ಬಾದಾಮಿಯಿಂದ ಕಡಲೆಕಾಯಿವರೆಗೆ: ಯಾವ ನಟ್ಸ್‌ನಲ್ಲಿ ಯಾವ ಪೋಷಕಾಂಶ ಹೆಚ್ಚಾಗಿರುತ್ತೆ ತಿಳಿದುಕೊಳ್ಳಿ
ನಟ್ಸ್ ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೂ, ಅವುಗಳಲ್ಲಿ ಕ್ಯಾಲೊರಿ ಮತ್ತು ಕೊಬ್ಬು ಕೂಡ ಹೆಚ್ಚಿರಬಹುದು. ಹೀಗಾಗಿ ಮಿತ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ. ಉಪ್ಪು ಅಥವಾ ಸಕ್ಕರೆ ಹೆಚ್ಚಾಗಿ ಸೇರಿಸಿರುವ ನಟ್ಸ್‌ಗಿಂತ ಸರಳವಾಗಿ ಹುರಿದ ಅಥವಾ ಉಪ್ಪಿಲ್ಲದ ಆಯ್ಕೆಗಳನ್ನು ಪರಿಗಣಿಸಬಹುದು. ಒಂದೇ ರೀತಿಯ ನಟ್ಸ್ ಮೇಲೆ ಅವಲಂಬಿತರಾಗುವ ಬದಲು ಹಣ್ಣು, ತರಕಾರಿ, ದ್ವಿದಳ ಧಾನ್ಯ, ಸಂಪೂರ್ಣ ಧಾನ್ಯಗಳು ಮತ್ತು ಇತರ ಪೌಷ್ಟಿಕ ಆಹಾರಗಳೊಂದಿಗೆ ಸಮತೋಲನ ಆಹಾರ ಸೇವಿಸುವುದು ಉತ್ತಮ.

ಮುಖ್ಯಾಂಶಗಳು
- ಪ್ರೋಟೀನ್‌ನಿಂದ ಒಮೆಗಾ-3ವರೆಗೆ: ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಕ್ಕೆ ಯಾವ ನಟ್ಸ್ ತಿನ್ನ ಬೇಕು?
- ಯಾವ ಪೋಷಕಾಂಶಕ್ಕೆ ಯಾವ ನಟ್ಸ್? ಬಾದಾಮಿ, ಗೋಡಂಬಿ, ಪಿಸ್ತಾ, ಅಖರೋಟ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
- ಬಾದಾಮಿ ಮಾತ್ರವಲ್ಲ… ಈ ನಟ್ಸ್‌ಗಳಲ್ಲಿ ಪ್ರೋಟೀನ್, ಐರನ್, ಪೊಟ್ಯಾಸಿಯಂ ಮತ್ತು ಒಮೆಗಾ-3 ಹೆಚ್ಚಿದೆ
ಪ್ರತಿದಿನದ ಆಹಾರದಲ್ಲಿ ನಟ್ಸ್ (Nuts) ಸೇರಿಸಿಕೊಳ್ಳುವುದು ಆರೋಗ್ಯಕರ ಅಭ್ಯಾಸ ಎನ್ನಲಾಗುತ್ತದೆ. ಬಾದಾಮಿ, ವಾಲ್ನಟ್, ಗೋಡಂಬಿ, ಪಿಸ್ತಾ, ಕಡಲೆಕಾಯಿ ಸೇರಿದಂತೆ ವಿವಿಧ ನಟ್ಸ್‌ಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಐರನ್, ಪೊಟ್ಯಾಸಿಯಂ, ಒಮೆಗಾ-3 ಮತ್ತು ಸೆಲೆನಿಯಂ ಸೇರಿದಂತೆ ಹಲವು ಪೋಷಕಾಂಶಗಳು ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಆದರೆ, ಯಾವ ಪೋಷಕಾಂಶ ಬೇಕಾದರೆ ಯಾವ ನಟ್ಸ್ ತಿನ್ನಬೇಕು ಎಂಬುದು ಹಲವರಿಗಿರುವ ಗೊಂದಲ. ಪೌಷ್ಟಿಕ ತಜ್ಞೆ ಸೋನಿಯಾ ನಾರಂಗ್ ಅವರ ಸಲಹೆಯ ಆಧಾರದ ಮೇಲೆ, ವಿವಿಧ ನಟ್ಸ್‌ಗಳಲ್ಲಿ ಯಾವ ಪೋಷಕಾಂಶ ಪ್ರಮುಖವಾಗಿ ದೊರೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರೋಟೀನ್‌ಗಾಗಿ ಕಡಲೆಕಾಯಿ: ನಟ್ಸ್‌ಗಳಲ್ಲಿ ಕಡಲೆಕಾಯಿ (Peanuts) ಉತ್ತಮ ಪ್ರೋಟೀನ್ ಮೂಲವಾಗಿದೆ. ಸಸ್ಯಾಧಾರಿತ ಪ್ರೋಟೀನ್ ಪಡೆಯಲು ಕಡಲೆಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಪೀನಟ್ ಬಟರ್ ಅನ್ನು ಕೂಡ ಕೆಲವರು ಉಪಾಹಾರದಲ್ಲಿ ಬಳಸುತ್ತಾರೆ.
