ತಲೆಸುತ್ತು ಬರಲು ಕಾರಣಗಳು ಏನೇನು ಎಂದು ನೋಡಿದಾಗ ತಲೆಸುತ್ತು (Talesuttu) ಅನೇಕ ಕಾರಣಗಳಿಂದ ಬರಬಹುದು. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚು ಇಲ್ಲವೇ ಕಡಿಮೆ ಆಗುವುದರಿಂದ, ರಕ್ತದ ಒತ್ತಡ (ಬಿಪಿ) ಕಡಿಮೆ ಆಗುವುದರಿಂದ, ಮೈಗ್ರೇನ್ ಇದ್ದಲ್ಲಿ, ಬಿಸಿಲಿನಲ್ಲಿ ಹೆಚ್ಚು ತಿರುಗಾಡಿದಾಗ, ಉಪವಾಸವಿದ್ದಾಗ, ಮೆದುಳಿನಲ್ಲಿ ಗಡ್ಡೆ ಇದ್ದಲ್ಲಿ, ದೇಹದಲ್ಲಿ ನಿರ್ಜಲೀಕರಣವಾದಾಗ, ಕಿವಿಯಲ್ಲಿ ತೊಂದರೆಯಿದ್ದಲ್ಲಿ ಹೀಗೆ ಹಲವಾರು ಕಾರಣಗಳಿಂದ ʼತಲೆಸುತ್ತುʼ ಬರುತ್ತದೆ (Health). ತಲೆಸುತ್ತು ಸ್ವತಃ ಒಂದು ರೋಗವಾಗಿರದೆ ಇತರ ರೋಗಸ್ಥಿತಿಗಳಲ್ಲಿ ಸಹಕಾಲಿಕವಾಗಿಯೋ, ಪ್ರಾಸಂಗಿಕವಾಗಿಯೋ ಕಂಡುಬರುವ ಒಂದು ಅನ್ವರ್ಥವಾದ ದೈಹಿಕ ಬಾಧೆ ಲಕ್ಷಣವಾಗಿದೆ (Giddiness).
ಕಿವಿ ರೋಗಗಳಲ್ಲಿ ತಲೆಸುತ್ತು:
ಒಳಕಿವಿಯ ಉರಿಯೂತ ತಲೆಸುತ್ತಿನ ಒಂದು ಸಾಮಾನ್ಯ ಕಾರಣ. ಕೆಲವು ಔಷಧಗಳ ಸೇವನೆಯಿಂದ ಮತ್ತು ನಡುಕಿವಿಯ ಹಾಗೂ ದೀರ್ಘಕಾಲಿಕ ಉರಿಯೂತಗಳಿಂದ ಒಳಕಿವಿಯ ಉರಿಯೂತ ಉಂಟಾಗಬಹುದು. ತಲೆಗೆ ತೀವ್ರ ಪೆಟ್ಟು ಬಿದ್ದರೆ ಒಳಕಿವಿಯೊಳಗೆ ರಕ್ತಸ್ರಾವ ಕಡಿಮೆಯಾಗಿಯೊ ಹೆಚ್ಚಾಗಿಯೋ ಉಂಟಾಗಿ ಅದರಿಂದ ತಲೆಸುತ್ತು ಕಂಡುಬರಬಹುದು. ಯೂಸ್ಟೇಚಿಯನ್ ನಾಳ ಅಥವಾ ಹೊರಗಿವಿನಾಳ ಇವುಗಳಲ್ಲಿ ಏನಾದರೂ ಅಡಚಣೆ ಉಂಟಾಗಿದ್ದರೂ ತಲೆಸುತ್ತಬಹುದು. ಹಾಗೆಯೇ ಮೂಗಿಗೆ ಸಂಬಂಧಿಸಿದ (ನೇಸಲ್ ಸೈನಸಸ್) ಮತ್ತು ಮೂಗಿನ ಧಮನಿಗಳ ರೋಗ ಸ್ಥಿತಿಗಳೂ ತಲೆಸುತ್ತಿಗೆ ಕಾರಣವಾಗಬಹುದು. ಮೆನಿಯೆರನ ರೋಗ ಎಂಬುದು ಒಳಕಿವಿಗೆ ಸಂಬಂಧಿಸಿದಂತೆ ತಲೆಸುತ್ತನ್ನು ಉಂಟುಮಾಡುವ ಒಂದು ವಿಶೇಷ ಪರಿಸ್ಥಿತಿ. ಇದರಲ್ಲಿ ಪದೇ ಪದೇ ತಲೆಸುತ್ತು ಕಿವಿ ಗುಂಯ್‌ಗುಡುವುದು ಮತ್ತು ಕಿವಿ ಕೇಳಿಸದೆ ಇರುವುದು ವಿಶಿಷ್ಟ ಲಕ್ಷಣಗಳು.
