Green Fungus: ಗ್ರೀನ್​ ಫಂಗಸ್ ಲಕ್ಷಣಗಳೇನು? ಸೋಂಕು ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ

| Updated By: Skanda

Updated on: Jun 17, 2021 | 1:27 PM

ಗ್ರೀನ್​ ಫಂಗಸ್​ ಸೋಂಕಿನ ಸಾಧಾರಣ ಲಕ್ಷಣಗಳು ಇಂತಿವೆ: ಜ್ವರ, ಎದೆನೋವು, ಕಫ, ಕಫದೊಂದಿಗೆ ರಕ್ತ ಬರುವುದು, ಉಸಿರಾಟದ ಸಮಸ್ಯೆ ಮೊದಲ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಸಾಧಾರಣವಾಗಿ ಇತ್ತೀಚೆಗೆ ಕೊರೊನಾ ಅಥವಾ ಇನ್ಯಾವುದೇ ಉಸಿರಾಟದ ಸಮಸ್ಯೆಗಳಿಗೆ ಒಳಗಾಗಿ ಶ್ವಾಸಕೋಶದ ಸಮಸ್ಯೆ ಎದುರಿಸಿದವರನ್ನು ಈ ಸೋಂಕು ಹೆಚ್ಚು ಭಾದಿಸುತ್ತದೆ.

Green Fungus: ಗ್ರೀನ್​ ಫಂಗಸ್ ಲಕ್ಷಣಗಳೇನು? ಸೋಂಕು ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ
ಗ್ರೀನ್ ಫಂಗಸ್
Follow us on

ಭೋಪಾಲ್: ಕೊರೊನಾ ಎರಡನೇ ಅಲೆಯಿಂದ ದೇಶ ತತ್ತರಿಸುವಾಗಲೇ ಏಕಾಏಕಿ ಕಾಡಲಾರಂಭಿಸಿದ ಬ್ಲ್ಯಾಕ್​ ಫಂಗಸ್​ ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ನಂತರ ಅದರ ಬೆನ್ನಲ್ಲೇ ಕಾಣಿಸಿಕೊಂಡ ವೈಟ್​ ಫಂಗಸ್​ ಹಾಗೂ ಯೆಲ್ಲೋ ಫಂಗಸ್​ ಕೂಡಾ ಆತಂಕಕ್ಕೆ ಕಾರಣವಾಗಿವೆ. ಒಂದಾದ ಮೇಲೊಂದರಂತೆ ಕಾಡಲಾರಂಭಿಸಿದ ಈ ಫಂಗಸ್​ಗಳನ್ನು ನೋಡಿದ ಜನರು ಕಪ್ಪು, ಬಿಳಿ, ಹಳದಿ ಬಣ್ಣದ ಫಂಗಸ್​ ಕಾಣಿಸಿಕೊಂಡಾಯಿತು ಇನ್ನು ಯಾವ ಬಣ್ಣದ್ದು ಬರಲಿಕ್ಕಿದೆಯೋ ಎಂದು ಮಾತನಾಡಿಕೊಳ್ಳಲಾರಂಭಿಸಿದ್ದರು. ಇದೀಗ ಅದಕ್ಕೆ ಸರಿಯಾಗಿ ಇನ್ನೊಂದು ಹೊಸ ಬಣ್ಣದ ಫಂಗಸ್ ಮಧ್ಯಪ್ರದೇಶದಲ್ಲಿ ಪತ್ತೆಯಾಗಿದ್ದು, ಅದನ್ನು ಗ್ರೀನ್ ಫಂಗಸ್ ಎಂದು ಗುರುತಿಸಲಾಗಿದೆ.

ಮಧ್ಯಪ್ರದೇಶದ ಇಂದೋರ್​ನಲ್ಲಿ ಗ್ರೀನ್​ ಫಂಗಸ್ ಪ್ರಕರಣ ಪತ್ತೆಯಾಗಿದ್ದು, ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯೊಬ್ಬರಲ್ಲಿ ಇದು ಕಂಡುಬಂದಿದೆ. ಕೊವಿಡ್​ 19 ಸೋಂಕಿಗೆ ತುತ್ತಾಗಿ ಗುಣಮುಖರಾದ ವ್ಯಕ್ತಿಗೆ ಬ್ಲ್ಯಾಕ್​ ಫಂಗಸ್​ ಇರಬಹುದೆಂದು ಅನುಮಾನಿಸಿ ವೈದ್ಯರು ಕೆಲ ಚಿಕಿತ್ಸೆಗಳನ್ನು ಮಾಡಿಸಿದಾಗ ಅದು ಬ್ಲ್ಯಾಕ್​ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಅಲ್ಲ ಬದಲಾಗಿ ವ್ಯಕ್ತಿಗೆ ತಗುಲಿರುವುದು ಗ್ರೀನ್ ಫಂಗಸ್ ಎಂದು ಗೊತ್ತಾಗಿದೆ.

