
ಆಕಸ್ಮಿಕ ಅಪಘಾತ (Accidents) ಅಥವಾ ಗಾಯವಾದಂತಹ ಸಂದರ್ಭದ ಕೆಲವು ನಿಮಿಷಗಳು ರೋಗಿಯ ಬದುಕಿನಲ್ಲಿ ಬಹಳ ಮಹತ್ವದ ಕ್ಷಣಗಳಾಗಿರುತ್ತದೆ. ಬದುಕಬಹುದು ಅಥವಾ ಚೇತರಿಸಿಕೊಳ್ಳಬಹುದು ಅಥವಾ ಕೆಲವು ಸಂದರ್ಭಗಳಲ್ಲಿ ವ್ಯಕ್ತಿ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೂ ಒಳಗಾಗಬಹುದು ಹಾಗಾಗಿ ಈ ಸಮಯ ಬಹಳ ಮುಖ್ಯವಾಗುತ್ತದೆ. ಒಂದು ರೀತಿಯಲ್ಲಿ ಆ ಸಮಯ ವ್ಯಕ್ತಿ ಬದುಕನ್ನೇ ಬದಲಿಸಬಹುದು. ಅದಕ್ಕಾಗಿಯೇ ಆಘಾತದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅಪಘಾತವನ್ನು ತಡೆಗಟ್ಟುವ ಕ್ರಮಗಳನ್ನು ಉತ್ತೇಜಿಸುವುದಕ್ಕಾಗಿ ಜೊತೆಗೆ ಒಬ್ಬ ವ್ಯಕ್ತಿಯ ಜೀವ ಉಳಿಸಲು ಗೋಲ್ಡನ್ ಅವರ್ ಮಹತ್ವವನ್ನು ತಿಳಿಸುವುದಕ್ಕಾಗಿ ಪ್ರತಿ ವರ್ಷ ಅಕ್ಟೋಬರ್ 17ರಂದು ವಿಶ್ವ ಆಘಾತ ದಿನವನ್ನು (World Trauma Day) ಆಚರಿಸಲಾಗುತ್ತಿದ್ದು, ಆಘಾತದ ತೀವ್ರತೆ ಹೇಗಿರುತ್ತದೆ? ತುರ್ತು ಚಿಕಿತ್ಸೆ ನಂತರದ ಹಂತವೇನು ಎಂಬ ಬಗ್ಗೆ ಬೆಂಗಳೂರು ನಾರಾಯಣ ಹೆಲ್ತ್ ಸಿಟಿ ತುರ್ತು ಚಿಕಿತ್ಸಾ ವಿಭಾಗದ ಕ್ಲಿನಿಕಲ್ ಲೀಡ್ ಮತ್ತು ಕನ್ಸಲ್ಟೆಂಟ್ ಡಾ. ವಿ. ವಿಜು ವಿಲ್ಬೆನ್ (Viju Wilben) ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.
ಡಾ. ವಿ. ವಿಜು ವಿಲ್ಬೆನ್ ತಿಳಿಸಿರುವ ಮಾಹಿತಿ ಪ್ರಕಾರ, ಅಪಘಾತ ಸಮಯದಲ್ಲಿನ ಆರೈಕೆ ಎಂದರೆ ಕೇವಲ ಎದುರು ಕಾಣಿಸುವ ಗಾಯಗಳಿಗೆ ಮಾತ್ರ ಚಿಕಿತ್ಸೆ ನೀಡುವುದಲ್ಲ, ಬದಲಿಗೆ ಇದು ತುರ್ತು ವೈದ್ಯಕೀಯ ಪರಿಸ್ಥಿತಿಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡುವ ಕ್ರಮವಾಗಿದೆ. ದೇಹದ ಹೊರಭಾಗದಲ್ಲಿ ಗಾಯಗಳು ಸ್ಪಷ್ಟವಾಗಿ ಕಾಣಿಸಿದರೂ, ಒಳಗಿನ ರಕ್ತಸ್ರಾವ, ಅಂಗಗಳ ಹಾನಿ ಅಥವಾ ಮೂಲಭೂತ ಕಾರ್ಯಗಳಿಗೆ ತೊಂದರೆಯಾಗುವಂತಹ ಸಮಸ್ಯೆಗಳು ಆರಂಭದಲ್ಲಿ ತಿಳಿಯದೇ ಹೊಗಬಹುದು. ಆಕಸ್ಮಿಕ ಸಂದರ್ಭಗಳಲ್ಲಿ ತಕ್ಷಣದ ನಿರ್ಧಾರಗಳು ಮತ್ತು ಸಮಯೋಚಿತ ವೈದ್ಯಕೀಯ ನೆರವು ಪ್ರಯೋಜನ ಒದಗಿಸುವುದು ಮಾತ್ರವಲ್ಲ, ಈ ನೆರವಿನಿಂದ ಜೀವ ಉಳಿಯುತ್ತವೆ. ತಡವಾಗುವ ಪ್ರತೀ ನಿಮಿಷವೂ ಜೀವಕ್ಕೆ ತೊಂದರೆಯಾಗಬಹುದು. ಆದರೆ ಸಮಯೋಚಿತ ವೈದ್ಯಕೀಯ ನೆರವು ತೊಡಕುಗಳನ್ನು ತಡೆಗಟ್ಟಬಹುದು ಮತ್ತು ರೋಗಿಗಳಿಗೆ ಮತ್ತೊಂದು ಬದುಕಿನ ಅವಕಾಶವನ್ನು ನೀಡಬಹುದು. ಅದಕ್ಕೆ ತಕ್ಕಂತೆ ಆಸ್ಪತ್ರೆಗಳು ಕೂಡ ತಮ್ಮ ಟ್ರಾಮಾ ಕೇರ್ ಅಥವಾ ಅಪಘಾತ ಆರೈಕೆ ತಂಡಗಳಿಗೆ ಅಗತ್ಯವಾದ ಪರಿಣತಿಯನ್ನು, ಆಧುನಿಕ ಉಪಕರಣಗಳನ್ನು ಮತ್ತು ತ್ವರಿತ ಚಿಕಿತ್ಸೆ ವ್ಯವಸ್ಥೆಗಳನ್ನು ಒದಗಿಸಲು ಬದ್ಧವಾಗಿದೆ ಎಂದಿದ್ದಾರೆ.
ಆಘಾತವೆಂದರೆ ರಸ್ತೆ ಅಪಘಾತಗಳು, ಬೀಳುವುದು, ಸುಡುವುದು, ಕಾರ್ಖಾನೆ ಅಪಘಾತಗಳು, ಕ್ರೀಡೆ ಅಥವಾ ಆಟಗಳಲ್ಲಿ ಗಾಯವಾಗುವುದು ಅಥವಾ ಹಿಂಸಾತ್ಮಕ ದಾಳಿಗಳಂತಹ ಬಾಹ್ಯ ಕಾರಣಗಳಿಂದ ದೇಹಕ್ಕೆ ಉಂಟಾಗುವ ಗಂಭೀರ ಹಾನಿಯಾಗಿದೆ. ಈ ಗಾಯಗಳು ಮೂಳೆಗಳು, ಒಳಾಂಗಗಳು, ಮೆದುಳು ಅಥವಾ ಬೆನ್ನುಹುರಿಯಂತಹ ದೇಹದ ಯಾವುದೇ ಭಾಗವನ್ನು ಊನ ಮಾಡಿರಬಹುದು. ಬಾಹ್ಯ ಗಾಯ ಮತ್ತು ರಕ್ತಸ್ರಾವ ಕಣ್ಣಿಗೆ ಗೋಚರಿಸಬಹುದಾದರೂ ಕೆಲವು ಗಾಯಗಳು ದೇಹದ ಒಳಗೆ ಕಾಣದಂತಿರುತ್ತವೆ. ಹಾಗಾಗಿ ಅಪಘಾತದ ಪ್ರಮಾಣವನ್ನು ತಕ್ಷಣವೇ ಅಂದಾಜಿಸುವುದು ಕಷ್ಟವಾಗಬಹುದು. ಒಂದು ಅಪಘಾತ ಅಥವಾ ಬಿದ್ದ ನಂತರ ವ್ಯಕ್ತಿ ಆರಾಮವಾಗಿರುವಂತೆ ಕಾಣಬಹುದು, ಆದರೆ ಒಳಗಿನ ರಕ್ತಸ್ರಾವ, ಗಾಯ ಅಥವಾ ತಲೆಗೆ ಪೆಟ್ಟಾಗಿರುವುದು ಕಾಣುವುದಿಲ್ಲ. ಆದ್ದರಿಂದ, ಇಂತಹ ಘಟನೆಯ ನಂತರ ತಕ್ಷಣವೇ ವೈದ್ಯರಿಂದ ಪರೀಕ್ಷೆ ಮಾಡಿಸುವುದು ಮುಖ್ಯ.
