AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ 41,000 ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ: ಸಮೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ

ಕರ್ನಾಟಕದಲ್ಲಿ 41,000ಕ್ಕೂ ಹೆಚ್ಚು ಮಕ್ಕಳು ಜನ್ಮಜಾತ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಇತ್ತೀಚಿನ ಅಧ್ಯಯನಗಳು ಬಹಿರಂಗಪಡಿಸಿವೆ. ಅರ್ಧದಷ್ಟು ಮಕ್ಕಳಿಗೆ ಮಾತ್ರ ಚಿಕಿತ್ಸೆ ದೊರೆತಿರುವುದು ಆತಂಕಕಾರಿ ಸಂಗತಿ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ರೋಗ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಇಂಥ ಸಮಸ್ಯೆಗಳ ಸಂದರ್ಭದಲ್ಲಿ ಉಚಿತವಾಗಿ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ.

ಕರ್ನಾಟಕದ 41,000 ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ: ಸಮೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ
ಜನ್ಮಜಾತ ಹೃದಯ ಕಾಯಿಲೆ (ಸಾಂದರ್ಭಿಕ ಚಿತ್ರ)
Ganapathi Sharma
|

Updated on: Sep 22, 2025 | 2:27 PM

Share

ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕದಲ್ಲಿ (Karnataka) 41,000 ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆಗಳು (Congenital Heart Diseases) ಇರುವುದು ಕಳೆದ ಮೂರು ವರ್ಷಗಳಲ್ಲಿ ನಡೆಸಿದ ತಪಾಸಣೆಗಳಿಂದ ತಿಳಿದುಬಂದಿದೆ. ಈ ಪೈಕಿ ಅರ್ಧದಷ್ಟು ಮಂದಿಗೆ ಮಾತ್ರವೇ ಸೂಕ್ತ ಚಿಕಿತ್ಸೆ ದೊರೆತಿದೆ ಎಂಬುದೂ ಗೊತ್ತಾಗಿದೆ. ರಾಜ್ಯದ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚೆಚ್ಚು ಕಂಡುಬರುತ್ತಿರುವ ಸಂದರ್ಭದಲ್ಲೇ ಈ ಆಘಾತಕಾರಿ ಮಾಹಿತಿ ಕೂಡ ಹೊರಬಿದ್ದಿದೆ. ಹುಟ್ಟಿನಿಂದಲೇ ಹೃದಯ ರೋಗಗಳನ್ನು ಹೊಂದಿರುವ ಸುಮಾರು 20 ಸಾವಿರದಷ್ಟು ಮಕ್ಕಳಿಗೆ ಚಿಕಿತ್ಸೆ ದೊರೆಯದೇ ಇರುವುದು ಹೃದಯಾಘಾತದಂತಹ ಪ್ರಕರಣಗಳ ಆತಂಕ ಹೆಚ್ಚಿಸಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ (RBSK) ಅಡಿಯಲ್ಲಿ ತಪಾಸಣೆಗೆ ಒಳಪಡಿಸಿ ಜನ್ಮಜಾತ ಹೃದಯ ರೋಗಗಳ ಬಗ್ಗೆ ಪತ್ತೆಮಾಡಲಾಗುತ್ತದೆ.

ಜನ್ಮಜಾತ ಹೃದಯ ಕಾಯಿಲೆ ಎಂದರೇನು?

ಜನ್ಮಜಾತ ಹೃದಯ ರೋಗ ಅಥವಾ ಕಾಯಿಲೆ ಎಂದರೆ ಜನಿಸುವ ಸಂದರ್ಭದಲ್ಲೇ ಹೃದಯ ಸಮಸ್ಯೆ ಇರುವ ಸ್ಥಿತಿಯಾಗಿದೆ. ಇಲ್ಲಿ, ಭ್ರೂಣದಲ್ಲಿದ್ದಾಗಲೇ ಶಿಶುವಿನ ಹೃದಯದಲ್ಲಿ ಬೆಳವಣಿಗೆ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡು ಹುಟ್ಟಿನ ನಂತರವೂ ಹಾಗೆಯೇ ಮುಂದುವರಿಯುತ್ತದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಕರ್ನಾಟಕದಲ್ಲಿ ಈ ಬಗ್ಗೆ ಪತ್ತೆಹಚ್ಚಲಾಗುತ್ತದೆ. ರೋಗನಿರ್ಣಯ ಮಾಡಿದ ನಂತರ, ಬಾಧಿತ ಮಕ್ಕಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯ ಮೂಲಕ ಉಚಿತವಾಗಿ ಚಿಕಿತ್ಸೆ ನೀಡುವ ವಿಶೇಷ ಆಸ್ಪತ್ರೆಗಳಿಗೆ ತೆರಳುವಂತೆ ಶಿಫಾರಸು ಮಾಡಲಾಗುತ್ತದೆ.

