ರೆಡಿ ಟು ಈಟ್ ಆಹಾರ ಸೇವಿಸುವ ಮುನ್ನ ಡಾ. ಸುಹಾಸ್ ಹೇಳಿರುವ ಈ ವಿಷಯಗಳನ್ನು ತಿಳಿದುಕೊಳ್ಳಿ!
ಇತ್ತೀಚಿನ ದಿನಗಳಲ್ಲಿ ರೆಡಿ-ಟು-ಈಟ್ ಆಹಾರಗಳ ಬಳಕೆ ಹೆಚ್ಚಾಗುತ್ತಿದೆ. ಸಮಯ ಉಳಿಸುವ ಈ ಆಹಾರಗಳು ದೀರ್ಘಾವಧಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಯಾವ ರೀತಿ ಪ್ರತಿಕೂಲ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಶೃಂಗೇರಿ ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸುಹಾಸ್ ಹೆಚ್. ಡಿ ತಿಳಿಸಿದ್ದಾರೆ. ಜೊತೆಗೆ ನಾವು ಸೇವನೆ ಮಾಡುವ ಆಹಾರ ಮತ್ತು ಆಹಾರ ಸೇವನೆ ಕ್ರಮ ಹೇಗಿರಬೇಕು ಎಂಬುದರ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ.

ಮುಖ್ಯಾಂಶಗಳು
- ರೆಡಿ ಟು ಈಟ್ ಆಹಾರ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು
- ಆಹಾರ ಸೇವನೆ ಮಾಡುವ ಕ್ರಮ ಹೇಗಿರಬೇಕು ಎಂಬುದರ ಬಗ್ಗೆ ಆಯುರ್ವೇದ ತಜ್ಞರ ಸಲಹೆ
- ಫಾಸ್ಟ್ ಲೈಫ್‌ಸ್ಟೈಲ್‌ನಲ್ಲಿ ಆಹಾರ ಸೇವನೆ ಮಾಡುವಾಗ ಅನುಸರಿಸುವ ಅಭ್ಯಾಸಗಳು
ಇತ್ತೀಚಿನ ದಿನಗಳಲ್ಲಿ ರೆಡಿ ಟು ಈಟ್ ಆಹಾರ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಎಂದಾದರೂ ಇದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಯೋಚಿಸಿದ್ದೀರಾ… ಇದು ನಮ್ಮ ಸಮಯ ಉಳಿಸಬಹುದು ಆದರೆ ಆರೋಗ್ಯವನ್ನು ಕಾಪಾಡುತ್ತದೆಯೇ? ಆದಷ್ಟು ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಶೃಂಗೇರಿ ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸುಹಾಸ್ ಹೆಚ್. ಡಿ ಅವರು ಟಿವಿ9 ಕನ್ನಡಕ್ಕೆ ನೀಡಿದ್ದು ರೆಡಿ ಟು ಈಟ್ ಆಹಾರ ಸೇವನೆಯಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ. ಅಷ್ಟೇಅಲ್ಲ, ನಾವು ಸೇವನೆ ಮಾಡುವ ಆಹಾರ ಮತ್ತು ಆಹಾರ ಸೇವನೆ ಕ್ರಮ ಹೇಗಿರಬೇಕು ಎಂಬುದರ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ.
ಡಾ. ಸುಹಾಸ್ ಹೇಳುವ ಪ್ರಕಾರ, ಈ ರೆಡಿ ಟು ಈಟ್ ಆಹಾರಗಳು ಸಾಮಾನ್ಯ ಮಲಬದ್ಧತೆ, ಅಜೀರ್ಣದಿಂದ ಹಿಡಿದು ಅತಿ ಗಂಭೀರವಾದ ಕ್ಯಾನ್ಸರ್ ನಂತಹ ಕಾಯಿಲೆಗಳಿಗೂ ಕಾರಣವಾಗಬಹುದು. ಇಂತಹ ಆಹಾರಗಳು ಹೆಚ್ಚಾಗಿ ಸಂರಕ್ಷಕ (preservative) ಗಳಿಂದ ಅಲ್ಲದೇ ಆಸಿಡ್ ನ್ಯೂಟ್ರಿಲೈಜರ್ (acid neutralisers) ನಂತಹ ಹಲವು ರಾಸಾಯನಿಕ ವಸ್ತುಗಳಿಂದ ಕೂಡಿರುತ್ತದೆ ಹಾಗಾಗಿ ಇವು ರಕ್ತವನ್ನು ಕಲುಷಿತಗೊಳಿಸಿ ಚರ್ಮ ರೋಗ, ಆರ್ಥ್ರೈಟಿಸ್, ಸಣ್ಣ ವಯಸ್ಸಿನಲ್ಲೇ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಮಾನಸಿಕ ಪರಿಣಾಮಗಳು:
ನಿರಂತರವಾಗಿ ರೇಡಿ ಟು ಈಟ್ ಆಹಾರಗಳನ್ನು ಸೇವಿಸಿದರೆ ಉದಾಸೀನ, ಖಿನ್ನತೆ, ಬೇಗನೆ ಕೋಪಗೊಳ್ಳುವುದು ಇಂತಹ ಅಡ್ಡ ಪರಿಣಾಮಗಳನ್ನು ಬೀರುತ್ತವೆ.
ಇದನ್ನೂ ಓದಿ: ಸ್ವೀಟ್ ಸೇವನೆ ಮಾಡುವುದಕ್ಕೆ ಸರಿಯಾದ ಸಮಯ ಯಾವುದು ಗೊತ್ತಾ?