ಅಪಘಾತದ ನಂತರ ಚಿಕಿತ್ಸೆ ಬಹಳ ಮಹತ್ವದ್ದು. ಅದಕ್ಕಾಗಿಯೇ ಅಪಘಾತದ ನಂತರದ 60 ನಿಮಿಷಗಳನ್ನು “ಗೋಲ್ಡನ್ ಅವರ್” ಎಂದು ಕರೆಯುತ್ತಾರೆ. ಈ ಅವಧಿ ಬಹಳ ಮುಖ್ಯವಾದದ್ದು. ಈ ಸಮಯದಲ್ಲಿ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಹಲವಾರು ತೊಡಕುಗಳನ್ನು ತಡೆಗಟ್ಟಬಹುದು, ರಕ್ತಸ್ರಾವವನ್ನು ಕಡಿಮೆ ಮಾಡಬಹುದು ಮತ್ತು ಒಳಾಂಗಗಳು ವೈಫಲ್ಯಕ್ಕೊಳಗಾಗುವುದರಿಂದ ರಕ್ಷಿಸಬಹುದು. ವಿಳಂಬ ಮಾಡಿದರೆ ಜೀವಕ್ಕೆ ಕುತ್ತು ತರಬಹುದು. ಮಾತ್ರವಲ್ಲ, ನಿಯಂತ್ರಣಕ್ಕೆ ಬಾರದ ರಕ್ತಸ್ರಾವ, ತಲೆಗೆ ಪೆಟ್ಟು ಅಥವಾ ಉಸಿರಾಟ ಸಮಸ್ಯೆ ಉಂಟಾದಲ್ಲಿ ಕೆಲವೇ ನಿಮಿಷಗಳಲ್ಲಿ ಗಂಭೀರ ಹಾನಿ ಉಂಟಾಗಬಹುದು.
ಸಾಮಾನ್ಯವಾಗಿ ಅಪಘಾತ ಉಂಟಾದಾಗ ಆಂಬುಲೆನ್ಸ್ ಗಳು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಅವರ ಆರೋಗ್ಯ ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತವೆ. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ತಂಡಗಳಿರುತ್ತವೆ. ಮಾತ್ರವಲ್ಲ ಸಮರ್ಥ ಆಯೋಜಿತ ಆಘಾತ ಚಿಕಿತ್ಸಾ ಕೇಂದ್ರದಲ್ಲಿ, ವೈದ್ಯರು, ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕರು, ನರವಿಜ್ಞಾನಿಗಳು ಮತ್ತು ಅರಿವಳಿಕೆ ತಜ್ಞರನ್ನು ಒಳಗೊಂಡ ತುರ್ತು ವೈದ್ಯಕೀಯ ತಂಡಗಳು ಕಾರ್ಯ ನಿರ್ವಹಿಸುತ್ತವೆ. ಇವರೆಲ್ಲರೂ ಜೀವ ಉಳಿಸಲು ತ್ವರಿತವಾಗಿ ಕಾರ್ಯಪ್ರವೃತ್ತರಾಗುತ್ತವೆ. ರೋಗಿ ಆಸ್ಪತ್ರೆಗೆ ಬಂದ ಮೇಲೆ, ಯಾವ ರೀತಿಯ ಗಾಯಗಳಿಗೆ ತಕ್ಷಣ ಚಿಕಿತ್ಸೆ ಅಗತ್ಯವೆಂದು ನಿರ್ಧರಿಸಲು ಮುಂದಾಗುತ್ತಾರೆ. ಸಿಟಿ ಸ್ಕ್ಯಾನ್ ಗಳು ಮತ್ತು ಎಕ್ಸ್- ರೇಗಳಂತಹ ಇಮೇಜಿಂಗ್ ಪರೀಕ್ಷೆಗಳನ್ನು ತಕ್ಷಣವೇ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ಅಗತ್ಯವಾದರೆ ಶಸ್ತ್ರಚಿಕಿತ್ಸಕರು ಸಿದ್ಧವಾಗಿರುತ್ತಾರೆ. ಈ ಸಿದ್ಧತೆಯು ಜೀವನ ಮತ್ತು ಜೀವನಪೂರ್ತಿ ಎದುರಿಸಬಹುದಾದ ಅಂಗವೈಕಲ್ಯವನ್ನು ತಡೆಯಬಹುದು.
ಇದನ್ನೂ ಓದಿ: ಕರ್ನಾಟಕದ 41,000 ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ: ಸಮೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ
ಅಪಘಾತದ ನಂತರದ ಮೊದಲ ಕೆಲವು ಗಂಟೆಗಳಲ್ಲಿ ರೋಗಿಯ ಜೀವ ಉಳಿಸುವುದಕ್ಕೆ ಹೋರಾಟ ನಡೆಯುತ್ತದೆ. ಅವರ ಚೇತರಿಕೆಯು ನಿಧಾನವಾಗಬಹುದು. ಅದರಲ್ಲೂ ವಿಶೇಷವಾಗಿ ಬೆನ್ನುಹುರಿ ಅಥವಾ ತಲೆಗೆ ಗಂಭೀರ ಪೆಟ್ಟಾಗಿದ್ದರೆ ಈ ಸಮಯದ ಚಿಕಿತ್ಸೆ ಬಹಳ ಮುಖ್ಯ ಪಾತ್ರವಹಿಸುತ್ತದೆ. ಈ ಅವಧಿಯಲ್ಲಿ ಕುಟುಂಬದವರು ಜೊತೆಗಿರುವುದು ಬಹಳ ಮುಖ್ಯವಾಗಿದೆ.