ಇದು ಭಾರತದಲ್ಲಿ ಮೊದಲ ಗ್ರೀನ್​ ಫಂಗಸ್ ಸೋಂಕು ಇರಬಹುದೆಂದು ಮಧ್ಯಪ್ರದೇಶದ ವೈದ್ಯರು ಹೇಳಿದ್ದಾರೆ. ಈ ಸೋಂಕಿನ ಬಗ್ಗೆ ಮಾತನಾಡಿರುವ ಶ್ರೀ ಅರೋಬಿಂದು ಇನ್​​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯ ಡಾ.ರವಿ ಡೋಸಿ, ಈ ಸೋಂಕು ಹಿಂದೆ ಬೇರೆ ಪ್ರಕರಣಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಗ್ರೀನ್​ಫಂಗಸ್ ಅಥವಾ ಆ್ಯಸ್ಪರ್​ಗಿಲ್ಲೋಸಿಸ್ ಎಂಬ ಈ ಸೋಂಕು ಆ್ಯಸ್ಪರ್​ಗಿಲ್ಲಸ್ ಎಂಬ ಅಪರೂಪದ ಫಂಗೈ ಇಂದ ಹರಡುತ್ತದೆ. ಇದು ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದಾಗಿದ್ದು, ಪ್ರತಿನಿತ್ಯ ಜನರು ಇದನ್ನು ಸಾಧಾರಣವಾಗಿ ಉಸಿರಾಟದ ಮೇಲಕ್ಕೆ ತೆಗೆದುಕೊಳ್ಳುತ್ತಿರುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಬ್ಲ್ಯಾಕ್​ ಫಂಗಸ್​, ವೈಟ್ ಫಂಗಸ್​, ಯೆಲ್ಲೋ ಫಂಗಸ್​ ಎಂದು ಒಂದೊಂದು ಬಣ್ಣಗಳ ಆಧಾರದಲ್ಲಿ ಗುರುತಿಸಲಾಗಿರುವ ಸೋಂಕಿಗೂ ಈಗ ಪತ್ತೆಯಾದ ಗ್ರೀನ್​ ಫಂಗಸ್​​ಗೂ ಸಾಕಷ್ಟು ಸಾಮ್ಯತೆ ಇದ್ದು ಇವೆಲ್ಲವೂ ಒಂದೇ ಕುಟುಂಬಕ್ಕೆ ಸೇರಿದ ಫಂಗೈನಿಂದ ಬಂದಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಗ್ರೀನ್​ ಫಂಗಸ್​ ಸೋಂಕಿನ ಲಕ್ಷಣಗಳೇನು?
ಯುಎಸ್​ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್​ ನೀಡಿರುವ ಮಾಹಿತಿ ಪ್ರಕಾರ ಗ್ರೀನ್​ ಫಂಗಸ್​ ಸೋಂಕಿನ ಸಾಧಾರಣ ಲಕ್ಷಣಗಳು ಇಂತಿವೆ: ಜ್ವರ, ಎದೆನೋವು, ಕಫ, ಕಫದೊಂದಿಗೆ ರಕ್ತ ಬರುವುದು, ಉಸಿರಾಟದ ಸಮಸ್ಯೆ ಮೊದಲ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಸಾಧಾರಣವಾಗಿ ಇತ್ತೀಚೆಗೆ ಕೊರೊನಾ ಅಥವಾ ಇನ್ಯಾವುದೇ ಉಸಿರಾಟದ ಸಮಸ್ಯೆಗಳಿಗೆ ಒಳಗಾಗಿ ಶ್ವಾಸಕೋಶದ ಸಮಸ್ಯೆ ಎದುರಿಸಿದವರನ್ನು ಈ ಸೋಂಕು ಹೆಚ್ಚು ಭಾದಿಸುತ್ತದೆ.

ಗ್ರೀನ್ ಫಂಗಸ್​ ಸೋಂಕು ತಡೆಗಟ್ಟುವುದು ಹೇಗೆ?
ಫಂಗಸ್​ನಿಂದ ಉಂಟಾಗುವ ಯಾವುದೇ ಸೋಂಕು ತಡೆಗಟ್ಟಲು ಸ್ವಚ್ಛತೆ ಬಹುಮುಖ್ಯ ಅಸ್ತ್ರ. ಹೀಗಾಗಿ ಸ್ವಚ್ಛತೆಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಕಣ್ಣು, ಮೂಗು, ಬಾಯಿ ಹಾಗೂ ದೈಹಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು

ಧೂಳು, ಕೊಳಚೆ ನೀರು ಇರುವಂತಹ ಪ್ರದೇಶಗಳಿಗೆ ಹೋಗದಿರುವುದು ಉತ್ತಮ. ಹೋಗಲೇಬೇಕಾಗಿ ಬಂದರೆ ಕಡ್ಡಾಯವಾಗಿ ಎನ್​95 ಮಾಸ್ಕ್ ಧರಿಸಬೇಕು

ಮಣ್ಣು ಹಾಗೂ ಧೂಳಿನ ಸಂಪರ್ಕಕ್ಕೆ ಬರುವ ಚಟುವಟಿಕೆಗಳಿಂದ ದೂರ ಉಳಿಯುವುದು ಒಳ್ಳೆಯದು

ಮುಖ ಹಾಗೂ ಕೈಗಳನ್ನು ಶುಭ್ರ ನೀರಿನಿಂದ ತೊಳೆಯಿರಿ. ಸಾಬೂನು ಬಳಸುತ್ತಿರಿ. ಹೊರಗೆ ಹೋಗಿಬಂದಾಗ ಮರೆಯದೇ ಸ್ವಚ್ಛಗೊಳಿಸಿಕೊಳ್ಳಿ

ಇದನ್ನೂ ಓದಿ:
ಕೊರೊನಾದಿಂದ ಗುಣಮುಖನಾದ ವ್ಯಕ್ತಿಯಲ್ಲಿ ಹಸಿರು ಫಂಗಸ್ ಪತ್ತೆ.. ಶುರುವಾಗಿದೆ ಬಣ್ಣ ಬಣ್ಣದ ಫಂಗಸ್​ಗಳ ಹಾವಳಿ