ಕ್ಯಾಲ್ಸಿಯಂಗೆ ಬಾದಾಮಿ: ಕ್ಯಾಲ್ಸಿಯಂ ಪಡೆಯಲು ಬಾದಾಮಿ (Almonds) ಉತ್ತಮ ಆಯ್ಕೆಯಾಗಿದೆ. ಬಾದಾಮಿಯನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತ. ಕೆಲವರು ಬಾದಾಮಿಯನ್ನು ರಾತ್ರಿ ನೆನೆಸಿ, ಬೆಳಗ್ಗೆ ಸಿಪ್ಪೆ ತೆಗೆದು ಸೇವಿಸುತ್ತಾರೆ.
ಐರನ್‌ಗಾಗಿ ಗೋಡಂಬಿ: ದೇಹಕ್ಕೆ ಐರನ್ ಅಗತ್ಯವಿದ್ದರೆ ಗೋಡಂಬಿ (Cashews) ಅನ್ನು ಆಹಾರದಲ್ಲಿ ವಿವಿಧ ರೀತಿಯಲ್ಲಿ ಸೇರಿಸಿಕೊಳ್ಳಬಹುದು. ಆದರೆ ಐರನ್ ಕೊರತೆ ಇದೆ ಎಂದು ಕೇವಲ ಆಹಾರದ ಆಧಾರದ ಮೇಲೆ ನಿರ್ಧರಿಸದೆ, ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.
ಪೊಟ್ಯಾಸಿಯಂಗಾಗಿ ಪಿಸ್ತಾ: ಈ ಪಿಸ್ತಾ (Pistachios) ಉತ್ತಮ ಪೊಟ್ಯಾಸಿಯಂ ಮೂಲಗಳಲ್ಲಿ ಒಂದಾಗಿದೆ. ಪೊಟ್ಯಾಸಿಯಂ ದೇಹದ ಹಲವು ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದೊತ್ತಡದ ನಿಯಂತ್ರಣಕ್ಕೂ ಇದು ಅಗತ್ಯವಾದ ಖನಿಜವಾಗಿದೆ.
ಒಮೆಗಾ-3ಗಾಗಿ ವಾಲ್ನಟ್: ಅಖರೋಟ್ ಅಥವಾ ವಾಲ್ನಟ್ (Walnuts) ಸಸ್ಯಾಧಾರಿತ ಒಮೆಗಾ-3 ಕೊಬ್ಬಿನಾಮ್ಲವಾದ ಉತ್ತಮ ಮೂಲವಾಗಿದೆ. ಒಮೆಗಾ-3 ಹೃದಯ ಮತ್ತು ಮೆದುಳಿನ ಆರೋಗ್ಯ ಸೇರಿದಂತೆ ದೇಹದ ಹಲವು ಕಾರ್ಯಗಳಿಗೆ ಅಗತ್ಯವಾಗಿದೆ.
ಸೆಲೆನಿಯಂಗೆ ಬ್ರೆಜಿಲ್ ನಟ್ಸ್: ಬ್ರೆಜಿಲ್ ನಟ್ಸ್ (Brazil Nuts) ನಲ್ಲಿ ಸೆಲೆನಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಸೆಲೆನಿಯಂ ದೇಹದ ಆ್ಯಂಟಿಆಕ್ಸಿಡೆಂಟ್ ವ್ಯವಸ್ಥೆ ಮತ್ತು ಥೈರಾಯ್ಡ್ ಹಾರ್ಮೋನ್‌ಗಳ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