ಆಸ್ಪತ್ರೆಗಳು ಅಪಘಾತ ಚಿಕಿತ್ಸೆಗೆ ಸದಾ ಸಿದ್ಧವಾಗಿರುತ್ತವೆ. ಆದರೆ ಅಪಘಾತಕ್ಕೆ ಒಳಗಾಗಿದ್ದನ್ನು ಮೊದಲು ನೋಡುವವರ ಪ್ರತಿಕ್ರಿಯೆ ಇಲ್ಲಿ ಬಹಳ ಮುಖ್ಯವಾಗುತ್ತದೆ. ಅವರು ಹೇಗೆ ವರ್ತಿಸುತ್ತಾರೆ ಅನ್ನುವುದರಿಂದ ರೋಗಿಯ ಬದುಕು ನಿರ್ಧಾರವಾಗುತ್ತದೆ. ಭಯದಿಂದ ಹೆಚ್ಚಿನ ಜನರು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಾರೆ. ಅಂಥವರಿಗೆ ಅರಿವು ಮೂಡಿಸಬೇಕು. ಅದರಲ್ಲೂ ಪ್ರಥಮ ಚಿಕಿತ್ಸೆ, ಸಿಪಿಆರ್ ಮತ್ತು ರಕ್ತಸ್ರಾವವನ್ನು ನಿರ್ವಹಿಸುವ ವಿಧಾನವನ್ನು ತಿಳಿದಿರುವುದರಿಂದ ಎಷ್ಟೋ ಜೀವಗಳನ್ನು ಉಳಿಸಬಹುದು. ಮಾತ್ರವಲ್ಲ ಈ ರೀತಿ ಮಾಡುವುದರಿಂದ ಭಾರತದಲ್ಲಿ ಬಹಳಷ್ಟು ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ ಆಸ್ಪತ್ರೆಗಳು ತಮ್ಮ ಅಪಘಾತ ಚಿಕಿತ್ಸಾ ಕೇಂದ್ರಗಳನ್ನು ಸುಧಾರಿಸಬೇಕು. ವಿಶೇಷ ಘಟಕಗಳು ದಿನದ 24 ಗಂಟೆಯೂ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಜಿಪಿಎಸ್ ತಂತ್ರಜ್ಞಾನ, ದೃಢವಾದ ಸಂವಹನ ವ್ಯವಸ್ಥೆಗಳು, ಮತ್ತು ಸಾಕಷ್ಟು ತರಬೇತಿ ಪಡೆದ ಪ್ಯಾರಾಮೆಡಿಕ್ ಗಳು ಲಭ್ಯವಿರುವ ಸುಸಜ್ಜಿತವಾದ ಆಂಬುಲೆನ್ಸ್ ಸೇವೆ ಹೊಂದಿರಬೇಕು. ಶಾಲೆಗಳು ಮತ್ತು ಕಾಲೇಜುಗಳು ತಮ್ಮ ಪಠ್ಯಕ್ರಮದ ಭಾಗವಾಗಿ ಮೂಲಭೂತ ಜೀವ-ರಕ್ಷಕ ಶಿಕ್ಷಣವನ್ನು ನೀಡುವುದಕ್ಕೆ ಮುಂದಾಗಬೇಕು. ಅದರಿಂದ ಸಾಕಷ್ಟು ಪ್ರಾಣ ಹಾನಿ ತಡೆಯಬಹುದು. ಅಪಘಾತ ತಡೆಗಟ್ಟುವಿಕೆ ಮತ್ತು ಪ್ರಥಮ ಚಿಕಿತ್ಸೆಯ ಕುರಿತು ಜಾಗೃತಿ ಬಹಳ ಮುಖ್ಯ. ಅಪಘಾತ ಚಿಕಿತ್ಸಾ ಸಿದ್ಧತೆಯ ಜವಾಬ್ದಾರಿಯು ಕೇವಲ ವೈದ್ಯಕೀಯ ಸಿಬ್ಬಂದಿಗಳಿಗೆ ಮಾತ್ರ ಇರುವುದಲ್ಲ, ಬದಲಿಗೆ ಭಾರತೀಯ ಪ್ರಜೆಗಳಿಗೂ ಇದೆ. ಅಪಘಾತ ಎದುರಾದ ತಕ್ಷಣ ಪ್ರತಿಕ್ರಿಯಿಸುವುದು ಬಹಳ ಮುಖ್ಯ, ಯಾಕೆಂದರೆ ಪ್ರತಿ ಕ್ಷಣವೂ ಅಮೂಲ್ಯ. ಆ ಕ್ಷಣ ಜೀವ ಉಳಿಯುವುದಕ್ಕೆ ಕಾರಣಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