ಪ್ರತಿ ಮಗುವನ್ನು ನಿಯಮಿತವಾಗಿ ಪತ್ತೆಹಚ್ಚುವುದು ಮತ್ತು ಅನುಸರಿಸುವುದು ಇಲ್ಲಿನ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಒಪ್ಪಿಕೊಂಡಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ಹೆಚ್ಚಿನ ಯುವ ರೋಗಿಗಳು, ಅವರ ಕುಟುಂಬಗಳು ಒಂದು ಬಾರಿ ಚಿಕಿತ್ಸಗೆ ಬಂದುಹೋದ ನಂತರ ಸಮಾಲೋಚನೆ ಬರುತ್ತಿಲ್ಲ. ಅಗತ್ಯ ದಾಖಲೆಗಳನ್ನೂ ನಿರ್ವಹಿಸುತ್ತಿಲ್ಲ. ಇದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನ್ಮಜಾತ ಹೃದಯ ಕಾಯಿಲೆ: ಸೂಕ್ತ ಚಿಕಿತ್ಸೆಗೆ ಜನರು ಮಾಡಬೇಕಾದ್ದೇನು?

ಶಿಶು ಗರ್ಭದಲ್ಲಿರುವಾಗಲೇ ನಿಯಮಿತ ಸ್ಕ್ಯಾನಿಂಗ್​ ಮಾಡುವ ಮೂಲಕ ಅನೇಕ ಜನ್ಮಜಾತ ಹೃದಯ ಸಮಸ್ಯೆಗಳನ್ನು ಪತ್ತೆಹಚ್ಚಬಹುದು. ಆದಾಗ್ಯೂ, ಜನನದ ನಂತರ ಆ ದಾಖಲೆಗಳನ್ನು ನಿರ್ವಹಿಸದೇ ಇದ್ದರೆ ಸಮಸ್ಯೆ ಆಗುತ್ತದೆ. ಹೀಗಾಗಿ ಸ್ಕ್ಯಾನಿಂಗ್​ಗಳ ವೇಳೆ ಅಸಹಜತೆ ಕಂಡುಬಂದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಲಾಖೆಯ ಕಾರ್ಯಕ್ರಮಗಳ ದತ್ತಾಂಶಗಳ ಜತೆ ಸೇರಿಸುವಂತೆ ಸೂಚಿಸುತ್ತಿದ್ದೇವೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ ಮಾಹಿತಿ ನೀಡಿದ್ದಾರೆ. ಈ ರೀತಿಯ ವ್ಯವಸ್ಥೆಯಿಂದ ನವಜಾತ ಶಿಶುಗಳನ್ನು ಗಮನಿಸುವುದು ಸುಲಭವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಜನ್ಮಜಾತ ಹೃದಯ ಕಾಯಿಲೆ: ಆರಂಭದಲ್ಲೇ ಪತ್ತೆಯಾದರೆ ಸಂಪೂರ್ಣ ಗುಣವಾಗಬಹುದು

ಆರಂಭದಲ್ಲೇ ಸಮಸ್ಯೆ ಪತ್ತೆಯಾದರೆ ಅಂಥವರ ಜೀವನವನ್ನು ಬದಲಾಯಿಸಬಹುದು ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜನ್ಮಜಾತ ಹೃದಯ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ ತಕ್ಷಣ ಚಿಕಿತ್ಸೆ ನೀಡಿದಾಗ, ಮಕ್ಕಳು ಸಾಮಾನ್ಯ ಜೀವನ ನಡೆಸಬಹುದಾಗಿದೆ ಎಂದು ಬೆಂಗಳೂರು ಮೂಲದ ವೈದ್ಯರೊಬ್ಬರು ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಹೃದಯಾಘಾತಕ್ಕೆ ಇದು ಕಾರಣ: ತಜ್ಞರ ವರದಿಯಲ್ಲಿ ಆತಂಕಕಾರಿ ಅಂಶ ಬಯಲು

ತಾಯಿಯ ಆರೈಕೆ, ಮಕ್ಕಳ ಅನುಸರಣೆ ಮತ್ತು ಸರ್ಕಾರ ಹಮ್ಮಿಕೊಂಡಿರುವ ಆರೋಗ್ಯ ಕಾರ್ಯಕ್ರಮಗಳ ಮಧ್ಯೆ ಸಮನ್ವಯ ಸಾಧಿಸಿ ಸಮಸ್ಯೆ ತಡೆಗಟ್ಟಬಹುದಾಗಿದೆ. ದಾಖಲೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ಜನ್ಮಜಾತ ಹೃದಯ ಕಾಯಿಲೆಯಿಂದ ಬಳಲುತ್ತಿರುವ ಸಾವಿರಾರು ಮಕ್ಕಳ ಜೀವನದ ಗುಣಮಟ್ಟವನ್ನೂ ಸುಧಾರಿಸಬಹುದಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