು ಉತ್ಸಾಹ ಭರಿತವಾಗುತ್ತದೆ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಉಪವಾಸ ಮಾಡುವುದರಿಂದ autophagy ಎಂಬ ಕ್ರಿಯೆಯು ದೇಹದಲ್ಲಿ ಪ್ರಾರಂಭವಾಗಿ ಬೇಡದ ಜೀವಕೋಶಗಳನ್ನು ದೇಹವೇ ನಾಶ ಮಾಡುತ್ತದೆ ಇದರಿಂದಾಗಿ ಹಲವು ರೀತಿಯ Auto-immune ವ್ಯಾಧಿಗಳನ್ನು ತಡೆಗಟ್ಟಬಹುದು.

ಅತಿಯಾದ ಉಪವಾಸ ಮಾಡುವುದರಿಂದಾಗುವ ಅನಾನುಕೂಲಗಳು:

ಸಾಮಾನ್ಯವಾಗಿ ಅತಿಯಾದ ಉಪವಾಸದಿಂದ ಬಲ ಕ್ಷಯವಾಗಿ ಸುಸ್ತು, ಬಾಯಾರಿಕೆ, ಪೌಷ್ಟಿಕಾಂಶಗಳ ಕೊರತೆಯೂ ಉಂಟಾಗಬಹುದು ಆದ್ದರಿಂದ ಸರಿಯಾದ ಕ್ರಮದಲ್ಲಿ ಉಪವಾಸ ಮಾಡುವುದು ಅವಶ್ಯಕ. ಇಂದಿನ ಕಾಲದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸೇವನೆ ಅಗತ್ಯಕ್ಕಿಂತ ಕಡಿಮೆ ವ್ಯಾಯಾಮ ಅಥವಾ ಅವ್ಯಾಯಾಮ ಹಲವು ಕಾಯಿಲೆಗಳಿಗೆ ನಮ್ಮನ್ನು ಗುರಿಮಾಡಬಹುದು ಇಂತಹ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ನಿಯಮಿತವಾಗಿ ಮಾಡುವ ಉಪವಾಸವು ಆರೋಗ್ಯವನ್ನು ಕಾಪಾಡಿಕೊಳ್ಳಲು ಅತಿ ಅಗತ್ಯವಾಗಿದೆ. ಉಪಾವೃತ್ತಸ್ಯ ಪಾಪೆಭ್ಯಃ ಸಹವಾಸೊ ಗುಣೇ ಹಿ ಯಃ ಉಪವಾಸ ಸ ವಿಜ್ಞೆಯೊ ನ ಹಿ ದೇಹಸ್ಯ ಶೊಷಣಮ್॥

ಉಪವಾಸವು ಪಾಪಕರ್ಮಗಳಿಂದ ದೂರವಾಗಿ ಮನಸ್ಸನ್ನು ಪರಮ ತತ್ವದ ಕಡೆಗೆ ಕೇಂದ್ರೀಕರಿಸುವ ಸಾಧನವಾಗಿದೆ ಕೇವಲ ದೇಹವನ್ನು ಓಣಗಿಸುವ ಕ್ರಿಯೆಯಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Tue, 1 September 26

Follow Us