ಕಣ್ಣಿನ ರೋಗಗಳಲ್ಲಿ ತಲೆಸುತ್ತು:
ಕಣ್ಣಿನ ರೋಗಗಳಲ್ಲಿ ತಲೆಸುತ್ತು ಸ್ವಲ್ಪ ತೊಂದರೆಯನ್ನು ಉಂಟುಮಾಡುತ್ತದೆ. ಕನ್ನಡಕವನ್ನು ಅದರಲ್ಲಿಯೂ ಪ್ರಬಲ ಪೀನಮಸೂರವಿರುವ ಕನ್ನಡಕವನ್ನು ಮೊದಲ ಬಾರಿಗೆ ಉಪಯೋಗಿಸುವವರಲ್ಲಿ ತಲೆಸುತ್ತು ಬರುವುದು ಸಾಮಾನ್ಯ. ರೈಲು ಬಸ್ಸುಗಳಲ್ಲಿ ಸಂಚಾರ ಮಾಡುವಾಗ ಅನೇಕರಿಗೆ ತಲೆಸುತ್ತುವುದು ತಿಳಿದ ವಿಷಯವೇ.
ಮಿದುಳಿನ ಅನಾರೋಗ್ಯ ಸ್ಥಿತಿಗಳಲ್ಲಿ ತಲೆಸುತ್ತು:
ಧಮನಿಗಳ ಅನಾರೋಗ್ಯ, ಅಪಸ್ಮಾರದ ಮುನ್ಸೂಚನೆಯಾಗಿ ಇಲ್ಲವೇ ಮೈಗ್ರೇನ್ ಎಂದು ಒಂದು ವಿಶಿಷ್ಟ ತಲೆನೋವಿನಲ್ಲಿ ಹಿರಿಮಸ್ತಿಷ್ಕಕ್ಕೆ ಸಂಬಂಧಪಟ್ಟಂತೆ ತಲೆಸುತ್ತು ಕಂಡುಬರುತ್ತದೆ. ಕಿರಿಮಸ್ತಿಷ್ಕ (ಸೆರಿಬೆಲ್ಲಮ್)ಕ್ಕೆ ಪೂರೈಕೆ ಆಗುವ ಅಪಧಮನಿಯಲ್ಲಿ ಅಡಚಣೆ ಉಂಟಾದಾಗ ತಲೆಸುತ್ತು ಉಂಟಾಗಬಹುದು. ಸಿಫಿಲಿಸ್ ಮುಂತಾದವುಗಳಿಂದ ಶಿರೋನರದ ಬಾಧೆಯಾದಾಗಲೂ ಮಿದುಳಿನಲ್ಲಿ ಅದರ ಉಗಮಸ್ಥಾನದಲ್ಲಿ ಹಾಗೂ ಅದರ ನೆರೆಯಲ್ಲಿ ಧಮನಿಗಳು ಅನಾರೋಗ್ಯವಾಗಿದ್ದಾಗಲೂ ತಲೆಸುತ್ತು ಸಾಮಾನ್ಯ.
ನಿರ್ಜಲೀಕರಣ:
ನಿರ್ಜಲೀಕರಣ ಸಹ ತಲೆ ತಿರುಗುವಿಕೆಗೆ ಕಾರಣವಾಗುತ್ತದೆ. ಅಂದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಆಗುವುದು. ನಮ್ಮ ದೇಹದಲ್ಲಿ ಬಹುಪಾಲು ನೀರಿದೆ. ನೀರಿನ ಪ್ರಮಾಣ ಕಡಿಮೆ ಆದರೆ ತೊಂದರೆ. ಆದ್ದರಿಂದ ಬಿಸಿಲಿನಲ್ಲಿ ಎಲ್ಲೇ ಹೋಗುವುದಿದ್ದರೂ ಒಂದು ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗುವುದು ಒಳಿತು. ಯಾವಾಗಲೂ ಅಗತ್ಯ ಪ್ರಮಾಣದಷ್ಟು ನೀರನ್ನು ಸೇವಿಸುತ್ತಾ ಇರಬೇಕು. ಕೆಲಸ ಮಾಡುವಾಗ ಬಿಡುವು ಮಾಡಿಕೊಂಡು ನೀರು ಕುಡಿಯಿರಿ. ಜೊತೆಗೆ ಆರೋಗ್ಯಕರವಾದ ಜೀವನ ಶೈಲಿಯನ್ನು ಅನುಸರಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