ಆಹಾರ ಹೇಗಿರಬೇಕು?
“ಆಹಾರ ಶುದ್ಧೋ ಸತ್ವ ಶುದ್ಧಿಃ” ಅಂದರೆ, ನಾವು ತಿನ್ನುವ ಆಹಾರವು ಶರೀರದಲ್ಲಿ ಸ್ಥೂಲ ಸೂಕ್ಷ್ಮ ಹಾಗೂ ಅತಿಸೂಕ್ಷ್ಮವಾಗಿ ಪರಿಣಾಮ ಹೊಂದುತ್ತವೆ. ಸ್ಥೂಲ ಭಾಗ ಮಲ ರೂಪವಾಗಿ ಹೊರಹಾಕಲ್ಪಡುತ್ತದೆ ಸೂಕ್ಷ್ಮ ಭಾಗ ಶರೀರದ ನಾನಾ ಭಾಗಗಳಿಗೆ ಸೇರಿ ಪೋಷಣೆಯನ್ನು ಬೇಕಾದ ಶಕ್ತಿಯನ್ನು ನೀಡುತ್ತದೆ ಆದರೆ ಅತಿಸೂಕ್ಷ್ಮ ಭಾಗ ನಮ್ಮ ಮನಸ್ಸನ್ನು ಬುದ್ಧಿಯನ್ನು ಪೋಷಿಸುತ್ತದೆ ಇದೇ ಕಾರಣದಿಂದ ಕೃಷ್ಣ ಪರಮಾತ್ಮನು ಮೇಲೆ ಹೇಳಿದ ವಾಕ್ಯವನ್ನು ಉಪದೇಶಿಸಿದ್ದಾನೆ. ತಿನ್ನುವ ಆಹಾರವು ಆಗಷ್ಟೇ ತಯಾರಿಸಿದ್ದಾಗಿರಬೇಕು, ಬಿಸಿ ಬಿಸಿಯಾಗಿ ಸೇವಿಸಬೇಕು, ಅಡಿಗೆಗೆ ಬಳಸಿದ ಪದಾರ್ಥಗಳು ಶುದ್ಧವಾಗಿರಬೇಕು (ಕಲಬೆರಕೆ ಇಲ್ಲದ) ಶರೀರಕ್ಕೆ ಪುಷ್ಟಿ ನೀಡುವ ಪದಾರ್ಥಗಳನ್ನು ಬಳಸಿರಬೇಕು, ಆಹಾರವು ಆರೂ ರಸಗಳಿಂದ ಕೂಡಿರಬೇಕು
ಆಹಾರ ಸೇವನೆ ಕ್ರಮ:
- ಆಹಾರ ಸೇವಿಸುವ ಮೊದಲು ಹಸಿವಿರಬೇಕು, ಮಲ ಮೂತ್ರಗಳ ವಿಸರ್ಜನೆ ಆಗಿರಬೇಕು
- ಆಹಾರದ ಇಚ್ಛೆ ಇರಬೇಕು
- ಒಂದೆಡೆ ಆರಾಮವಾಗಿ ಕುಳಿತು ಆಹಾರ ಸೇವಿಸಬೇಕು
- ಕೈ ಕಾಲು, ಬಾಯಿಯನ್ನು ತೊಳೆದು ಆಹಾರ ಸೇವಿಸಬೇಕು
- ಅಡಿಗೆಯನ್ನು ನಿಂದಿಸದೇ ಖುಷಿಯಿಂದ ಸೇವಿಸಬೇಕು
- ಹಿತವಾಗಿಯೂ ಮಿತವಾಗಿಯೂ ಆಹಾರವನ್ನು ಸೇವಿಸಬೇಕು
- ಹೀಗೆ ಸೇವಿಸದ ಆಹಾರ ಶರೀರದ ಸಮತೋಲನವನ್ನು ಕಾಪಾಡುತ್ತದೆ ಹಾಗು ಬೇಕಾದ ಪುಷ್ಟಿಯನ್ನು ನೀಡುತ್ತದೆ
ಬದಲಾದ ಕಾಲಮಾನದಲ್ಲಿ ವೇಗದ ಜೀವನದಲ್ಲಿ ಆಹಾರ ಸೇವನೆಗೆ ಸಮಯ ತೆಗೆದಿಡಲು ಸಮಯವಿಲ್ಲದೆ ಓಡಾಡುತ್ತಾ, ವಾಹನದಲ್ಲೇ ಪ್ರಯಾಣಿಸುವಾಗ ಆಹಾರವನ್ನು ತಿನ್ನುವುದರಿಂದ ತಿಂದ ಆಹಾರವು ಸರಿಯಾಗಿ ಪರಿಣಾಮವಾಗದೆ ಹಲವು ರೀತಿಯ ಅನಾರೋಗ್ಯಗಳನ್ನು ಉಂಟುಮಾಡುತ್ತವೆ. ಇಂದು ನಾವು ತಿನ್ನುವ ಆಹಾರವೇ ನಾಳೆ ನಮ್ಮ ಆರೋಗ್ಯದ ಭಾಗವಾಗುವುದು ಎಂಬುದೇ ಸತ್ಯ ಹಾಗಾಗಿ ಆಹಾರದಲ್ಲಿ ಶುಚಿ, ರುಚಿ, ಶ್ರದ್ಧೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




